ಭಾನುವಾರ, ಸೆಪ್ಟೆಂಬರ್ 19, 2021
24 °C
ಹಳೇ ಸಬೂಬು ಹೇಳದೆ ಹೊಸ ಸರ್ಕಾರದಲ್ಲಿ ಅವಕಾಶ ನೀಡಲೇಬೇಕು: ಆಗ್ರಹ

ಮೈಸೂರು: ಸಚಿವ ಸಂಪುಟ ರಚನೆ; ಜಿಲ್ಲೆಗೆ ಪ್ರಾತಿನಿಧ್ಯ ದೊರಕುವುದೇ?

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಗೆ ದಿನಗಣನೆ ಶುರುವಾಗಿದೆ. ಅದರ ಬೆನ್ನಿಗೇ, ಹೊಸ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ದೊರಕಬಹುದೇ ಎಂಬ ಪ್ರಶ್ನೆ ಮೂಡಿದೆ. ಶಾಸಕರಾದ, ಕೆ.ಆರ್‌.ಕ್ಷೇತ್ರದ ಎಸ್‌.ಎ.ರಾಮದಾಸ್‌, ಚಾಮರಾಜ ಕ್ಷೇತ್ರದ ಎಲ್‌.ನಾಗೇಂದ್ರ ಹಾಗೂ ನಂಜನಗೂಡು ಶಾಸಕ ಬಿ.ಹರ್ಷ ವರ್ಧನ್ ಅವರ ಕಡೆಗೆ ಎಲ್ಲರ ಕಣ್ಣು ನೆಟ್ಟಿದೆ.

ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಮೈಸೂರು ಜಿಲ್ಲೆಗೆ ಪ್ರಾತಿನಿಧ್ಯ ದೊರಕಿರಲಿಲ್ಲ. ಈ ಬಾರಿಯಾದರೂ ಬಿಜೆಪಿ ಹೈಕಮಾಂಡ್‌ ಮೈಸೂರಿನತ್ತ ವಿಶೇಷ ಗಮನ ಹರಿಸುತ್ತದೆಯೇ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ, ನಂತರದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟದಲ್ಲಿ ಮೈಸೂರು ಜಿಲ್ಲೆಗೆ ಪ್ರಾತಿನಿಧ್ಯ ದೊರಕಿತ್ತು. ಆದರೆ ನಂತರ ಬಂದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ದೊರಕಲಿಲ್ಲ.

ಜೆಡಿಎಸ್‌ ಪ್ರಾಬಲ್ಯದಿಂದಲೇ ರಾಜ್ಯದ ರಾಜಕೀಯದಲ್ಲಿ ಗಮನ ಸೆಳೆಯುತ್ತಿದ್ದ ಜಿಲ್ಲೆಯು, 2018ರ ಚುನಾವಣೆಯಲ್ಲಿ ಬಿಜೆಪಿಗೆ ಮೂರು ಸ್ಥಾನಗಳನ್ನು ದೊರಕಿಸುವುದರ ಮೂಲಕ ಪಕ್ಷಕ್ಕೆ ಬಲವನ್ನು ತುಂಬಿತು. ಆದರೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರಾಗುವುದಂತೂ ದೂರವೇ ಉಳಿದಿತ್ತು.

ಸದ್ಯ ಮೂವರು ಶಾಸಕರ ಪೈಕಿ ಯಾರಿಗಾದರೂ ಸಚಿವರಾಗುವ ಅವಕಾಶ ದೊರಕುವುದೇ ಎಂಬ ಸಾಮಾನ್ಯ ಪ್ರಶ್ನೆಯ ಜೊತೆಗೆ, ಮೂವರ ವೈಯಕ್ತಿಕ ವರ್ಚಸ್ಸು, ಕಾರ್ಯವೈಖರಿ, ಪ್ರಭಾವ, ಅನುಭವ, ಹಿನ್ನೆಲೆ ಹಾಗೂ ಪಕ್ಷದ ಮೇಲೆ ಅದು ಬೀರಿರುವ ಪ್ರಭಾವದ ಕುರಿತೂ ಚರ್ಚೆಗಳು ನಡೆದಿವೆ. ಸಚಿವ ಸ್ಥಾನ ದೊರಕುವುದೇ ಆದರೆ ಯಾವ ಮಾನದಂಡ ಪ್ರಮುಖವಾಗಬಹುದು ಎಂಬುದು ಕೂಡ ಚರ್ಚೆಯಲ್ಲಿ ಮುಖ್ಯ ಸ್ಥಾನ ‍ಪಡೆದಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕೂಡ ಕುತೂಹಲ ಕಾಯ್ದುಕೊಂಡಿದೆ.‌

‘ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕಾರಣಕ್ಕಾಗಿ ಮೈಸೂರು ಭಾಗದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗದು ಎಂಬ ಕಾರಣವನ್ನು ಮೂರು ವರ್ಷದ ಹಿಂದೆ ನೀಡಲಾಗಿತ್ತು. ಈ ಬಾರಿಯಾದರೂ ಸ್ಥಾನ ಕೊಡಲೇಬೇಕು’ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ತಲುಪಿಸುವ ಪ್ರಯತ್ನಗಳು ನಡೆದಿವೆ.

ಸದ್ಯ ಎಸ್‌.ಎ.ರಾಮದಾಸ್‌ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದು ವರಿಷ್ಠರ ಗಮನ ಸೆಳೆಯುವ ಯತ್ನದಲ್ಲಿದ್ದಾರೆ. ಹರ್ಷವರ್ಧನ್‌ ಮೈಸೂರಿನಲ್ಲೇ ಉಳಿದಿದ್ದಾರೆ.

’ಬಲಗೈ ಸಮುದಾಯಕ್ಕೆ ಅವಕಾಶ ಕೊಡಲಿ’: ’ಬಿಜೆಪಿಯಲ್ಲಿ ಇಲ್ಲಿವರೆಗೆ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವನ್ನೇ ಕೊಟ್ಟಿಲ್ಲ. ಹೊಸ ಸರ್ಕಾರದಲ್ಲಾದರೂ ಕೊಡಬೇಕು‌. ಈ ಬಾರಿ ಸಿಗದೇ ಇನ್ನು ಎಲ್ಲೀವರೆಗೂ ನಾವು ಕಾಯಬೇಕು’ ಎಂದದು ನಂಜನಗೂಡು ಶಾಸಕ ಬಿ.ಹರ್ಷವರ್ಧನ್‌ ಪ್ರಶ್ನಿಸಿದರು.

‘ಹಿಂದಿನ ಬಾರಿ ಸರ್ಕಾರ ರಚಿಸಲು ಬೆಂಬಲ ನೀಡಿದವರನ್ನು ಓಲೈಸಬೇಕು ಎಂಬ ಸಬೂಬು ನೀಡಿ ನಮಗೆ ಸಚಿವ ಸ್ಥಾನ ನೀಡಿರಲಿಲ್ಲ. ಈಗ ಮೈಸೂರಿನ ಮೂವರು ಶಾಸಕರ ಪೈಕಿ ಯಾರಿಗಾದರೂ ಅವಕಾಶ ಕೊಡಬೇಕು. ಆ ಭರವಸೆ ಇದೆ’ ಎಂದು ಹೇಳಿದರು.

’ಎಡಗೈ ಸಮುದಾಯದ ಗೋವಿಂದ ಕಾರಜೋಳ, ವೈ.ನಾರಾಯಣಸ್ವಾಮಿ ಅವರಿಗೆ ಅವಕಾಶ ನೀಡಲಾಗಿದೆ. ನಮಗೂ ನೀಡಲಿ. ನಾನಂತೂ ಸಚಿವ ಸ್ಥಾನಕ್ಕಾಗಿ ಅರ್ಜಿ ಹಾಕಿಲ್ಲ’ ಎಂದು ಹೇಳಿದರು.

ಅನುಭವಿ ರಾಮದಾಸ್‌ಗೆ ಮಣೆ?: ‘ಮೂವರು ಶಾಸಕರ ಪೈಕಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ಸಚಿವರಾಗಿ, ಜಿಲ್ಲೆಯ ಉಸ್ತುವಾರಿಯೂ ಆಗಿ ಅನುಭವವುಳ್ಳ ಎಸ್‌.ಎ.ರಾಮದಾಸ್‌ ಅವರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ಇದೆ’ ಎಂದು ಅವರ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ.

‘ಮೂರು ವರ್ಷದ ಹಿಂದೆ ಬಿಜೆಪಿ ಸರ್ಕಾರ ರಚನೆಯಾದಾಗ ಸಚಿವ ಸ್ಥಾನ ಕೊನೇ ಕ್ಷಣದಲ್ಲಿ ಕೈತಪ್ಪಿತ್ತು. ಆದರೆ ಈ ಬಾರಿ ಅವಕಾಶ ನೀಡುವುದಾಗಿ ಹೈಕಮಾಂಡ್‌ ತಿಳಿಸಿದೆ. ಹೀಗಾಗಿ ನಾವಂತೂ ಆಶಾವಾದಿಯಾಗಿದ್ದೇವೆ’ ಎಂದು ಅವರ ಆಪ್ತಮೂಲಗಳು ಹೇಳಿವೆ. ಶಾಸಕರು ಸಂಪರ್ಕಕ್ಕೆ ಸಿಗಲಿಲ್ಲ.

‘ಲಾಬಿ ಮಾಡುವವರಿಗೆ ಎಚ್ಚರಿಕೆ’: ‘ಸಚಿವ ಸಂ‍ಪುಟ ರಚನೆಯ ವಿಷಯದಲ್ಲಿ ಈ ಬಾರಿ ಪಕ್ಷ ಗಂಭೀರವಾಗಿ ತೊಡಗಿಕೊಂಡಿದೆ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಿ ಕಳಿಸುತ್ತಿದೆ. ಹೀಗಾಗಿ ನಾನು ಆಕಾಂಕ್ಷಿಯಾಗಿದ್ದರೂ ಸುಮ್ಮನಿದ್ದೇನೆ. ಅವಕಾಶ ನೀಡಿದರೆ ನಿಭಾಯಿಸಲು ಸಿದ್ಧ’ ಎಂದು ಶಾಸಕ ಎಲ್‌.ನಾಗೇಂದ್ರ ಪ್ರತಿಕ್ರಿಯಿಸಿದರು.‘ಎಲ್ಲ ಜಿಲ್ಲೆಗಳಿಗೂ ವ್ಯವಸ್ಥಿತವಾಗಿ ಪ್ರಾತಿನಿಧ್ಯ ಕೊಡಲು ಪಕ್ಷ ಯೋಜನೆ ರೂಪಿಸಿದೆ. ಮೈಸೂರು ಜಿಲ್ಲೆಗೂ ಪ್ರಾತಿನಿಧ್ಯ ನೀಡಬೇಕು ಎಂದಷ್ಟೇ ಗಮನ ಸೆಳೆದಿರುವೆ. ಜಾತಿವಾರು ಲೆಕ್ಕಾಚಾರವೂ ನಡೆದಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.