ಸೋಮವಾರ, ಅಕ್ಟೋಬರ್ 26, 2020
28 °C
18ನೇ ದಿನಕ್ಕೆ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು

ವೃದ್ಧ ದಂಪತಿಯ ದರೋಡೆ; ಐವರು ದರೋಡೆಕೋರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ವಿವೇಕಾನಂದ ವೃತ್ತದ ಸಮೀಪ ವಾಸವಿದ್ದ ವೃದ್ಧ ದಂಪತಿಯನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರ ಬಂಧಿಸಿದ್ದಾರೆ. ಬಂಧಿತರಿಂದ ₹ 12 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ದರೋಡೆ ನಡೆದ 18 ದಿನಗಳಲ್ಲೇ ಆರೋಪಿಗಳನ್ನು ಬಂಧಿಸಿರುವುದು ವಿಶೇಷ.

ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಡಾ.ಎ.ಎನ್.ಪ್ರಕಾಶಗೌಡ್‌, ‘ಆಗಸ್ಟ್ 29ರಂದು ಬೆಳಿಗ್ಗೆ ವಿವೇಕಾನಂದನಗರದಲ್ಲಿರುವ ಏಳನೇ ಕ್ರಾಸ್‌ನಲ್ಲಿ ವೀರಭದ್ರಯ್ಯ ಅವರ ಮನೆಗೆ ನುಗ್ಗಿದ ಆರೋಪಿಗಳು ಡ್ರ್ಯಾಗನ್‌ ತೋರಿಸಿ ಇರಿದು ಕೊಲೆ ಮಾಡುವುದಾಗಿ ಬೆದರಿಸಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಮಾಡಿದ್ದರು’ ಎಂದರು.

ಅಂಬೇಡ್ಕರ್ ನಗರದ ಜಬೀವುಲ್ಲಾ ಷರೀಫ್ (27), ಉದಯಗಿರಿಯ ಇಬ್ರಾಹಿಂ ಅಹಮದ್ (24), ಗೌಸಿಯಾನಗರದ ಖಾಸಿಫ್ (22), ಗಿರಿಯಾಭೋವಿಪಾಳ್ಯದ ಗವೀಗೌಡ (42), ವಿವೇಕಾನಂದನಗರದ ಬಿ.ಎಸ್.ಗಿರೀಶ್ (52) ಬಂಧಿತರು ಎಂದು ಹೇಳಿದರು.

ಪತ್ತೆಯಾಗಿದ್ದು ಹೇಗೆ?

ಆರೋಪಿಗಳು ಗಿರವಿ ಅಂಗಡಿಯೊಂದರಲ್ಲಿ ಕದ್ದ ಒಡವೆಗಳನ್ನು ಮಾರಾಟ ಮಾಡಲು ಹೋದಾಗ ಮಾಹಿತಿದಾರರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಒಟ್ಟು ಐವರು ತಂಡದಲ್ಲಿರುವುದು ಗೊತ್ತಾದ ನಂತರ ಪೊಲೀಸರು ಸ್ಥಳಕ್ಕೆ ಬಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಮಾಡಿರುವುದು ಗೊತ್ತಾಗಿದೆ.

ದರೋಡೆ ಮಾಡುವ ತಂಡಕ್ಕೆ ವೃದ್ಧ ದಂಪತಿ ಇಬ್ಬರೇ ಮನೆಯಲ್ಲಿರುವ ಕುರಿತು ಆರೋಪಿ ಗಿರೀಶ್ ಎಂಬಾತ ಮಾಹಿತಿ ನೀಡಿದ್ದ ಅಂಶ ವಿಚಾರಣೆ ವೇಳೆ ಬಯಲಾಗಿದೆ.

ಐಷಾರಾಮಿ ಜೀವನ: ಆರೋಪಿಗಳು ಐಷಾರಾಮಿ ಜೀವನ ನಡೆಸುವ ಪ್ರವೃತ್ತಿ ಹೊಂದಿದವರಾಗಿದ್ದರು. ಅದಕ್ಕಾಗಿಯೇ ಜಬೀವುಲ್ಲಾ ಎಂಬಾತ ತನ್ನ ಪಾಲಿಗೆ ಬಂದ ಚಿನ್ನವನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಮನೆಗೆ ಟಿ.ವಿ, ಪ್ರಿಡ್ಜ್‌, ಮಂಚ, ಸೋಫಾ, ವಾಷಿಂಗ್ ಮೆಷಿನ್‌ಗಳನ್ನು ತೆಗೆದುಕೊಂಡಿದ್ದ ಎಂದು ಡಿಸಿಪಿ ತಿಳಿಸಿದ್ದಾರೆ.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್.ಗೀತಾ, ಇನ್‌ಸ್ಪೆಕ್ಟರ್ ಪ್ರಸನ್ನಕುಮಾರ್, ಪಿಎಸ್‌ಐ ಎಸ್.ರಾಜು, ಎಎಸ್‌ಐ ಉದಯಕುಮಾರ್, ಸಿಬ್ಬಂದಿಯಾದ ಸೋಮಶೆಟ್ಟಿ, ವೇಣುಗೋಪಾಲ, ನಂದೀಶ್, ಪ್ರದೀಪ್, ಚಂದ್ರು,ವೀರೇಶ್ ಬಾಗೇವಾಡಿ, ನಾಗರಾಜು, ವಸಂತಕುಮಾರ್, ಚಂದ್ರು, ಪ್ರಕಾಶ್, ಧನಂಜಯ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು