ಗುರುವಾರ , ಮಾರ್ಚ್ 4, 2021
24 °C
ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ

ಗಾಂಧಿ ಪಥ ರಾಜಪಥವಾಗಿ ಉಳಿದಿಲ್ಲ :ಎನ್.ವಿದ್ಯಾಶಂಕರ್ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಗಾಂಧಿ ಪಥ ಎಂಬುದು ಸ್ವತಂತ್ರ ಭಾರತದಲ್ಲಿ ರಾಜಪಥವಾಗಿ ಉಳಿದಿಲ್ಲ’ ಎಂದು ಚಲನಚಿತ್ರ ತಜ್ಞ ಎನ್.ವಿದ್ಯಾಶಂಕರ್‌ ಅಭಿಪ್ರಾಯಪಟ್ಟರು.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಶುಕ್ರವಾರ ಆರಂಭಗೊಂಡ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶ 1910ರಿಂದ 1947ರವರೆಗೆ ಮಾತ್ರ ಗಾಂಧಿ ಪಥದಲ್ಲಿತ್ತು. ನಂತರ ಗಾಂಧಿ ಪಥವನ್ನೇ ಮರೆತು ಸಾಗುತ್ತಿದೆ’ ಎಂದರು.

‘ಸ್ವತಂತ್ರ ಭಾರತ ಎಂದಿಗೂ ಗಾಂಧಿ ಪಥದಲ್ಲಿ ನಡೆದಿಲ್ಲ. ಕಿರು ದಾರಿಗಳಲ್ಲಷ್ಟೇ ಗಾಂಧಿ ಪಥ ಕಾಣುತ್ತಿದೆ. ಇದೀಗ ಸಾರ್ವಜನಿಕ, ಸಮುದಾಯದ ಪಥವಾಗಿಲ್ಲ. ವೈಯಕ್ತಿಕವಾಗಿದೆಯಷ್ಟೇ. ರಾಜ ಪಥದಿಂದ ಬಹುದೂರ ಸಾಗಿದೆ. ವೈಯಕ್ತಿಕ ನೆಲೆಗಟ್ಟಿನಲ್ಲಷ್ಟೇ ಗಾಂಧಿ ಪಥವನ್ನು ಹುಡುಕಬೇಕಿದೆ’ ಎಂದು ಹೇಳಿದರು.

‘ಆರ್ಥಿಕತೆಯಲ್ಲಿ ಗಾಂಧಿ ಅನುಸರಣೆ ಎಂಬುದೇ ಇಲ್ಲವಾಗಿದೆ. ರಾಜಕೀಯದಲ್ಲಿ ಸಾಧ್ಯವೇ ಇಲ್ಲ ಎಂಬಂತಹ ವಾತಾವರಣ ನಿರ್ಮಾಣಗೊಂಡಿದೆ. ಪ್ರಸ್ತುತ ಗಾಂಧಿ ಪಥದ ಮೂಲದಲ್ಲಿ ನಾವು ಸಾಗಬೇಕು ಎಂದರೇ, ನೈತಿಕತೆ ಅಳವಡಿಸಿಕೊಳ್ಳಬೇಕು. ಭ್ರಷ್ಟತೆಯಿಂದ ಬಲು ದೂರು ಉಳಿಯಬೇಕು’ ಎಂದರು.

ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ ‘ಎಥಿಕ್ಸ್‌ ಇಲ್ಲದ ಬದುಕು ಇಂದಿನದ್ದಾಗಿದೆ. ಚರ್ಚೆ, ಪರ–ವಿರೋಧದ ಬದುಕೇ ಇಲ್ಲವಾಗಿದೆ. ಸಿದ್ಧಸೂತ್ರದ ಬದುಕಿನಲ್ಲಿ ಜಗತ್ತು ನಡೆದಿದೆ’ ಎಂದು ಅಭಿಪ್ರಾಯಪಟ್ಟರು.

‘ಸೈನಿಕ ಮಾದರಿಯ ಶಿಸ್ತನ್ನೇ ಎಲ್ಲೆಡೆ ನಿರೀಕ್ಷಿಸಲಾಗುತ್ತಿದೆ. ನಮ್ಮ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ವಾತಾವರಣವೇ ಇಲ್ಲ. ಮತ್ತೊಬ್ಬರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದು ಹೇಳಿದರು.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ ‘ಮೈಸೂರು ಹಾಗೂ ರಂಗಾಯಣ ಅದ್ಭುತವಾದವು. ರಂಗಾಯಣಕ್ಕೆ ಹೊಸ ದಿಕ್ಕಿನ ಆಯಾಮ ನೀಡುವ ಚಿಂತನೆ ನನ್ನದು. ನೇರ ಮಾತುಗಾರ ನಾನು. ಪೊನ್ನಂಪೇಟೆಗೆ ಗಾಂಧಿ ಬಂದಾಗ ಸ್ವರಾಜ್ಯದ ಹೋರಾಟಕ್ಕಾಗಿ ಬಂಗಾರ ಕೊಟ್ಟ ಕುಟುಂಬದ ಕುಡಿ ನಾನಾಗಿರುವೆ. ನಾನಲ್ಲದೆ ಇನ್ಯಾರು ಗಾಂಧಿಯ ಆಶಯ, ತತ್ವಗಳ ಬಗ್ಗೆ ಚಿಂತಿಸಿ ಅನುಷ್ಠಾನಕ್ಕೆ ತರಲು ಮುಂದಾಗಲು ಸಾಧ್ಯ’ ಎಂದು ತಮ್ಮ ವಿರುದ್ಧದ ಟೀಕೆಗಳಿಗೆ ಚಾಟಿ ಬೀಸಿದರು.

ಬಹುರೂಪಿ ಚಲನಚಿತ್ರೋತ್ಸವದ ಸಂಚಾಲಕ ಕೆ.ಮನು ಆಶಯ ನುಡಿಗಳನ್ನಾಡಿ ‘ಪ್ರಚೋದನಕಾರಿ ಪ್ರಪಂಚದಲ್ಲಿ ಶಾಂತಿಯ ಅವಧೂತನ ಪರಿಚಯಿಸುವ ಕೆಲಸ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ನಡೆದಿರುವ ಅವಹೇಳನ–ಅಪಮಾನದ ನಡುವೆ ಗಾಂಧಿಯ ನೈಜ ಚಿತ್ರಣ ಅನಾವರಣಗೊಳಿಸಲಾಗುತ್ತಿದೆ’ ಎಂದರು.

ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ಕಲಾವಿದೆ ಬಿ.ಎನ್.ಶಶಿಕಲಾ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು