ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ದೀಪಾವಳಿಗೆ ಕಳೆಗಟ್ಟಿದ ಖರೀದಿ ಭರಾಟೆ

ಹೂ ದರ ಕೊಂಚ ದುಬಾರಿ; ಪಟಾಕಿಗೆ ಹೆಚ್ಚಿದ ಬೇಡಿಕೆ; ಶೀತಮಯ ವಾತಾವರಣದಿಂದ ಕೆಡುತ್ತಿರುವ ಹೂಗಳು
Last Updated 5 ನವೆಂಬರ್ 2021, 5:52 IST
ಅಕ್ಷರ ಗಾತ್ರ

ಮೈಸೂರು: ಬಲಿಪಾಡ್ಯಮಿಯ ಮುನ್ನಾ ದಿನವಾದ ಗುರುವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಹೆಚ್ಚಿತ್ತು. ಹೂವಿನ ಬೆಲೆ ಕೊಂಚ ದುಬಾರಿಯಾದರೆ, ಪಟಾಕಿಗಳ ದರ ನಿರೀಕ್ಷೆ ಮೀರಿ ಹೆಚ್ಚಿತ್ತು. ಒಂದು ತಿಂಗಳಿ ನಿಂದ ತರಕಾರಿ ದರವೂ ನಿಯಂತ್ರಣಕ್ಕೆ ಬಾರದಿರುವುದರಿಂದ ಗ್ರಾಹಕರು ಬೆಲೆ ಏರಿಕೆ ಬಿಸಿಯಲ್ಲಿ ಬಸವಳಿದರು.

ಸತತ ಮಳೆಯಿಂದ ಹೂವು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗದೆ ದರಗಳು ಹೆಚ್ಚಿ, ಗ್ರಾಹಕರಿಗೆ ಹೊರೆ ಎನಿಸಿವೆ. ಆದರೆ, ದರ ಹೆಚ್ಚಾದರೂ ಇಳುವರಿ ಕೊರತೆಯಿಂದ ರೈತರಿಗೆ ಲಾಭವಾಗುತ್ತಿಲ್ಲ. ಶೀತಮಯ ವಾತಾವರಣದಿಂದ ಹೂಗಳು ಬೇಗ ಕೆಡುತ್ತಿದ್ದು, ಸಂಜೆ ವೇಳೆ ವ್ಯಾಪಾ ರಸ್ಥರು ಸಿಕ್ಕಷ್ಟು ದರಕ್ಕೆ ಮಾರಾಟ ಮಾಡು ವಂತಹ ಸ್ಥಿತಿ ಹಲವೆಡೆ ಸೃಷ್ಟಿಯಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದೇವರಾಜ ಮಾರು ಕಟ್ಟೆಯ ಗಾಯತ್ರಿ ಹೂವಿನ ಅಂಗಡಿ ಮಾಲೀಕ ಮಂಜುನಾಥ್, ‘ಹಿಂದಿನ ದೀಪಾವಳಿಗಳಿಗೆ ಹೋಲಿಸಿದರೆ ಈ ದೀಪಾವಳಿ ಯಾರಿಗೂ ಲಾಭ ತರಿಸುತ್ತಿಲ್ಲ. ಮೂಟೆಗಳಲ್ಲಿ ಹೂವನ್ನು ತರುತ್ತಿದ್ದ ರೈತರು ಬ್ಯಾಗುಗಳಲ್ಲಿ ತರುವಂತಾಗಿದೆ. ಬೆಲೆ ಏರಿಕೆಯಾದರೂ ಅವರಿಗೆ ಲಾಭ ಸಿಗುತ್ತಿಲ್ಲ’ ಎಂದರು.

‘ಮಲ್ಲಿಗೆ ಪ್ರತಿ ಕೆ.ಜಿಗೆ ₹600 ಇದ್ದ ದರ ಗುರುವಾರ 1,200ಕ್ಕೆ ಏರಿತ್ತು. ಕನಕಾಂಬರ ₹800, ಸುಗಂಧರಾಜ ₹120, ಮರಳೆ ₹700, ಚೆಂಡು ಹೂ ₹50, ಸೇವಂತಿಗೆ ಒಂದು ಮಾರಿಗೆ ₹50ರಿಂದ ₹80ರವರೆಗೆ ಮಾರಾಟವಾಗಿದೆ. ಆದರೆ, ಸಂಜೆಯಾ ಗುತ್ತಿದ್ದಂತೆ ಹೂಗಳು ಕೆಡುವುದರಿಂದ ಬೆಲೆ ಇಳಿಕೆಯಾಗುತ್ತಿದೆ’ ಎಂದು ತಿಳಿಸಿದರು.

ಎಚ್.ಡಿ.ಕೋಟೆ ತಾಲ್ಲೂಕಿನ ಆಗತ್ತೂರು ಗ್ರಾಮದ ಹೂವಿನ ಬೆಳೆಗಾರ ಗೋವಿಂದರಾಜು ಪ್ರತಿಕ್ರಿಯಿಸಿ, ‘10 ಗುಂಟೆ ಜಮೀನಿನಲ್ಲಿ ಈ ಹಿಂದೆ 10ರಿಂದ 12 ಕೆ.ಜಿಯಷ್ಟು ಕಾಕಡ ಹೂ ಸಿಗುತ್ತಿತ್ತು. ಈಗ 250ರಿಂದ 300 ಗ್ರಾಂನಷ್ಟು ಮಾತ್ರವೇ ಸಿಗುತ್ತಿದೆ. ಮಳೆಯಿಂದ ಭೂಮಿ ಶೀತವಿಡಿದು ಇಳುವರಿ ತೀರಾ ಕಡಿಮೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಾವಿನಸೊಪ್ಪು, ಬಾಳೆಕಂದುಗಳ ವ್ಯಾಪಾರ ಅಲ್ಲಲ್ಲಿ ನಡೆಯಿತು. ದೀಪಗಳ ಖರೀದಿ, ಮನೆಯ ಮುಂದೆ ತೂಗು ಹಾಕುವ ಬೆಳಕಿನ ಬುಟ್ಟಿ, ಆಕಾಶದೀಪಗಳ ಖರೀದಿಯೂ ಹೆಚ್ಚಿತ್ತು.

ನಿಯಂತ್ರಣಕ್ಕೆ ಬಾರದ ತರಕಾರಿ ದರ: ಒಂದು ತಿಂಗಳಿನಿಂದ ದುಬಾರಿಯಾಗಿರುವ ತರಕಾರಿ ದರ ನಿಯಂತ್ರಣಕ್ಕೆ ಬಂದಿಲ್ಲ. ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆ ಕೆ.ಜಿಗೆ ₹30 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹50 ದಾಟಿತ್ತು. ಬೀನ್ಸ್ ₹30, ಬದನೆ ₹20, ಕ್ಯಾರೆಟ್ ₹35, ದಪ್ಪಮೆಣಸಿನಕಾಯಿ ₹90, ಎಲೆಕೋಸು ₹8ರ ದರದಲ್ಲಿ ಎಪಿಎಂಸಿಯಲ್ಲಿ ಮಾರಾಟವಾಗಿದೆ.

ದೇಗುಲಗಳಲ್ಲಿ ಸಿಂಗಾರ: ಮಾವಿನ ತೋರಣ, ಬಾಳೆಕಂದುಗಳ ಮೂಲಕ ದೇಗುಲಗಳನ್ನು ಸಿಂಗರಿಸ ಲಾಗಿತ್ತು. ಸಿದ್ದಪ್ಪ ಚೌಕ, ಹೊಸಕೇರಿ, ಲಷ್ಕರ್ ಮೊಹಲ್ಲಾ, ನಾರಾಯಣಶಾಸ್ತ್ರಿ ರಸ್ತೆಗಳಲ್ಲಿರುವ ಮಹದೇಶ್ವರ ದೇಗುಲಗಳಿಗೆ ಹೆಚ್ಚಿನ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಕೊಲ್ಲಾಪುರದ ಮಹಾಲಕ್ಷ್ಮಿ ದೇಗುಲ ದಲ್ಲಿ ಹೆಚ್ಚಿನ ಭಕ್ತರು ಕಂಡು ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT