ಮಂಗಳವಾರ, ಸೆಪ್ಟೆಂಬರ್ 28, 2021
21 °C
ಸಂಗೀತ ವಿ.ವಿ: ಸಂವಾದದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಪಾಟೀಲ ಅಭಿಮತ

‘ಕೋವಿಡ್‌ಗೆ ಆಯುರ್ವೇದದಲ್ಲೂ ಚಿಕಿತ್ಸೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಆಯುರ್ವೇದದಲ್ಲಿ ಕೋವಿಡ್‌ಗೂ ಚಿಕಿತ್ಸೆ ಇದೆ, ಕಾಯಿಲೆ ಲಕ್ಷಣ ನೋಡಿಕೊಂಡು ಔಷಧಿ ನೀಡಲಾಗುವುದು’ ಎಂದು ಸರ್ಕಾರಿ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಪಾಟೀಲ ಹೇಳಿದರು.

ನಗರದ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆವರಣ ದಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಎನ್‌ಎಸ್‌ಎಸ್‌ ವಿಭಾಗವು ಸೋಮವಾರ ಆಯೋಜಿಸಿದ್ದ ಆಯುಷ್‌ ಸಂವಾದದಲ್ಲಿ ಅವರು ‘ಕೋವಿಡ್‌ ಸಂಕಷ್ಟದ ಕಾಲದಲ್ಲಿ ಆರೋಗ್ಯ ರಕ್ಷಣೆ’ ಕುರಿತು ಮಾತನಾಡಿದರು.

‘ಕಲುಷಿತ ನೀರು, ಆಹಾರ, ಗಾಳಿಯಿಂದ ಸಮುದಾಯಕ್ಕೆ ಬರುವ ಕಾಯಿಲೆಗಳ ಬಗ್ಗೆ ಚರಕ ಸಂಹಿತೆಯಲ್ಲೂ ಉಲ್ಲೇಖಿಸಲಾಗಿದೆ. ಆದರೆ, ಯಾವುದೇ ಹೆಸರುಗಳನ್ನು ಇಟ್ಟಿಲ್ಲ. ಜಗತ್ತನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗಕ್ಕೆ ಮಾತ್ರ ಕೋವಿಡ್‌ ಎಂದು ಹೆಸರಿಡಲಾಗಿದೆ’ ಎಂದರು.

‘ಕೋವಿಡ್‌ ಆರಂಭದ ಹಂತದಲ್ಲಿ ಬೇಕಾಗುವ ಚಿಕಿತ್ಸೆಯೂ ಆಯುರ್ವೇದದಲ್ಲಿದೆ. ಆಯುಷ್‌ ಕ್ವಾಥ್‌, ಅರಿಸಿನ ಹಾಲು, ಅಮೃತ ಬಳ್ಳಿಯಿಂದ ಮಾಡಿದ ಸಂಶಮನವಟಿ ಹಾಗೂ ಚವಣ್‌ ಪ್ರಾಶ್‌ ಔಷಧ ಬಳಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸರಳ ವ್ಯಾಯಾಮ ವನ್ನೂ ಮಾಡಬೇಕು’ ಎಂದರು.

‘ಕೋವಿಡ್‌ನಿಂದಾದ ಸಾವುಗಳ ವಿಜೃಂಭಣೆಯ ದೃಶ್ಯಗಳನ್ನು ಕಂಡ ಹಲವರು ಭಯದಿಂದಲೇ ಮೃತಪಟ್ಟರು. ಎಲ್ಲೆಡೆ ರೆಮ್‌ಡಿಸಿವಿರ್‌ ಕೊರತೆ ಆಯಿತು. ಸೋಂಕು ತಗುಲಿ 14 ದಿನಗಳ ನಂತರ ಲಸಿಕೆ ಉಪಯೋಗಕ್ಕೆ ಬರುವುದಿಲ್ಲ. ಆದರೆ ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಅಭಾವ ಸೃಷ್ಟಿಸಿದರು. ಐಸಿಯುನಲ್ಲಿದ್ದ ಬಹಳಷ್ಟು ಕೋವಿಡ್‌ ರೋಗಿಗಳು ಲಸಿಕೆ ಪಡೆದಿರಲಿಲ್ಲ. ಎಲ್ಲರೂ ಲಸಿಕೆ ಪಡೆಯುವುದು ಉತ್ತಮ’ ಎಂದರು.

ಡಾ.ಎಸ್‌.ಎ.ಆಶಾ ಮಾತನಾಡಿ, ‘ಜಂಕ್‌ ಫುಡ್‌ ಹಾಗೂ ಪೊಟ್ಟಣದ ಆಹಾರ ತಿಂದರೆ ಆರೋಗ್ಯ ಕೆಡುತ್ತದೆ. ಅತಿಯಾದ ಪೋಷಕಾಂಶ ಹಾಗೂ ಪೋಷಕಾಂಶ ಕೊರತೆಯೂ ಒಳ್ಳೆಯದಲ್ಲ’ ಎಂದು ಎಚ್ಚರಿಸಿದರು.

ಕುಲಪತಿ ಪ್ರೊ. ನಾಗೇಶ್‌ ವಿ ಬೆಟ್ಟಕೋಟೆ, ಹಣಕಾಸು ಅಧಿಕಾರಿ ರೇಣುಕಾಂಬ, ಡಾ. ದುಂಡಯ್ಯಾ ಪೂಜೇರ, ನಯನ ಶಿವರಾಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು