ಭಾನುವಾರ, ಮಾರ್ಚ್ 26, 2023
23 °C

ಬಸವ ಎಂಬ ಬೆಳಗು

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಏಪ್ರಿಲ್ ಮತ್ತು ಮೇ ತಿಂಗಳು ಬಂದರೆ ಅದೊಂದು ಪವಿತ್ರ ತಿಂಗಳು ಎಂಬ ಭಾವವೊಂದು ಸುಳಿಯುತ್ತದೆ. ಶ್ರಮಿಕರ ದಿನಾಚರಣೆ, ರಾಮಾನುಜ ಜಯಂತಿ, ಶಂಕರ ಜಯಂತಿ, ಮಹಾವೀರ ಜಯಂತಿ, ಈಸ್ಟರ್‌ ಹಬ್ಬ, ತ್ಯಾಗ ಬಲಿದಾನ ಸಂಕೇತವಾದ ಶುಭ ಶುಕ್ರವಾರ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಬುದ್ಧಪೂರ್ಣಿಮೆ, ದೇವರದಾಸಿಮಯ್ಯ ಜಯಂತಿ...

ಹೀಗೆ ಅನೇಕ ಮಹಾಪುರುಷರ ಜಯಂತಿಗಳು ಬರುತ್ತವೆ. ಈ ಎಲ್ಲವೂ ನೆಮ್ಮದಿಯ ಬದುಕಿಗೆ ಒಂದೊಂದು ಬೆಳಕಿಂಡಿಯನ್ನು ಕೊಡು ತ್ತವೆ. ಇದರಲ್ಲಿ ಬಸವ ಜಯಂತಿಯೂ ಒಂದು.

‘ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ, ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು...’ ಎಂಬ ಮಡಿವಾಳ ಮಾಚಿದೇವರ ವಚನ ನೆನಪಾಗುವ ಹೊತ್ತು ಬಂದಿದೆ. ಬಸವ ಜಯಂತಿ ಸಮಯದಲ್ಲಿ ಎಲ್ಲೆಡೆ ಸಂಭ್ರಮ, ಸಂತಸಗಳು ಮೈದಳೆಯುತ್ತವೆ. ರಾಜ್ಯದಾದ್ಯಂತ ನಡೆ ಯುವ ಈ ಸಂಭ್ರಮದಲ್ಲಿ ಮೈಸೂರೂ ಮಿಂದೇಳುತ್ತಿದೆ.

ಬಸವಣ್ಣ ಬದುಕಿದ್ದು, ಬಾಳಿದ್ದು ಉತ್ತರ ಕರ್ನಾಟಕ ಭಾಗದಲ್ಲಿ. ಆದರೆ, ಅವರ ಅನುಯಾಯಿಗಳು ರಾಜ್ಯದ ಉದ್ದಗಲದಲ್ಲೂ ಇದ್ದಾರೆ. ಅವರ ತತ್ವ, ಆದರ್ಶಗಳೇ ಅಂತದ್ದು. ಯಾರನ್ನೇ ಆದರೂ ಸೂಜಿಗಲ್ಲಿನಂತೆ ಸೆಳೆಯುವ ಅನುಪಮ ವ್ಯಕ್ತಿತ್ವ ಅವರದು.

ಕಲ್ಯಾಣದ ಮಹಾ ಕ್ರಾಂತಿ ಆದಾಗ ಬಹಳಷ್ಟು ಶರಣರು ದಕ್ಷಿಣಕ್ಕೆ ಓಡಿ ಬಂದರು. ಅಮೂಲ್ಯ ವಚನಗಳ ಕಟ್ಟುಗಳನ್ನು ಸಂಪ್ರದಾಯ ವಾದಿಗಳಿಂದ ರಕ್ಷಿಸಿದರು. ಇಲ್ಲಿ ಒಂದೊಂದು ಮಠಗಳನ್ನು ಸ್ಥಾಪನೆ ಮಾಡಿಕೊಂಡು ಬಸವಣ್ಣ ಅವರ ತತ್ವಾದರ್ಶಗಳನ್ನು ಉಳಿಸಿದರು.

‘ಕಾಯಕವೇ ಕೈಲಾಸ’ ಎಂಬ ಒಂದೇ ಮಾತು ಸಾಕು ಸೋಮಾರಿತನ ನೀಗಲು, ಬಡತನದಿಂದ ಮುಕ್ತಿ ಪಡೆಯಲು. ‘ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂಬ ಒಂದೇ ಮಾತು ಸಾಕು ಇಡೀ ಸಮಾಜ ಒಳ್ಳೆಯ ನಡತೆಯಿಂದ ಬಾಳಲು. ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದೆನಿಸಯ್ಯಾ’ ಎಂಬ ಮಾತೇ ಸಾಕು ಇಡೀ ಸಮಾಜ ಒಗ್ಗಟ್ಟಿನಿಂದ ಬದುಕಲು.

