ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ನದಿ: ನಡುಗಡ್ಡೆಯಾದ ರೋಜಾ ಗ್ರಾಮ

ಅಣಬಿ ಗ್ರಾಮದಲ್ಲಿ ಹಾವು, ಚೇಳುಗಳ ಕಾಟ, ಸತ್ತರೆ ಸ್ಮಶಾನದ ಅಂತ್ಯಕ್ರಿಯೆ ಇಲ್ಲ!
Last Updated 20 ಅಕ್ಟೋಬರ್ 2020, 16:37 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಭೀಮಾ ನದಿ ತೀರದ ಗ್ರಾಮಗಳು ಮುಳುಡಗೆಯಾಗಿದ್ದು, ಸಂತ್ರಸ್ತರು ಸೂಕ್ತ ಸೌಲಭ್ಯಕ್ಕಾಗಿ ಪರದಾಡುತ್ತಿದ್ದಾರೆ.

ರೋಜಾ ಗ್ರಾಮ ನಡುಗಡ್ಡೆಯಾಗಿದ್ದು, ರಸ್ತೆ ಸಂಪೂರ್ಣ ಜಲಾವೃತ್ತವಾಗಿದೆ. ಗ್ರಾಮದ ಸುತ್ತಮುತ್ತ ನೀರು ತುಂಬಿಕೊಂಡಿದ್ದು, ದ್ವೀಪದಂತೆ ಆಗಿದೆ.ಒಂದು ಕಡೆ ಭೀಮಾ ನದಿ ನೀರು, ಇನ್ನೊಂದೆಡೆ ಹಳ್ಳದ ನೀರು ಸುತ್ತುವರಿದು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದೆ.

ಕಾಳಜಿ ತೋರಿಸದ ‘ಕಾಳಜಿ ಕೇಂದ್ರಗಳು’: ಜಿಲ್ಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರ ಕುರಿತು ಕಾಳಜಿಯೇ ಇಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಶಹಾಪುರ ತಾಲ್ಲೂಕಿನ ಹುರಸಗುಂಡಗಿ, ಹೊಸೂರ, ಅಣಬಿ ಗ್ರಾಮದಲ್ಲಿ ತೆರೆದಿರುವ ಕೇಂದ್ರಗಳಲ್ಲಿ ಊಟಕ್ಕೆ ಮಾತ್ರ ಕೊರತೆ ಇಲ್ಲ. ಮಿಕ್ಕ ಎಲ್ಲದಕ್ಕೂ ಸಮಸ್ಯೆ ಇದೆ.

ಹುರಸಗುಂಡಗಿ, ಹೊಸೂರ, ಅಣಬಿ ಗ್ರಾಮದ ಶಾಲೆಗಳಲ್ಲಿ ಸೂಕ್ತ ಸೌಲಭ್ಯ ಒದಗಿಸಿಲ್ಲ. ಜಿಲ್ಲಾಧಿಕಾರಿಗಳು ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೆ, ಅನುಷ್ಠಾನಕ್ಕೆ ಬಂದಿಲ್ಲ.

ಪ್ರವಾಹ ಬಂದಾಗ ಉಟ್ಟ ಬಟ್ಟೆಯಲ್ಲಿಯೇ ಬಂದಿದ್ದಾರೆ. ಕೆಳಗೆ ಹಾಸಿಕೊಳ್ಳುವ ತಾಡಪತ್ರಿ ಮಾತ್ರ ಕೊಟ್ಟಿದ್ದು, ಹೊದ್ದುಕೊಳ್ಳುವ ಹಾಸಿಗೆ, ಸಾಬೂನು, ಮಾಸ್ಕ್‌, ಸ್ಯಾನಿಟೈಸ್‌ ವ್ಯವಸ್ಥೆ ಕಲ್ಪಿಸಿಲ್ಲ ಎನ್ನುವುದು ಸಂತ್ರಸ್ತರ ದೂರಾಗಿದೆ.

‘ನಮಗೆ ಪೌಷ್ಟಿಕ ಆಹಾರ ವಿತರಿಸುತ್ತಿಲ್ಲ. ಸಪ್ಪನ ಅನ್ನ, ಬೇಳೆ ಸಾರು ಹಾಕುತ್ತಿದ್ದಾರೆ. ಕೆಲವರಿಗೆ ಮಾತ್ರ ಮಾಸ್ಕ್‌ ಕೊಟ್ಟಿದ್ದಾರೆ. ಸ್ಯಾನಿಟೈಸ್‌ ಕೊಟ್ಟಿಲ್ಲ. ಫ್ಯಾನ್‌ ಇಲ್ಲ. ನಾವು ಹೋಗೋ ಸಹಿಸಿಕೊಳ್ಳುತ್ತೇವೆ. ಚಿಕ್ಕಮಕ್ಕಳು ದ್ವಾಮಿ (ಸೊಳ್ಳೆ) ಕಚ್ಚುತ್ತವೆ ಎಂದು ರಚ್ಚೆ ಹಿಡಿದು ರಾತ್ರಿ ಪೂರ್ತಿ ನಿದ್ದೆ ಮಾಡುವುದಿಲ್ಲ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ನಮ್ಮನ್ನು ಸ್ಥಳಾಂತರ ಮಾಡಿದಂದಿನಿಂದ ಇಲ್ಲಿಯವರೆಗೆ ಅಧಿಕಾರಿಗಳು ಮತ್ತೆ ಇತ್ತ ತಿರುಗಿ ನೋಡಿಲ್ಲ’ ಎನ್ನುತ್ತಾರೆ ಅಣಬಿ ಗ್ರಾಮದ ಸಂತ್ರಸ್ತ ಮಾನಪ್ಪ ಶಾಸ್ತ್ರಿ.

‘ಊಟದ ವ್ಯವಸ್ಥೆ ಮಾತ್ರ ಮಾಡಿದ್ದಾರೆ. ನಾಲ್ಕು ದಿನಗಳಿಂದ ಜಳಕ ಮಾಡಿಲ್ಲ. ಭೀಮಾ ನದಿಗೆ 100 ಮೀಟರ್‌ ದೂರದಲ್ಲಿ ನಮ್ಮ ಮನೆ ಇದೆ. ಅಲ್ಲಿಗೆ ನೀರು ನುಗ್ಗಿದ್ದು, ಆಹಾರ ಪದಾರ್ಥಗಳು ನೀರಿನಲ್ಲಿ ಮುಳುಗಡೆಯಾಗಿವೆ. ನಮ್ಮ ಸಂಕಷ್ಟ ಕೇಳುವವರೇ ಇಲ್ಲದಂತಾಗಿದೆ. ನಮ್ಮ ಭಾಗದ ಶಾಸಕರು ಬಂದಿಲ್ಲ. ಪಕ್ಕದ ರೋಜಾ ಗ್ರಾಮಕ್ಕೆ ತೆರಳಿದ್ದಾರೆ’ ಎನ್ನುತ್ತಾರೆ ಭೀಮರಾಯ ಮೂಲಿಮನಿ, ಮಲ್ಲಪ್ಪ ತಳಿಗೇರಿ, ಭೀಮರಾಯ ತಳಿಗೇರಿ, ಶರಣಪ್ಪ ಶಾಸ್ತ್ರಿ.

‘ಪ್ರವಾಹ ಬಂದಾಗ ನಮ್ಮ ಮನೆಗಳು ಮುಳುಡಗೆಯಾಗುತ್ತವೆ. ಹೀಗಾಗಿ ಹೊಳೆ ದಂಡೆಗೆ ಇರುವವರನ್ನು ಸ್ಥಳಾಂತರಿಸಬೇಕು. ಮೇಲ್ಭಾಗದಲ್ಲಿ ಜಾಗ ತೋರಿಸಿ ಮನೆ ಕಟ್ಟಿಸಿಕೊಡಬೇಕು’ ಎನ್ನುತ್ತಾರೆ ಅವರು.

‘ಆರು ದಿನಗಳಿಂದ ಒಂದೇ ಕೋಣೆಯಲ್ಲಿ ಫ್ಯಾನ್‌ ಇತ್ತು. ಮಂಗಳವಾರ ಮತ್ತೊಂದನ್ನು ದುರಸ್ತಿ ಮಾಡಿಸಿದ್ದಾರೆ. ಆದರೆ, ಬಯಲಲ್ಲೇ ಮಲಗುವ ಪರಿಸ್ಥಿತಿ ಇದೆ. ಹೊದ್ದುಕೊಳ್ಳುವ ಹಾಸಿಗೆ ವ್ಯವಸ್ಥೆ ಮಾಡಿದರೆ ಚೆನ್ನಾಗಿತ್ತು. ಸರ್ಕಾರದಿಂದ ಜಾನುವಾರುಗಳಿಗೆ ಮೇವು ಕೊಟ್ಟಿಲ್ಲ. ಬೇರೆಯವರ ಜಮೀನಿನಲ್ಲಿ ಪಶುಗಳನ್ನು ಬಿಟ್ಟರೆ ಬೈಯುತ್ತಾರೆ. ಹೀಗಾಗಿ ಜಾನುವಾರಿಗೆ ಮೇವಿನ ವ್ಯವಸ್ಥೆ ಮಾಡಬೇಕು’ ಎಂದು ರೋಜಾ ಗ್ರಾಮದ ಮಹಮ್ಮದ್‌ ಇಸಾಕ್‌ ಆಗ್ರಹಿಸುತ್ತಾರೆ.

‍ಪ್ರವಾಹದ ನೀರು ಇಳಿಕೆ:ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಮುಂದುವರೆದಿದ್ದು, ಮಂಗಳವಾರ ಬೆಳಿಗ್ಗೆ 6 ಗಂಟೆಗೆ 3.93 ಲಕ್ಷ ಕ್ಯುಸೆಕ್‌ ನೀರು ಹೊರಹರಿವಿತ್ತು. 9.10 ನಿಮಿಷಕ್ಕೆ 4 ಲಕ್ಷ ಕ್ಯುಸೆಕ್‌ ನೀರು ಹರಿದಿತ್ತು. ಮತ್ತೆ ಸಂಜೆ 4 ಗಂಟೆಗೆ 3.90 ಲಕ್ಷಕ್ಕೆ ಇಳಿಕೆಯಾಯಿತು.ಇದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಇಳಿಕೆಯಾಗಿದೆ.

ಅಣಬಿಯಲ್ಲಿ ಹಾವು, ಚೇಳುಗಳ ಕಾಟ

ಅಣಬಿ ಗ್ರಾಮದಲ್ಲಿ ಹಾವು, ಚೇಳುಗಳ ಕಾಟ ಶುರುವಾಗಿದೆ. ಭೀಮಾ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಗಳಿಗೆ ತೆರಳಿ ಧವಸ ಧಾನ್ಯ ತರಲು ವಿಷ ಜಂತುಗಳ ಕಾಟ ಶುರುವಾಗಿದೆ ಎನ್ನುವುದು ಗ್ರಾಮಸ್ಥರ ಮಾತಾಗಿದೆ.

ತಾತ್ಕಾಲಿಕವಾಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ 48 ಕುಟುಂಬಗಳ 280 ಜನ ನೆಲೆ ಕಂಡಿದ್ದಾರೆ. ಆದರೆ, ಇವರಿಗೆ ಊಟ ಬಿಟ್ಟರೆ ಯಾವುದೇ ಸೌಲಭ್ಯ ಸರ್ಕಾರದಿಂದ ತಲುಪಿಲ್ಲ.

ಬಯಲೇ ಗತಿ: ಶಾಲೆಯಲ್ಲಿ ಶೌಚಾಲಯಗಳಿದ್ದರೆ ಸಮಪರ್ಕ ವ್ಯವಸ್ಥೆ ಇಲ್ಲ. ಇದರಿಂದ ಸಂತ್ರಸ್ತರು ಬಯಲನ್ನೇ ಆಶ್ರಯಿಸಿದ್ದಾರೆ. ಶೌಚಾಲಯ ಇದ್ದರೂ ಪಾಳು ಬಿದ್ದಿದೆ. ಬಯಲೇ ಗತಿಯಾಗಿದೆ.

ಸತ್ತರೆ ಸ್ಮಶಾನವೇ ಇಲ್ಲ!

ಪ್ರವಾಹ ಪೀಡಿತ ಗ್ರಾಮಗಳಲ್ಲಿ ಆಕಸ್ಮಿಕ ಸಾವು ಸಂಭವಿಸಿದರೆ ಸ್ಮಶಾನವೇ ಇಲ್ಲದಂತಾಗಿದೆ.

ಶಹಾಪುರ ತಾಲ್ಲೂಕಿನ ರೋಜಾ, ಹುರಸಗುಂಡಗಿ, ಅಣಬಿ, ವಡಗೇರಾ ತಾಲ್ಲೂಕಿನ ಬೀರನಾಳ ಗ್ರಾಮಗಳ ಸ್ಮಶಾನಗಳ ಭೀಮಾ ನದಿ ಪ್ರವಾಹದಲ್ಲಿ ಮುಳಗಿವೆ.

‘ನದಿ ತೀರದಲ್ಲಿ ರುದ್ರಭೂಮಿ ಇತ್ತು. ಎಲ್ಲ ಕಡೆ ಪ್ರವಾಹದ ನೀರು ಬಂದು ಸ್ಮಶಾನಕ್ಕೆ ಜಾಗವೇ ಇಲ್ಲದಂತಾಗಿದೆ. ಯಾರಾದರೂ ಸತ್ತರೆ ಹಳ್ಳಕ್ಕೆ ಎಸೆಯುವ ಪರಿಸ್ಥಿತಿ ಇದೆ’ ಎಂದು ಅಣಬಿ ಗ್ರಾಮಸ್ಥರು ತಿಳಿಸಿದರು.

ಪ್ರತಿಕ್ರಿಯೆ

ನಮ್ಮ ಕಷ್ಟ ಶತ್ರುಗೂ ಬರಬಾರದು. ಏನೂ ಇಲ್ಲದ ಗತಿ ಇಲ್ಲದವರಂತೆ ನಾವು ಕಾಳಜಿ ಕೇಂದ್ರದಲ್ಲಿ ಬಂದು ನೆಲೆಸಿದ್ದೇವೆ. ಯಾವುದೇ ಸೌಲಭ್ಯಗಳಿಲ್ಲ. ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು
- ಬಾಬುಮಿಯಾ ಅಬ್ದುಲ್ ಕರಿಂಸಾಬ್, ರೋಜಾ ಗ್ರಾಮಸ್ಥ

ರೋಜಾ ಗ್ರಾಮದ 6 ತಿಂಗಳ ಗರ್ಭಿಣಿ, ಬಾಣಂತಿಯನ್ನು ಅವರ ತವರೂರಿಗೆ ಕಳಿಸಿಕೊಡಲಾಗಿದೆ. ಸದ್ಯ ಕಾಳಜಿ ಕೇಂದ್ರ ಪುರುಷ, ಮಹಿಳೆಯರು ಸೇರಿ161 ಜನರಿದ್ದಾರೆ. ಆರೋಗ್ಯ ಸಮಸ್ಯೆ ಆಗದಂತೆ ರೋಗ ನಿರೋಧಕ ಶಕ್ತಿ ಮಾತ್ರೆ ನೀಡಲಾಗುತ್ತಿದೆ.
- ಸುಧಾ, ಆರೋಗ್ಯ ಕಿರಿಯ ಮಹಿಳಾ ಸಹಾಯಕಿ ಶಿರವಾಳ

ಭೀಮಾ ನದಿ ಪ್ರವಾಹದಿಂದ ನಮ್ಮ ಜೀವನವೇ ಬರ್ಬಾದ್‌ ಆಗಿದೆ. ಹೊಲ, ಮನೆ ಮಾತ್ರ ನಮಗೆ ಗೊತ್ತಿತ್ತು. ಏಕಾಏಕಿ ಪ್ರವಾಹದಿಂದ ಶಾಲೆಯಲ್ಲಿ ವಾಸ ಮಾಡುವಂತೆ ಆಗಿದೆ. ನಮ್ಮ ಕಷ್ಟ ಇನ್ನೊಬ್ಬರಿಗೆ ಬಾರದಿರಲಿ. ಶೀಘ್ರವೇ ಪ್ರವಾಹ ಇಳಿಮುಖವಾಗಿ ಮನೆ ಸೇರುವುದನ್ನೆ ಕಾಯುತ್ತಿದ್ದೇವೆ.
- ಜರಿನಾಬೇಗಂ, ರೋಜಾ ಗ್ರಾಮಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT