ಶನಿವಾರ, ಅಕ್ಟೋಬರ್ 8, 2022
21 °C
ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧಿಕಾರ ದುರುಪಯೋಗ:

ಭ್ರಷ್ಟಾಚಾರ: ರಾಜ್ಯಪಾಲಗೆ ದೂರು- ಕೆ.ಮಹದೇವ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮೈಸೂರು ವಿಶ್ವವಿದ್ಯಾಲ ಯದಲ್ಲಿ ಭ್ರಷ್ಟಾಚಾರ ನಡೆದಿದ್ದು, ಪೂರಕ ದಾಖಲೆಗಳೊಂದಿಗೆ ರಾಜ್ಯಪಾಲರಿಗೆ ದೂರು ಪತ್ರ ಬರೆಯಲಾಗಿದೆ’ ಎಂದು ಕೆ.ಮಹದೇವ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಲಪತಿ, ಕುಲಸಚಿವ, ಕುಲಪತಿಗಳ ವಿಶೇಷ ಅಧಿಕಾರಿ ಹಾಗೂ ಕೆಸೆಟ್‌ ಕಾರ್ಯದರ್ಶಿಯು ಅಧಿಕಾರ ದುರುಪಯೋಗಪಡಿಸಿಕೊಂಡು ಟೆಂಡರ್‌ ಅನ್ನು ನಿಯಮಬಾಹಿರವಾಗಿ ನೀಡಿದ್ದಾರೆ’ ಎಂದು ಆರೋಪಿಸಿದರು. 

‘ಪರೀಕ್ಷಾ ಕಾರ್ಯ ಚಟುವಟಿಕೆ ನಿರ್ವಹಿಸುವ ಟೆಂಡರ್‌ ಅನ್ನು ನಿಯಮಗಳನ್ನು ಉಲ್ಲಂಘಿಸಿ ಅಧಿಕ ಮೊತ್ತಕ್ಕೆ ನೀಡಲಾಗಿದೆ. ವಿದ್ಯಾರ್ಥಿಯ ಅಧ್ಯಯನ ಪತ್ರಿಕೆ ನಿರ್ವಹಿಸಲು ಸಿಬ್ಬಂದಿಗೆ ₹ 64 ನೀಡಲಾಗುತ್ತಿತ್ತು. ಅದನ್ನು ₹ 360ಕ್ಕೆ ಹೆಚ್ಚಿಸಲಾಗಿದೆ. 1 ಲಕ್ಷ ವಿದ್ಯಾರ್ಥಿಗಳಿಗೆ ಸೆಮಿಸ್ಟರ್‌ ಪರೀಕ್ಷೆ ನಡೆಸಲು ₹ 2.56 ಕೋಟಿ ಖರ್ಚಾಗುತ್ತದೆ. ಹೊಸ ಟೆಂಡರ್‌ನಿಂದ 2019ರಿಂದ ಇದುವರೆಗೂ ₹ 10.26 ಕೋಟಿ ಹಣ ವಿಶ್ವವಿದ್ಯಾಲಯಕ್ಕೆ ನಷ್ಟವಾಗಿದೆ’ ಎಂದು ಆರೋಪಿಸಿದರು. 

‘ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ನಿಯಮ ಬಾಹಿರವಾಗಿ ಕೋವಿಡ್‌ ಸಂದರ್ಭದಲ್ಲಿ 590 ಬೋಧಕೇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿತ್ತು. ಆ ಸಿಬ್ಬಂದಿಯನ್ನು ಬಿಡುಗಡೆ ಮಾಡಲು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸೆ.9, 2021ರಂದು ನೋಟಿಸ್‌ ನೀಡಿದ್ದರು’ ಎಂದು ಉಲ್ಲೇಖಿಸಿದರು. 

‘ರಾಜ್ಯಪಾಲರಿಗಲ್ಲದೆ, ಲೋಕಾಯುಕ್ತಕ್ಕೂ ಆ.23ರಂದು ದೂರು ನೀಡಲಾಗಿದೆ. ಸಿಂಡಿಕೇಟ್‌ ಸಭೆಯಲ್ಲಿ ಪಾಲ್ಗೊಳ್ಳುವ ಸದಸ್ಯರ ಭತ್ಯೆಯನ್ನು ₹ 5 ಸಾವಿರದಿಂದ ₹ 7 ಸಾವಿರಕ್ಕೆ ಹಾಗೂ ಪ್ರಯಾಣ ಭತ್ಯೆಯನ್ನು ಶೇ 50ರಷ್ಟು ಹೆಚ್ಚಿಸಲಾಗಿದೆ’ ಎಂದು ದೂರಿದರು. 

‘ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯು ತನಿಖಾ ತಂಡವು ದಾಖಲೆಗಳನ್ನು ಪರಿಶೀಲಿಸಿದೆ. ಮಾಹಿತಿ ಹಕ್ಕು ಕಾಯ್ದೆಯಿಂದ 2019–20ರ ಲೆಕ್ಕ‍ಪತ್ರದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ್ದು, ಅದನ್ನು ಆಧರಿಸಿ ರಾಜ್ಯಪಾಲರಿಗೆ ದೂರು ನೀಡಿದ್ದೇನೆ’ ಎಂದರು.

‘ಆರೋಪಗಳ ಬಗ್ಗೆ ತಿಳಿದಿಲ್ಲ’: ‘ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ತಂಡವು ವಿಶ್ವವಿದ್ಯಾಲಯಕ್ಕೆ ಆ.22ರಂದು ಆಗಮಿಸಿ ಲೆಕ್ಕ ಪರಿಶೋಧನೆ ನಡೆಸಿತು. ವಿಶ್ವವಿದ್ಯಾಲಯದಿಂದ ದಾಖಲೆ, ಕಡತಗಳು, ಪೂರಕ ಮಾಹಿತಿಯನ್ನು ನೀಡಲಾಗಿದೆ. ಅಗತ್ಯ ಸಹಕಾರವನ್ನು ನೀಡಲಾಗಿದೆ’ ಎಂದು ಕುಲಸಚಿವ ಪ್ರೊ.ಆರ್.ಶಿವಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಾನೂನಿಗಿಂತ ಬೇರೆ ಯಾವುದೂ ದೊಡ್ಡದಿಲ್ಲ. ದೂರುದಾರರ ಆರೋಪಗಳ ಬಗ್ಗೆ ತಿಳಿದಿಲ್ಲ. ಯಾವ ದಾಖಲೆ ಆಧರಿಸಿ ಆರೋಪಿಸುತ್ತಿದ್ದಾರೋ ಗೊತ್ತಿಲ್ಲ. ನಮ್ಮಿಂದ ಯಾವುದೇ ದಾಖಲೆಯನ್ನು ದೂರುದಾರರು ಪಡೆದಿಲ್ಲ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು