ಬುಧವಾರ, ನವೆಂಬರ್ 25, 2020
20 °C
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರು ವಿ.ವಿಗೆ ಸ್ಥಳಾಂತರ

ಮೈಸೂರು: ‘ಮರಳಿ ಮನೆ’ಗೆ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು (ಸಿಇಎಸ್‌ಸಿಕೆ) ಭಾನುವಾರ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಎನ್‌ಸಿಎಚ್‌ಎಸ್‌ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ಈ ವೇಳೆ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ‘ಕನ್ನಡ ಸೇರಿದಂತೆ ಇತರೆ ಎಲ್ಲ ಭಾಷೆಗಳು ಇಂಗ್ಲಿಷ್‌ನ ಪ್ರಭಾವಕ್ಕೆ ಒಳಪಟ್ಟಿವೆ. ಇಂಗ್ಲಿಷ್ ಭಾಷೆಯು‌ ಅನ್ನದ ಭಾಷೆ ಎಂಬ ಭ್ರಮೆಯನ್ನು ಮೆಕಾಲೆಯ ಶಿಕ್ಷಣ ನೀತಿ ಸೃಷ್ಟಿಸಿದೆ. ಇಂಗ್ಲಿಷ್‌ ಹೊರತಾದ ಸ್ವತಂತ್ರ ಅಸ್ಮಿತೆಯನ್ನು ಕಂಡುಕೊಳ್ಳಬೇಕಿದೆ’ ಎಂದರು.

ಭಾರತೀಯ ಭಾಷಾ ಸಂಸ್ಥಾನವು ಎಲ್ಲ ವಿಶ್ವವಿದ್ಯಾಲಯಗಳೊಂದಿಗೆ ನಿಕಟ ಸಂಬಂದ ಹೊಂದಬೇಕು. ಅಲ್ಲಿನ ಪ್ರಾಧ್ಯಾಪಕರನ್ನು ತಮ್ಮವರಂತೆ ಪರಿಭಾವಿಸಬೇಕು. ಅವರ ಪ್ರತಿಭೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪತ್ರಿಕೆಗಳು ಬಳಸುವಂತಹ ಭಾಷೆಯನ್ನು ಸೂಕ್ಷ್ಮವಾಗಿ ಗ್ರಹಿಸುವ ಮೂಲಕ ಭಾಷಾ ಬೆಳವಣಿಗೆಯ ಕಡೆಗೆ ಗಂಭೀರ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಭೌತಿಕವಾಗಿ ಸ್ಥಳಾಂತರಗೊಂಡಿದೆ. ಸ್ವಾಯತ್ತೆಯತ್ತ ಇನ್ನು ಹೆಜ್ಜೆ ಇಡಬೇಕಿದೆ. ಒಗ್ಗಟ್ಟಿನಿಂದ ಕನ್ನಡ ಕಟ್ಟುವ ನಿಟ್ಟಿನಿಲ್ಲಿ ದಾಪುಗಾಲಿಡಬೇಕಿದೆ’ ಎಂದರು.

ಚರ್ಚೆ ಹುಟ್ಟು ಹಾಕಿದ್ದೇ ‘ಪ‍್ರಜಾವಾಣಿ’: ವಿದ್ವಾಂಸ ಪ್ರೊ.ಆರ್‌ವಿಎಸ್‌ ಸುಂದರಂ ಮಾತನಾಡಿ, ‘ತಮಿಳು ಭಾಷೆಗೆ 2004ರಲ್ಲಿ ಶಾಸ್ತ್ರೀಯ ಸ್ಥಾನಮಾನ ದೊರೆತ ತಕ್ಷಣವೇ ‘ಪ್ರಜಾವಾಣಿ’ ದಿನಪತ್ರಿಕೆಯು ‘ಕನ್ನಡ ಪ್ರಾಚೀನ ಭಾಷೆ ಅಲ್ಲವೇ?‌’ ಎಂಬ ಲೇಖನವನ್ನು ಪ್ರಕಟಿಸುವ ಮೂಲಕ ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂಬ ಚರ್ಚೆಯನ್ನು ಹುಟ್ಟು ಹಾಕಿತು’ ಎಂದು ನೆನಪು ಮಾಡಿಕೊಂಡರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ‘ಕೇಂದ್ರವು ಮರಳಿ ಮನೆಗೆ ಬಂದಂತಾಯಿತು’ ಎಂದು ಹರ್ಷ ವ್ಯಕ್ತಪಡಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.