ಶುಕ್ರವಾರ, ಆಗಸ್ಟ್ 7, 2020
28 °C
ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ

ಕರ್ತವ್ಯಕ್ಕೆ ಗೈರಾಗುವ ಮೂಲಕ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ರಾಜ್ಯದಾದ್ಯಂತ ಶುಕ್ರವಾರದಿಂದ ಆರಂಭವಾಗಿರುವ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲೆಯಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಲ್ಲಿರುವ 1,805 ಆಶಾ ಕಾರ್ಯಕರ್ತೆಯರ ಪೈಕಿ 881 ಮಂದಿ ಗೈರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಂಡರು.

ಪಿರಿಯಾಪಟ್ಟಣ, ಕೆ.ಆರ್.ನಗರ, ಎಚ್.ಡಿ.ಕೋಟೆ, ನಂಜನಗೂಡು ತಾಲ್ಲೂಕಿನ ಆಶಾ ಕಾರ್ಯಕರ್ತೆಯರ ಪೈಕಿ ಒಬ್ಬರೂ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಇನ್ನುಳಿದ ತಾಲ್ಲೂಕುಗಳಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿದೆ.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಅಡಿ ಗುರುತಿಸಿಕೊಂಡಿರುವ ಬಹುಪಾಲು ಆಶಾ ಕಾರ್ಯಕರ್ತೆಯರು ಕರ್ತವ್ಯಕ್ಕೆ ಗೈರಾಗಿದ್ದರು.

ಇದರಿಂದ ಆರೋಗ್ಯ ಇಲಾಖೆಯ ಸೇವೆಗಳು ಅಸ್ತವ್ಯಸ್ತವಾದವು. ಕ್ವಾರಂಟೈನ್‌ನಲ್ಲಿರುವವರ ಆರೋಗ್ಯ ವಿಚಾರಣೆ ಸೇರಿದಂತೆ ಹಲವು ಮಹತ್ವದ ಜವಾಬ್ದಾರಿಗಳನ್ನು ಇವರಿಗೆ ವಹಿಸಲಾಗಿತ್ತು. ಇವರು ಗೈರಾದ ಕಡೆಗಳಲ್ಲೆಲ್ಲ ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಕಾರ್ಯನಿರ್ವಹಿಸಿದರು.

ತಿಂಗಳಿಗೆ ₹ 12 ಸಾವಿರ ಗೌರವಧನ ನೀಡಬೇಕು ಎಂಬುದು ಇವರ ಪ್ರಮುಖ ಬೇಡಿಕೆಯಾಗಿದೆ. ಜತೆಗೆ ಕೋವಿಡ್‌ಗೆ ಸಂಬಂಧಪಟ್ಟ ಕೆಲಸಗಳಿಗೆ ಗುಣಮಟ್ಟದ ಮಾಸ್ಕ್, ಫೇಸ್ ಶೀಲ್ಡ್, ಸ್ಯಾನಿಟೈಸರ್, ಗ್ಲೌಸ್‌ ಹಾಗೂ ಕಿಟ್‌ಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ಸಲಹೆಗಾರರಾದ ಸಂಧ್ಯಾ, ‘ಪಿರಿಯಾಪಟ್ಟಣ, ತಿ.ನರಸೀಪುರ, ಎಚ್.ಡಿ.ಕೋಟೆ, ಕೆ.ಆರ್.ನಗರ ತಾಲ್ಲೂಕುಗಳಲ್ಲಿ ಮುಷ್ಕರ ಶೇ 100ರಷ್ಟು ಯಶಸ್ವಿಯಾಗಿದೆ. ಇನ್ನುಳಿದ ತಾಲ್ಲೂಕುಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ತಿಳಿಸಿದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಮೈಸೂರು: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ (ದಸಂಸ ಸಂಘಟನೆಗಳ ಜಂಟಿ ವೇದಿಕೆ) ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.‌

ಕರ್ನಾಟಕದ ಭೂ ಸುಧಾರಣೆ ಕಾಯ್ದೆಯು ದೇಶಕ್ಕೆ ಮಾದರಿಯಾಗಿತ್ತು. ಉಳುವವನೇ ಭೂಮಿಯ ಒಡೆಯ ಎಂದು ಇದು ಪ್ರತಿಪಾದಿಸುತ್ತಿತ್ತು. ಆದರೆ, ಇಂತಹ ಅಮೂಲ್ಯವಾದ ಮಾದರಿ ಕಾಯ್ದೆಗೆ ರೈತವಿರೋಧಿಯಾಗಿ ತಿದ್ದುಪಡಿ ತರಲು ಹೊರಟಿರುವುದು ಸರಿಯಲ್ಲ ಎಂದು ಖಂಡಿಸಿದರು.‌

ಅಂಬೇಡ್ಕರ್ ನಿವಾಸದ ಮೇಲಿನ ದಾಳಿಗೆ ಖಂಡನೆ

ಬಿ.ಆರ್.ಅಂಬೇಡ್ಕರ್ ಅವರ ನಿವಾಸದ ಮೇಲೆ ನಡೆದ ದಾಳಿಯನ್ನು ಇದೇ ವೇಳೆ ಕಾರ್ಯಕರ್ತರು ಖಂಡಿಸಿದರು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಆಲಗೂಡು ಶಿವಕುಮಾರ್, ಚುಂಚನಹಳ್ಳಿ ಮಲ್ಲೇಶ್, ಬೆಟ್ಟಯ್ಯ ಕೋಟೆ, ಕಾರ್ಯಬಸವಣ್ಣ, ರಾಜಶೇಖರ್ ಕೋಟೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು