ಗುರುವಾರ , ನವೆಂಬರ್ 26, 2020
21 °C
ವಿಜಯದಶಮಿ ಮೆರವಣಿಗೆ: ಸಡಗರ, ವೈಭವ ದೂರ; -ಎಲ್ಲವೂ ಸರಳ, ಸಾಂಪ್ರದಾಯಿಕ

ಜನಸಾಮಾನ್ಯರಿಗೆ ಪ್ರವೇಶವಿಲ್ಲದ ದಸರೆ ಸಂಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಉತ್ಸವವೆಂದರೆ ಜನ, ಮೆರವಣಿಗೆ ಎಂದರೆ ಸಂಭ್ರಮ, ಹರ್ಷೋದ್ಗಾರ... ಆದರೆ, ಭವ್ಯ ಪರಂಪರೆಯ, ಐತಿಹಾಸಿಕ ಹಿರಿಮೆಯ 410ನೇ ದಸರಾ ಮಹೋತ್ಸವ ಜನಸಾಮಾನ್ಯರ ಅನುಪಸ್ಥಿತಿಯಲ್ಲೇ, ಸಂಭ್ರಮ, ವೈಭೋಗವಿಲ್ಲದೆ ಸಂಪನ್ನಗೊಂಡಿತು. ಆತಂಕ, ಭಯ, ನಿರ್ಬಂಧಗಳಲ್ಲೇ ಮುಕ್ತಾಯವಾಯಿತು.

ಕೋವಿಡ್‌ ಆತಂಕದಿಂದಾಗಿ ಈ ಬಾರಿ ನಾಡಹಬ್ಬವು ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆರವಣಿಗೆಗಷ್ಟೇ ಸೀಮಿತವಾಯಿತು. ಜಂಬೂಸವಾರಿಯ ಅಂಬಾವಿಲಾಸ ಅರಮನೆ ಆವರಣದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಯಿತು.

ಪ್ರತಿ ವಿಜಯದಶಮಿ ಮೆರವಣಿಗೆ ಸಮಯದಲ್ಲಿ 30 ಸಾವಿರಕ್ಕೂ ಮಂದಿ ಮಂದಿ ಸೇರುತ್ತಿದ್ದ ಅರಮನೆ ಆವರಣದಲ್ಲಿ ಈ ಬಾರಿ ಕಲಾವಿದರು, ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಹಾಗೂ ಪೊಲೀಸರು ಕಾಣುತ್ತಿದ್ದರು.

ಮಧ್ಯಾಹ್ನ 2ರಿಂದ 3 ಗಂಟೆಯೊಳಗೆ ರಾಜವಂಶಸ್ಥರ ನಿವಾಸದ ಮುಂದೆ ಅಭಿಮನ್ಯುವಿಗೆ ಅಂಬಾರಿ ಕಟ್ಟಲಾಯಿತು. ಬೂದಗುಂಬಳದಿಂದ ದೃಷ್ಟಿ ತೆಗೆಯಲಾಯಿತು. ಅದಕ್ಕೂ ಮೊದಲು ಅಂಬಾರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಅರ್ಚಕ ಪ್ರಹ್ಲಾದ್‌‌ ರಾವ್‌ ನೇತೃತ್ವದಲ್ಲಿ ಪಂಚ ಫಲ ಇಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ಪೂಜೆಯ ನೈವೇದ್ಯವನ್ನು ಅಭಿಮನ್ಯುವಿಗೆ ತಿನ್ನಿಸಲಾಯಿತು. ಚಾಮುಂಡಿಬೆಟ್ಟದಿಂದ ಬೆಳಿಗ್ಗೆ 10 ಗಂಟೆಗೇ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗಿತ್ತು.

ಮಲ್ಲಿಗೆ, ಕನಕಾಂಬರ ಪುಷ್ಪಾರ್ಚನೆ: ಮಧ್ಯಾಹ್ನ 3ರ ಸುಮಾರಿಗೆ ನಂದಿಧ್ವಜ ಪೂಜೆ ಮುಗಿದು, 3.24ಕ್ಕೆ ವಿಜಯದಶಮಿ ಮೆರವಣಿಗೆ ಶುರುವಾಯಿತು. ಕಲಾ ತಂಡಗಳ ಪ್ರದರ್ಶನ ಮುಗಿಯುತ್ತಿದ್ದಂತೆ ಉತ್ಸವ ಮೂರ್ತಿ ಚಾಮುಂಡೇಶ್ವರಿಯಿದ್ದ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಯು ಅರಮನೆ ಎದುರು ಪೂಜೆಗಾಗಿ ನಿರ್ಮಿಸಿದ್ದ ವಿಶೇಷ ವೇದಿಕೆ ಪಕ್ಕ ಬಂದು ನಿಂತಿತು. ಆಗ ಎಲ್ಲರೂ ಎದ್ದು ನಿಂತು ನಮಿಸಿದರು.

ಮೆರವಣಿಗೆ ಕೊನೆಯಲ್ಲಿ ಅಂದರೆ ಮಧ್ಯಾಹ್ನ3.54ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿಶೇಷ ವೇದಿಕೆ ಮೇಲೇರಿ ಉತ್ಸವ ಮೂರ್ತಿಗೆ ಎರಡು ಬಾರಿ ಮಲ್ಲಿಗೆ, ಕನಕಾಂಬರ ಪುಷ್ಪಾರ್ಚನೆ ಮಾಡಿದರು. ಅಭಿಮನ್ಯು ಆನೆಯು ಸೊಂಡಿಲೆತ್ತಿ ಎಲ್ಲರಿಗೂ ನಮಸ್ಕರಿಸಿತು. ಅದರ ಬಲಭಾಗದಲ್ಲಿ ಕಾವೇರಿ, ಎಡಭಾಗದಲ್ಲಿ ವಿಜಯಾ ಆನೆ ಇದ್ದವು.

ಪುಷ್ಪಾರ್ಚನೆ ವೇಳೆ ವಿಶೇಷ ವೇದಿಕೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಮೇಯರ್‌ ತಸ್ನೀಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ ಇದ್ದರು.

ಮೆರವಣಿಗೆ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಬಿ.ಹರ್ಷವರ್ಧನ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಇದ್ದರು.

ಕೋಟೆ ಭೇದಿಸಿದ ಅಭಿಮನ್ಯು!

ಇದೇ ಮೊದಲ ಬಾರಿ ಅಭಿಮನ್ಯು ಆನೆಯು 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿತು. ಎಂಟು ವರ್ಷಗಳಿಂದ ಜಂಬೂಸವಾರಿಯ ಮುಂದಾಳತ್ವ ವಹಿಸಿಕೊಳ್ಳುತ್ತಿದ್ದ ಅರ್ಜುನ ಆನೆಗೆ 60 ವರ್ಷ ತುಂಬಿದ ಕಾರಣ ಈ ಬದಲಾವಣೆ ಮಾಡಲಾಗಿದೆ.

54 ವರ್ಷದ ಅಭಿಮನ್ಯು 21 ವರ್ಷಗಳಿಂದ ದಸರೆಯಲ್ಲಿ ಪಾಲ್ಗೊಂಡಿದ್ದರೂ ಅಂಬಾರಿ ಹೊತ್ತಿರಲಿಲ್ಲ. ಆದರೆ, ಈ ಸಲ ಮೊದಲ ಅವಕಾಶದಲ್ಲಿ ಯಶಸ್ವಿಯಾಗಿದೆ. ಮತ್ತಿಗೋಡು ಶಿಬಿರದ ಈ ಆನೆಯ ಮಾವುತ ವಸಂತ ಹಾಗೂ ಕಾವಾಡಿಗ ರಾಜು ಅವರಿಗೆ ವಿಶೇಷ ಅನುಭವ. ಕುಮ್ಕಿ ಆನೆಗಳಾದ ಕಾವೇರಿ, ವಿಜಯಾ, ನಿಶಾನೆ ವಿಕ್ರಂ ಹಾಗೂ ನೌಫತ್‌ ಆನೆ ಗೋಪಿ ಯಶಸ್ವಿಯಾಗಿ ಸಾಥ್‌ ನೀಡಿದವು.

ಜಂಬೂಸವಾರಿ ಮಾರ್ಗ

ಪ್ರತಿ ವರ್ಷ ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ಸಾಗುತ್ತಿದ್ದ ಮೆರವಣಿಗೆ ಈ ಬಾರಿ ಅರಮನೆ ಆವರಣದೊಳಗೆ ಕೇವಲ
300 ಮೀಟರ್‌ಗೆ ಸೀಮಿತಗೊಂಡಿತು.

ರಾಜವಂಶಸ್ಥರು ವಾಸಿಸುವ ಅರಮನೆಯ ಮುಂಭಾಗದ ಅಂಬಾರಿ ಕಟ್ಟುವ ಜಾಗದಿಂದ ವರಾಹ ದ್ವಾರಕ್ಕೆ ಗಜಪಡೆ ಬಂದಿತು. ಇಲ್ಲಿಂದ ಮೆರವಣಿಗೆ ಆರಂಭಗೊಂಡಿತು. ಬಳಿಕ ಪುಷ್ಪಾರ್ಚನೆಗಾಗಿ ಆನೆಗಳು ಅರಮನೆ ಮುಂಭಾಗ ನಿಂತವು. ಆನಂತರ ಮೆರವಣಿಗೆಯು ನೇರವಾಗಿ ಬಲರಾಮ ದ್ವಾರದ (ಆಂಜನೇಯಸ್ವಾಮಿ ದೇಗುಲ) ಕಡೆ ತೆರಳಿತು. ಈ ದ್ವಾರದ ಬಳಿ ಎಡಕ್ಕೆ ತಿರುವು ಪಡೆದು, ಮತ್ತೆ ಎಡಕ್ಕೆ ಸಾಗಿ ಅಂಬಾರಿ ಕಟ್ಟುವ ಜಾಗದಲ್ಲಿ ಕೊನೆಗೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು