ಶುಕ್ರವಾರ, ಏಪ್ರಿಲ್ 16, 2021
23 °C
ಕೋವಿಡ್‌ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಿದ ಸಾಧಕರಿಗೆ ಸನ್ಮಾನ

ಕೊರೊನಾ ಸೇನಾನಿಗಳಿಗೆ ‘ಪ್ರಜಾವಾಣಿ’ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ಸೋಂಕಿನಿಂದ ಜಗತ್ತೇ ಭಯಗೊಂಡಿದ್ದಾಗ ತಮ್ಮ ಕಷ್ಟಗಳನ್ನು ಮರೆತು, ತಮ್ಮವರನ್ನು ಕಳೆದುಕೊಂಡ ನೋವನ್ನು ನುಂಗಿ, ಜೀವದ ಹಂಗು ತೊರೆದು ತಮ್ಮ ತಮ್ಮ ಕರ್ತವ್ಯ ಮಾಡುತ್ತಲೇ ಹೋದವರು ಅವರು; ಪರರ ಕಷ್ಟಗಳಿಗೆ ಮಿಡಿದು, ಪ್ರತಿಫಲಾಪೇಕ್ಷೆ  ಇಲ್ಲದೇ ಎಲೆ ಮರೆಯ ಕಾಯಿಯಂತೆ ನೆರವಿಗೆ ನಿಂತವರು ಹಲವರು.

ಯೋಧರಂತೆ ಅವಿರತವಾಗಿ ದುಡಿದ, ಜನರ– ಜಗದ ನೆಮ್ಮದಿಯನ್ನಲ್ಲದೇ ಬೇರೇನೂ ಬಯಸದ ಅವರು ‘ಕೊರೊನಾ ಸೇನಾನಿಗಳು’.  ‘ಕಾಯಕವೇ ಕೈಲಾಸ’, ‘ಪರೋಪಕಾರವೇ ಉನ್ನತ ಧರ್ಮ’ ಎಂಬುದನ್ನು ನೇಮದಂತೆ ಪಾಲಿಸಿಕೊಂಡು ಬಂದ ಅವರ ಮುಖದಲ್ಲಿ ಸಾರ್ಥಕ ಭಾವವಿತ್ತು. ಮನ್ನಣೆ ಸಿಕ್ಕ ಸಂತಸವಿತ್ತು.

 ಈ ಸಮಾಜಮುಖಿ ಮನಸುಗಳನ್ನು ಒಂದುಗೂಡಿಸಿದ್ದು ‘ಪ್ರಜಾವಾಣಿ’ ಬಳಗ. ನಗರದ ಕಲಾಮಂದಿರದ ‘ಮನೆಯಂಗಳ‘ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕೊರೊನಾ ಸೇನಾನಿಗಳು –2021’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 21 ಮಂದಿ ಸಾಧಕರಿಗೆ, ‘ಪ್ರಜಾವಾಣಿ’ ವತಿಯಿಂದ ಶ್ಲಾಘನಾ ಪತ್ರ ನೀಡಿ ಸನ್ಮಾನಿಸಲಾಯಿತು.

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿನ ನೂರಾರು ಕೊರೊನಾ ಸೇನಾನಿಗಳ ಪ್ರತಿನಿಧಿಗಳಾಗಿ ಅವರನ್ನು ಗೌರವಿಸಲಾಯಿತು.

ಶ್ಲಾಘನಾಪತ್ರ ಪ್ರದಾನ ಮಾಡಿ ಮಾತನಾಡಿದ, ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ‘ ಹಲವಾರು ಸಣ್ಣ ದೇಶಗಳಿಗೂ ಕೋವಿಡ್‌ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಿಲ್ಲ. ಆದರೆ, ಬೃಹತ್‌ ಜನಸಂಖ್ಯೆ ಇರುವ ನಮ್ಮಲ್ಲಿ ಇದು ಸಾಧ್ಯವಾಗಿದೆ ಎಂದರೆ ಅದಕ್ಕೆ ಈ ಪ್ರತಿಯೊಬ್ಬರೂ ಕಾರಣ’ ಎಂದರು.

‘ಸಂಘ ಸಂಸ್ಥೆಗಳು, ಪೌರಕಾರ್ಮಿಕರು, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಪತ್ರಕರ್ತರಿಗೆ ಈ ಶ್ರೇಯಸ್ಸು ಸಲ್ಲುತ್ತದೆ. ಸ್ವಯಂ ರಕ್ಷಣೆಯನ್ನು ಮರೆತು ಕೆಲಸ ಮಾಡಿದ ಹಲವರನ್ನು ನೆನಪಿಸಿಕೊಳ್ಳಲೇ ಬೇಕು. ನಾವು ಉದ್ಯೋಗಿಗಳಾಗಿ ಕೆಲಸ ಮಾಡಿದ್ದರೂ ಹಲವು ಸಂಘ ಸಂಸ್ಥೆಗಳು ಮುಂದೆ ಬಂದು ಕೆಲಸ ಮಾಡಿದ್ದು ಗಮನಾರ್ಹ. ಸಂಪನ್ಮೂಲದ ಕೊರತೆ ಇದ್ದರೂ ಅದನ್ನು ನಿಭಾಯಿಸಿ ಕೆಲಸ ಮಾಡುವ ಅನುಭವ ಸಿಕ್ಕಿದೆ. ಕೋವಿಡ್‌ ಕಾಣಿಸಿಕೊಂಡ ಮೊದಲ 15 ದಿನ ಮಾಸ್ಕ್‌ ಧರಿಸಿಕೊಳ್ಳಲು ಹೇಳುವುದೇ ಕಷ್ಟವಾಗಿತ್ತು. ಆದರೆ, ಈಗ ಸ್ವಯಂ ಪ್ರೇರಣೆಯಿಂದ ಮಾಸ್ಕ್‌ ಧರಿಸಿಕೊಳ್ಳುವಂತಾಗಿದೆ. ಸ್ವಯಂ ರಕ್ಷಣೆಯ ಮಹತ್ವವನ್ನು ಜನ ಕಲಿತಿದ್ದಾರೆ’ ಎಂದರು.

ಕೊರೊನಾ ಸೇನಾನಿಗಳನ್ನು ಅಭಿ ನಂದಿಸಲು ‘ಪ್ರಜಾವಾಣಿ’ ಹಮ್ಮಿಕೊಂಡ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಪ್ರಶಂಸಾ ಪತ್ರ ಸ್ವೀಕರಿಸಿ ಮಾತನಾಡಿದ ಎಎಸ್‌ಐ ದೊರೆಸ್ವಾಮಿ,  ‘ಬಡವರ ಕಷ್ಟವನ್ನು ಕಂಡು ಏನಾದರೂ ಸಹಾಯ ಮಾಡಬೇಕು ಎಂದು ಅಳಿಲು ಸೇವೆ ಮಾಡಿದೆ. ಎಸ್‌ಪಿ ಅವರ ಸಹಕಾರದಲ್ಲಿ ಕೈಲಾದಷ್ಟು ಆಹಾರ ಕಿಟ್‌, ಮಾಸ್ಕ್‌ ನೀಡಿದೆ. ಪ್ರಜಾವಾಣಿ ಗುರುತಿಸಿ ಪ್ರಶಸ್ತಿ ನೀಡಿರುವುದರಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ’ ಎಂದು ತಿಳಿಸಿದರು.

ಮಂಡ್ಯದ ಡೇವಿಡ್‌ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿ ನನ್ನ ಜತೆ ಸಣ್ಣ ಮಕ್ಕಳಿಂದ ಹಿಡಿದು 70 ವರ್ಷದವರೆಗಿನ 30 ಮಂದಿ ಕೊರೊನಾ ವಾರಿಯರ್‌ಗಳಿದ್ದರು. ಪ್ರತಿ ದಿನ ದಾಸೋಹದ ಮೂಲಕ ಸಾರ್ವಜನಿಕರು, ಹಸು, ಕರು, ವಿವಿಧ ಪ್ರಾಣಿ ಪಕ್ಷಿಗಳಿಗೆ ಅನ್ನ ದಾಸೋಹ ಮಾಡಿದ್ದೇವೆ. ಪ್ರತಿ ದಿನ 600 ಮಂದಿಗೆ ಆಹಾರ ನೀಡಿದ್ದೇವೆ. ಎಲ್ಲ ವಾರಿಯರ್‌ಗಳೂ ಸ್ವಯಂ ಪ್ರೇರಣೆಯಿಂದ ಬಂದಿದ್ದರು. ಈ ಪ್ರಶಸ್ತಿಯನ್ನು ಅವರಿಗೇ ಅರ್ಪಣೆ ಮಾಡುತ್ತೇನೆ’ ಎಂದರು.

ಅನಿಷಾ ಸಾವಯವ ಕೃಷಿ ಸಂಸ್ಥೆಯ ವಲ್ಲಿಯಮ್ಮಾಳ್‌ ಮಾತನಾಡಿ, ‘ಸೇಂಟ್‌ಜೋಸೆಫ್‌ ಹೆಲ್ತ್‌ ಸೆಂಟರ್‌ ಹಾಗೂ ಶಿಕ್ಷಕರ ಜತೆ ಸೇರಿ 4000 ಕುಟುಂಬಗಳಿಗೆ 15 ದಿನಕ್ಕೆ ಬೇಕಾದ ಆಹಾರ ಕಿಟ್‌ ವಿತರಿಸಿದೆವು. ನೈಜ ಫಲಾನುಭವಿಗಳಿಗೆ ಕಿಟ್‌ ನೀಡಿದ ಹಾಗೂ ನಾಟಿ ಬಿತ್ತನೆ ಬೀಜ ರಕ್ಷಣೆ ಮಾಡಿದ ಸಂತೃಪ್ತಿ ಸಿಕ್ಕಿದೆ’ ಎಂದು ಖುಷಿ ಪಟ್ಟರು.

‘10 ವರ್ಷಗಳಿಂದ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಯವ ಕೃಷಿ ಬಗ್ಗೆ ಹೆಣ್ಣು ಮಕ್ಕಳಿಗೂ ತರಬೇತಿ ನೀಡುತ್ತಿದ್ದೇವೆ. 4 ವರ್ಷದಿಂದ ಮಕ್ಕಳಿಗೂ ತರಬೇತಿ ನೀಡಿ ಪ್ರತಿ ಮನೆಗಳಲ್ಲೂ ಸಾವಯವ ತರಕಾರಿ ಬೆಳೆಸಬೇಕು ಎಂದು ನಮ್ಮ ಉದ್ದೇಶವಾಗಿತ್ತು. 2 ಸಾವಿರ ಮಕ್ಕಳಿಗೆ ನಾಟಿ ಬಿತ್ತನೆ ಬೀಜ ನೀಡಿದ್ದೆವು. ಕೊರೊನಾ ಬಂದಾಗ ಶಾಲೆಗೂ ರಜೆ ಇತ್ತು. ಎಲ್ಲರೂ ಮನೆಯಲ್ಲೇ ಇದ್ದರು. ಆಗ ತರಕಾರಿಯ ಮಹತ್ವ ಎಲ್ಲರಿಗೂ ತಿಳಿಯಿತು. ಹೆಚ್ಚು ಜನ ತರಕಾರಿ ಬೆಳೆದರು. ಜತೆಗೆ ನಾಟಿ ಬಿತ್ತನೆ ಬೀಜಕ್ಕೂ ಮಹತ್ವ ಬಂದಿತು’ ಎಂದರು.

ವೈದ್ಯಕೀಯ ಸಿಬ್ಬಂದಿ ನಿಯೋಜಿಸುವ ಹೊಣೆಗಾರಿಕೆ ಹೊತ್ತಿದ್ದ ನೋಡೆಲ್ ಅಧಿಕಾರಿ (ಮಾನವ ಸಂಪನ್ಮೂಲ) ಮೈಸೂರಿನ ಡಾ.ಪಿ.ರವಿ ಮಾತನಾಡಿ, ‘ಆಗಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ನಮಗೆ ಕ್ಯಾಪ್ಟನ್‌ನಂತೆಯೂ ಎಸ್‌ಪಿ ಸಿ.ಬಿ.ರಿಷ್ಯಂತ್‌ ಅವರು ಉಪ ಕ್ಯಾಪ್ಟನ್‌ನಂತೆಯೂ ಕಾರ್ಯನಿ ರ್ವಹಿಸಿದ್ದರು. ಆರಂಭದ ದಿನಗಳಲ್ಲಿ ಒಂದು ತಂಡವಾಗಿ 24 ಗಂಟೆಯೂ ಕೆಲಸ ನಿರ್ವಹಿಸಿದ್ದೆವು. ಮೈಸೂರಿಗರ ರಕ್ಷಣೆಯೇ ನಮ್ಮ ಆದ್ಯತೆಯಾಗಿತ್ತು. ಜಿಲ್ಲಾಸ್ಪತ್ರೆಯ ಹೊಸ ಕಟ್ಟಡ ಖಾಲಿ ಇದ್ದುದೂ ಮೈಸೂರಿಗರ ಅದೃಷ್ಟ’ ಎಂದು ನೆನಪಿಸಿಕೊಂಡರು.

ಡೆಕ್ಕನ್‌ ಹೆರಾಲ್ಡ್‌ ಮೈಸೂರು ಬ್ಯೂರೊ ಮುಖ್ಯಸ್ಥ ಟಿ.ಆರ್‌.ಸತೀಶ್‌ಕುಮಾರ್‌ ಇದ್ದರು.

ಪ್ರಜಾವಾಣಿ ಮೈಸೂರು ಬ್ಯೂರೊ ಮುಖ್ಯಸ್ಥರಾದ ವಿಶಾಲಾಕ್ಷಿ ಅಕ್ಕಿ ಕಾರ್ಯಕ್ರಮ ನಿರೂಪಿಸಿದರು. ಮಂಡ್ಯ ಜಿಲ್ಲಾ ವರದಿಗಾರ ಎಂ.ಎನ್‌.ಯೋಗೇಶ್‌ ವಂದಿಸಿದರು.

‘ಕೆಲಸ ಮಾಡೋದೇ ಧರ್ಮ’

ಪೌರಕಾರ್ಮಿಕರಾದ ಹಾಸನದ ಅನುರಾಧಾ ಮಾತನಾಡಿ, ‘ಪೌರ ಕಾರ್ಮಿಕರನ್ನೂ ಕೊರೊನಾ ವಾರಿಯರ್‌ ಎಂದು ಗುರುತಿಸಿದ್ದು, ಖುಷಿ ನೀಡಿದೆ. ಇಷ್ಟು ದಿನ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಕಾಗದಗಳನ್ನು ತೆಗೆದು ಸ್ವಚ್ಛ ಮಾಡುತ್ತಿದ್ದ ನಾನೇ ಇಂದು ಪತ್ರಿಕೆಯೊಂದರ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿ ನೀಡಿದೆ. ಇಂಥ ಸಂಭ್ರಮ ಪೌರ ಕಾರ್ಮಿಕರಿಗೆ ಹೆಮ್ಮೆ. ನಿಮ್ಮ ಹೆಸರು ಪೇಪರಲ್ಲಿ ಬಂದಿದೆ ಎನ್ನುತ್ತಾರೆ’ ಎಂದು ಸಂತಸ ಹಂಚಿಕೊಂಡರು.

‘ಕೊರೊನಾ ವಾರಿಯರ್‌ಗಳು ಕೂಡ ಆರಂಭದಲ್ಲಿ ಭಯದಲ್ಲೇ ಕೆಲಸ ಮಾಡುತ್ತಿದ್ದರು. ಆದರೆ ನಾವು ಭಯಪಡಲಿಲ್ಲ. ಕೆಲಸ ಮಾಡುವುದೇ ನಮ್ಮ ಧರ್ಮ. ನಮ್ಮ ಅನ್ನದ ದುಡಿಮೆಗಾಗಿ ಭಯ ಇಲ್ಲದೆ ಕೆಲಸ ಮಾಡುತ್ತೇವೆ. ಹಿಂದೆ ಪೌರ ಕಾರ್ಮಿಕರನ್ನು ಜನ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಖುಷಿಯಿಂದ ಗುರುತಿಸುತ್ತಾರೆ’ ಎಂದರು.