‘ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ’ ವಚನವು ಜಾತಿಬೇಧ ಎಂಬುದು ಇಲ್ಲವೇ ಇಲ್ಲ. ಇದು ಪಂಪ ಹೇಳುವಂತಹ ‘ಮನುಷ್ಯ ಜಾತಿ ತಾನೊಂದೇ ಒಲಂ’ ಎಂಬ ಮಾತನ್ನು ಮತ್ತೆ ಮತ್ತೆ ಧ್ವನಿಸುವಂತಿದೆ. ‘ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು, ನುಡಿ ಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮನೆಂತೊಲಿವನಯ್ಯ?’ ಎಂದು ಪ್ರಶ್ನಿಸುವ ಮೂಲಕ ಬಸವಣ್ಣ ನಡೆ ಮತ್ತು ನುಡಿ ಎರಡೂ ಒಂದೇ ಆಗಿರಬೇಕು ಎಂದು ಒತ್ತಿ ಹೇಳುತ್ತಾರೆ.

ಮೈಸೂರಿನಲ್ಲೂ ಹಬ್ಬ

ಬಸವಣ್ಣನವರ ಜಯಂತಿಯನ್ನು ಮೈಸೂರು ಭಾಗದಲ್ಲೂ ಹಬ್ಬದಂತೆ ಆಚರಿಸುತ್ತಾರೆ. ಇಲ್ಲಿನ ಶೈವ ಮಂದಿರಗಳು, ಮಠಮಾನ್ಯಗಳು ಈಗಾಗಲೇ ಸಿದ್ಧತೆ ನಡೆಸಿವೆ. ಬಸವಣ್ಣ ದೇವರ ಗುಡಿಗಳಲ್ಲೂ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ.

ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಮತ್ತು ಬಸವ ಬಳಗಗಳ ಒಕ್ಕೂಟದಿಂದ ಮೇ 7 ಮತ್ತು 8 ರಂದು ಕಲಾಮಂದಿರದಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಸರಗೂರು ಪಡುವಲ ಮಠದ ಮಹಾದೇವ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಿಗ್ಗೆ 9ಕ್ಕೆ ಬಸವಣ್ಣನವರ ಪುತ್ಥಳಿಯ ಶಿವರಾತ್ರಿ ರಾಜೇಂದ್ರ ವೃತ್ತದಿಂದ, ಬಸವೇಶ್ವರ ವೃತ್ತ– ಸಯ್ಯಾಜಿರಾವ್‌ ರಸ್ತೆ– ಕೆಆರ್‌ ವೃತ್ತ– ದೇವರಾಜ ಅರಸು ರಸ್ತೆ– ಜೆಎಲ್‌ಬಿ ರಸ್ತೆ– ಮೆಟ್ರೊಪೋಲ್‌ ವೃತ್ತದ ಮೂಲಕ ಸಾಗಿ ಕಲಾಮಂದಿರ ತಲುಪಲಿದೆ.

ಬೆಳಿಗ್ಗೆ 11ಕ್ಕೆ ಕಲಾಮಂದಿರದಲ್ಲಿ ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಡಾ.ಎಂ.ಎನ್‌.ವೆಂಕಟಾಚಲಯ್ಯ ಉದ್ಘಾಟಿಸಲಿದ್ದಾರೆ. ಇತಿಹಾಸ ತಜ್ಞ ಷ.ಶೆಟ್ಟರ್‌, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ಶಿವಗಂಗಾ ಕ್ಷೇತ್ರ, ಮೇಲಣ ಗವಿಮಠದ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ, ‘ಶರಣ ಧರ್ಮ– ಸಮನ್ವಯತೆ’ ವಿಷಯದಲ್ಲಿ ವಿಚಾರಗೋಷ್ಠಿ, ಸಂಜೆ 5ಕ್ಕೆ ವಿಶೇಷ ಉಪನ್ಯಾಸ ಮತ್ತು ಸಂಜೆ 6.15ಕ್ಕೆ ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೇ 8 ರಂದು ಬೆಳಿಗ್ಗೆ 9.20ಕ್ಕೆ ವಚನಗಾಯನ, 10.30ಕ್ಕೆ ವಿಶೇಷ ಪ್ರವಚನ, 11.45ಕ್ಕೆ ‘ವರ್ತಮಾನಕ್ಕೆ ಶರಣರ ಚಿಂತನೆಗಳು’ ವಿಷಯದಲ್ಲಿ ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 4.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು