ಸೋಮವಾರ, ಆಗಸ್ಟ್ 8, 2022
22 °C
ಮಾಲೀಕ ಪ್ರಮೋದ್‌ಗೆ ಬರ್ತಿವೆ ಮತ್ತಷ್ಟು ಆಫರ್‌

ಚಾರ್ಲಿ-777: ಚಿತ್ರದ ಚಿಕ್ಕ ಚಾರ್ಲಿ ಮತ್ತು ದೊಡ್ಡ ಚಾರ್ಲಿ ಎರಡೂ ಮೈಸೂರಿನವೇ...

ಎಂ.ಮಹೇಶ Updated:

ಅಕ್ಷರ ಗಾತ್ರ : | |

ಮೈಸೂರು: ರಕ್ಷಿತ್‌ ಶೆಟ್ಟಿ ಅಭಿನಯದ ‘ಚಾರ್ಲಿ–777’ ಕನ್ನಡ ಚಲನಚಿತ್ರದಲ್ಲಿ, ಪ್ರೇಕ್ಷಕರ ಮೊಗದಲ್ಲಿ ನಗುವಿನ ಕಚಗುಳಿ ಮೂಡುವಂತೆ ಮಾಡುವ, ಚಿನ್ನಾಟದಿಂದ ಆಪ್ತವೆನಿಸುವ, ತನ್ಮಯತೆಯ ನಟನೆಯಿಂದ ನೋಡುಗರ ಕಣ್ಣಾಲಿಗಳು ತುಂಬಿ ಬರುವಂತೆ ನಟಿಸಿರುವ ‘ಚಾರ್ಲಿ’ ಶ್ವಾನವು ಸಾಂಸ್ಕೃತಿಕ ನಗರಿ ಮೈಸೂರಿನದ್ದು. ಸಾಕಿರುವವರು ಮತ್ತು ತರಬೇತಿ ಕೊಟ್ಟಿರುವವರೂ ಇಲ್ಲಿಯವರೆ. ಹಲವು ದೃಶ್ಯಗಳ ಚಿತ್ರೀಕರಣ ನಡೆದಿರುವುದೂ ಇಲ್ಲೇ.

ಅವರ ಹೆಸರು ಪ್ರಮೋದ್ ಬಿ.ಸಿ. ಆ ಚಲನಚಿತ್ರದ ಮೊದಲಾರ್ಧದಲ್ಲಿ ಬರುವ ಚಿಕ್ಕ ಹಾಗೂ ನಂತರ ಕಾಣಿಸಿಕೊಳ್ಳುವ ದೊಡ್ಡ ‘ಚಾರ್ಲಿ’ ಶ್ವಾನಗಳು ಅವರ ಕೇಂದ್ರದಲ್ಲಿ ಪಳಗಿದವು.

ಪ್ರಮೋದ್, ತಾಲ್ಲೂಕಿನ ಡಿ.ಸಾಲುಂಡಿ ಬಳಿ ‘ಡಿಕೆ9 ವರ್ಕಿಂಗ್ ಡಾಗ್‌ ಟ್ರೇನಿಂಗ್‌ ಸ್ಕೂಲ್‌’ ನಡೆಸುತ್ತಿದ್ದಾರೆ. ಅಲ್ಲಿ ಅವರದ್ದೇ ಆದ 22 ಶ್ವಾನಗಳಿವೆ. 8 ವರ್ಷಗಳಿಂದ ಶಾಲೆ ನಡೆಸುತ್ತಿದ್ದು, ಇತರರ ನಾಯಿಗಳಿಗೂ ಒಂದು ತಿಂಗಳ ತರಬೇತಿ ನೀಡುತ್ತಾರೆ. ಮನೆಯಲ್ಲಿ ಹೇಗಿರಬೇಕು; ಹೇಗೆ ನಡೆದುಕೊಳ್ಳಬೇಕು ಎಂಬಿತ್ಯಾದಿ ವಿಷಯಗಳನ್ನು ಒಳಗೊಂಡ ಶಿಸ್ತನ್ನು ಶ್ವಾನಗಳಿಗೆ ಕಲಿಸುತ್ತಾರೆ. ಇದೀಗ, ಅವರು ‘ಚಾರ್ಲಿ’ ಸಿನಿಮಾ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಚಲನಚಿತ್ರಗಳ ಆಫರ್‌ಗಳನ್ನೂ ಪಡೆಯುತ್ತಿದ್ದಾರೆ.

ಸಹಜ ಅಭಿನಯ

ಲ್ಯಾಬ್ರಡಾರ್‌ ತಳಿಯ ದೊಡ್ಡ ‘ಚಾರ್ಲಿ’ಗೆ ಈಗ 4.5 ವರ್ಷವಾಗಿದ್ದರೆ, ಚಿಕ್ಕ ‘ಚಾರ್ಲಿ’ಗೆ 4 ವರ್ಷ ವಯಸ್ಸಾಗಿದೆ. ತರಬೇತಿ ಪಡೆದಿರುವ ಶ್ವಾನಗಳಿವು ಎಂಬುದು ಪ್ರೇಕ್ಷಕರಿಗೆ ತಿಳಿಯದಂತೆ ಸಹಜವಾಗಿ ಪಾತ್ರ ನಿರ್ವಹಿಸಿವೆ. ನಾಯಕ ‘ಧರ್ಮ’ (ರಕ್ಷಿತ್ ಶೆಟ್ಟಿ) ಹೇಳಿದಂತೆ ಕೇಳಿವೆ. ಇದಕ್ಕಾಗಿ ಕ್ಯಾಮೆರಾ ಹಿಂದೆ ಕೆಲಸ ಮಾಡಿರುವವರು ಪ್ರಮೋದ್.

‘ಚಾರ್ಲಿ’ ನಿರ್ದೇಶಕ ಕಿರಣ್ ರಾಜ್‌ ದೇಶದ ವಿವಿಧೆಡೆಯ 20ಕ್ಕೂ ಹೆಚ್ಚು ತರಬೇತುದಾರರನ್ನು ಸಂಪರ್ಕಿಸಿ, ‘ಅಭಿನಯಿಸುವ’ ಶ್ವಾನಕ್ಕಾಗಿ ಆಡಿಷನ್‌ ನಡೆಸಿದ್ದರಂತೆ. ಈ ಹಿಂದೆ, ನಟ ಅನಂತ್‌ನಾಗ್‌ ಜೊತೆ ‘ಕವಲುದಾರಿ’ ಸಿನಿಮಾದಲ್ಲಿ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದ ಶ್ವಾನ ನೀಡಿದ್ದ ಪ್ರಮೋದ್ ಅವರನ್ನು ಸಂಪರ್ಕಿಸುವಂತೆ ನಿರ್ದೇಶಕ ಹೇಮಂತ್‌ ಎಂ.ರಾವ್‌ ಅವರು ಕಿರಣ್‌ ರಾಜ್‌ಗೆ ಸಲಹೆ ನೀಡಿದ್ದರಂತೆ. ಇದನ್ನು ಆಧರಿಸಿ, ಪ್ರಮೋದ್ ಜೊತೆ ಮಾತುಕತೆ ನಡೆಸಿದ್ದ ಕಿರಣ್‌ರಾಜ್‌ ‘ಚಾರ್ಲಿ’ ಪಾತ್ರಕ್ಕೆ ಪ್ರಮೋದ್ ಬಳಿಯಿರುವ ಶ್ವಾನಗಳನ್ನು ಆಯ್ಕೆ ಮಾಡಿದ್ದಾರೆ. ಅವರು ಬೆಳ್ಳಿತೆರೆಯ ಮೇಲೆ ಮಿಂಚಿವೆ; ಮಕ್ಕಳು, ಸಾಕು ಪ್ರಾಣಿ‍ ಪ್ರಿಯರಷ್ಟೆ ಅಲ್ಲದೆ ಎಲ್ಲ ವಯೋಮಾದವರ ಮನಸ್ಸನ್ನೂ ಗೆದ್ದಿವೆ.

ಜರ್ಮನಿ ತಜ್ಞರಿಂದ ಪ್ರಮಾಣಪತ್ರ

ಎಂಜಿನಿಯರಿಂಗ್‌ ಪದವೀಧರರಾದ ಪ್ರಮೋದ್ ಶ್ವಾನಪ್ರಿಯರು. ಹಿಂದಿನಿಂದಲೂ ಶ್ವಾನಗಳನ್ನು ಸಾಕುತ್ತಿದ್ದಾರೆ. ಐಎಎಸ್ ಅಥವಾ ಐಪಿಎಸ್ ಅಧಿಕಾರಿ ಆಗುವ ಕನಸು ಕೈಗೆಟುಕದಿದ್ದರಿಂದ ಶ್ವಾನಗಳಿಗೆ ತರಬೇತಿ ಕೊಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಜರ್ಮನಿಯ ತಜ್ಞರಿಂದ ಪ್ರಮಾಣಪತ್ರ ಪಡೆದಿದ್ದಾರೆ. ಶ್ವಾನ ವಿಜ್ಞಾನ ಹಾಗೂ ಅವುಗಳ ಮನೋವಿಜ್ಞಾನದ ಬಗ್ಗೆ ಪರಿಣತಿ ಗಳಿಸಿದ್ದಾರೆ.

ಚಿತ್ರೀಕರಣದಲ್ಲಿ ಹೇಗಿತ್ತು?

‘ಚಿತ್ರ ತಂಡದ ಪೂರ್ವ ಮಾಹಿತಿಯಂತೆ ‘ಚಾರ್ಲಿ’ಗೆ ತರಬೇತಿ ಕೊಟ್ಟು ಸಜ್ಜುಗೊಳಿಸುತ್ತಿದ್ದೆ. ಹೊರಾಂಗಣ, ಒಳಾಂಗಣ, ಜನಸಂದಣಿಯಲ್ಲೂ ನಟಿಸುವ ಬಗ್ಗೆ ಕಲಿಸುತ್ತಿದ್ದೆ. ಬೇರೆ ಕಡೆಗಳಲ್ಲಿ ಚಿತ್ರೀಕರಣವಿದ್ದಾಗ, 10 ದಿನ ಮುನ್ನವೇ ಹೋಗಿ ಪರಿಚಯಿಸುತ್ತಿದ್ದೆ. ಕ್ಲೈಮ್ಯಾಕ್ಸ್‌ ದೃಶ್ಯವನ್ನು ಕಾಶ್ಮೀರದಿಂದ 70 ಕಿ.ಮೀ. ದೂರದಲ್ಲಿರುವ ‘ಫೆಲ್ಗಾಂ’ ಎಂಬಲ್ಲಿ ಚಿತ್ರೀಕರಿಸಲಾಯಿತು. ಅಲ್ಲಿಗೆ ಮುಂಚಿತವಾಗಿಯೇ ತೆರಳಿ ಮಂಜುಗಡ್ಡೆಯಲ್ಲಿ ಓಡಾಡುವುದು ಕಲಿಸಿದ್ದೆ’ ಎಂದು ಪ್ರಮೋದ್ ತಿಳಿಸಿದರು.

ಸಿನಿ ಪಯಣದ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಕ್ಯಾಮೆರಾ ಹಿಂದಿದ್ದುಕೊಂಡು ಹೇಳಿಕೊಡುತ್ತಿದೆ. ಚೆನ್ನಾಗಿ ಅಭಿನಯಿಸಿ ಜನರ ಮನಸ್ಸನ್ನು ‘ಚಾರ್ಲಿ’ ಗೆದ್ದಿದ್ದಾಳೆ. ಇದು ಖುಷಿಯ ಸಂಗತಿ’ ಎಂದರು.

‘ಶ್ವಾನಗಳಿಗಾಗಿ ನನ್ನನ್ನೂ ವಿಚಾರಿಸುತ್ತಿದ್ದಾರೆ. ಚಾರ್ಲಿಗಳನ್ನು ನೋಡಲು ಬರುತ್ತಿದ್ದಾರೆ. ಧನಂಜಯ ನಾಯಕ ನಟನಾಗಿರುವ ‘ಹೊಯ್ಸಳ’ ಸಿನಿಮಾಕ್ಕಾಗಿ ನನ್ನ 5 ಅಪರೂಪದ ‘ಬೆಲ್ಜಿಯನ್ ಮ್ಯಾಲಿನಾಯಿಸ್’ ಶ್ವಾನಗಳ ಜೊತೆ ಕೆಲಸ ಮಾಡುತ್ತಿದ್ದೇನೆ. ತೆಲುಗು, ಮಲೆಯಾಳಂ ನಿರ್ದೇಶಕರಿಂದಲೂ ಆಫರ್ ಬರುತ್ತಿದೆ. ಒಳ್ಳೆಯ ಸಂದೇಶ ನೀಡುವ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ಖುಷಿ ವ್ಯಕ್ತಪಡಿಸಿದರು.


ಪ್ರೀತಿ ಮೂಡಿಸಿದೆ

‘ಚಾರ್ಲಿ’ ಸಿನಿಮಾ ನೋಡಿದವರಲ್ಲಿ ಹಲವರು ಬೀದಿ ನಾಯಿಗಳನ್ನು ತಂದು ಸಾಕಲು ಶುರು ಮಾಡಿದ್ದಾರೆ. ಕೆಲವರು ದತ್ತು ಸ್ವೀಕರಿಸಿದ್ದಾರೆ. ಶ್ವಾನಗಳೆಡೆಗೆ ಪ್ರೀತಿ ಮೂಡಿರುವುದು ಒಳ್ಳೆಯ ಬೆಳವಣಿಗೆ.

–ಪ್ರಮೋದ್, ಟ್ರೇನರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.