ಪ್ರಶಸ್ತಿ ಪುರಸ್ಕೃತರು

8ವೈದ್ಯಕೀಯ ಸಿಬ್ಬಂದಿ ನಿಯೋಜಿಸುವ ಹೊಣೆಗಾರಿಕೆ ಹೊತ್ತಿದ್ದ ನೋಡಲ್

ಅಧಿಕಾರಿ (ಮಾನವ ಸಂಪನ್ಮೂಲ) ಮೈಸೂರಿನ ಡಾ.ಪಿ.ರವಿ

8ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಇಎನ್‌ಟಿ ವಿಭಾಗದಲ್ಲಿ

ಎಂ.ಎಸ್‌ ಅಧ್ಯಯನ ಮಾಡುತ್ತಿರುವ ಡಾ.ದೇಸು ವೈಷ್ಣವಿ

8ಮಡಿಕೇರಿಯ ವಿಲೇಜ್‌ ನರ್ಸ್‌ ಕೃತಿಕಾ ರಾಣಿ

8ಹಾಸನದ ಹಿಮ್ಸ್‌ನ ಶೂಶ್ರಷಕ ಅಧಿಕಾರಿ ಕುಮಾರ್ ಸಿ.ಆರ್.

8ಹಾಸನದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ

8ಎಚ್.ಡಿ.ಕೋಟೆಯ ಎಎಸ್‌ಐ ದೊರೆಸ್ವಾಮಿ

8ಮಡಿಕೇರಿಯ ಪೌರ ಕಾರ್ಮಿಕ ನರಸಿಂಹಮೂರ್ತಿ

8ಚಾಮರಾಜನಗರದ ಸ್ವಯಂ ಸೇವಕಿ ದಾಕ್ಷಾಯಿಣಿ ಎನ್.

8ಹಾಸನದ ಸ್ವಯಂಸೇವಕ ಉಮೇಶ್‌

8ಮೈಸೂರಿನ ಆಂಬುಲೆನ್ಸ್‌ ಚಾಲಕ ಎಸ್‌.ನಾಗರಾಜ

8ಮೈಸೂರಿನ ನೋಡೆಲ್‌ ಅಧಿಕಾರಿ ಅನಿಲ್‌ ಕ್ರಿಸ್ಟಿ

8ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ ಡಿ ದರ್ಜೆ ನೌಕರ ಕೀರ್ತಿ

8ಮೂಕ ಪ್ರಾಣಿಗಳ ಹಸಿವಿಗೆ ನೆರವಾಗಿ ನಿಂತ ಮೈಸೂರಿನ ನಿವೇದಿತಾ

8ಮೈಸೂರಿನ ಸ್ವಯಂ ಸೇವಕಿ ನಿಶಿತಾ ಕೃಷ್ಣಸ್ವಾಮಿ

8ಹಾಸನದ ಏಕಲವ್ಯ ರೋವರ್ಸ್ ತಂಡದ ನಾಯಕ ಆರ್‌.ಜಿ.ಗಿರೀಶ್‌

8ಹಾಸನದ ಎಪಿಎಂಸಿಯಲ್ಲಿ ಸಗಟು ಅಕ್ಕಿ ವ್ಯಾಪಾರಿ ಆಗಿರುವ ದಸ್ತಗೀರ್‌

8ಹಾಸನ ಪುರಸಭೆಯ ಹೊರಗುತ್ತಿಗೆ ಪೌರಕಾರ್ಮಿಕರಾದ ಅನುರಾಧಾ

ಸಂಘ–ಸಂಸ್ಥೆಗಳು

8ಚಾಮರಾಜನಗರದ ಸೇಂಟ್‌ಜೋಸೆಫ್‌ ಹೆಲ್ತ್‌ ಸೆಂಟರ್‌, ಅನಿಷಾ ಸಾವಯವ

ಕೃಷಿ ಸಂಸ್ಥೆ

8ಮೈಸೂರಿನ ಕ್ರೆಡಿಟ್‌ ಐ – ಸ್ವಯಂ ಸೇವಾ ಸಂಸ್ಥೆ

8ಮೈಸೂರಿನ ಎಸ್‌ಎಂಪಿ ಫೌಂಡೇಷನ್‌

8ಮಂಡ್ಯದ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು