ಸೋಮವಾರ, ಆಗಸ್ಟ್ 15, 2022
26 °C

ಪ್ರಜಾವಾಣಿ ಫೋನ್‌–ಇನ್‌; ಸುಲಭ ಪರೀಕ್ಷೆಯ ಅವಕಾಶ ಬಿಡದಿರಿ- ಡಿಡಿಪಿಐ ಪಾಂಡುರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈ ಬಾರಿಯಂಥ ಉತ್ತಮ ಅವಕಾಶ ಮುಂದೆ ಸಿಗುವ ಸಾಧ್ಯತೆಯಿಲ್ಲ. ಅತ್ಯಂತ ಸುಲಭ ವಿಧಾನದಲ್ಲಿ ಪರೀಕ್ಷೆ ನಡೆಯಲಿದ್ದು, ಯಾರೂ ತಪ್ಪಿಸಿಕೊಳ್ಳಬೇಡಿ. ಭಯ, ಅತಂಕವನ್ನೆಲ್ಲಾ ಬಿಟ್ಟು ಬನ್ನಿ. ಹಾಜರಾಗುವ ಎಲ್ಲರಿಗೂ ಉತ್ತೀರ್ಣರಾಗುವ ಅವಕಾಶ ಇದೆ’

– ಕೋವಿಡ್‌ ಅತಂಕದ ನಡುವೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿ‍‍ಪಿಐ) ಪಾಂಡುರಂಗ ಹೀಗೆ ಆತ್ಮಸ್ಥೈರ್ಯ ತುಂಬಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಜುಲೈ 19 ಮತ್ತು 22 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ ‘ಫೋನ್ ಇನ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲಗಳನ್ನು ಪರಿಹರಿಸಿದರು. ಪ್ರತಿ ಕರೆಗೂ ಸ್ಪಂದಿಸಿ ಅಗತ್ಯ ಮಾಹಿತಿ ನೀಡಿದರು.

‘‍ಹೆಸರು ನೋಂದಾಯಿಸಿಕೊಂಡಿರುವ ಎಲ್ಲ ಮಕ್ಕಳೂ ಪರೀಕ್ಷೆಗೆ ಹಾಜರಾಗಬೇಕು ಎಂಬ ಸೂಚನೆಯನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಕೊಟ್ಟಿದ್ದೇವೆ. ಹಾಲ್ ಟಿಕೆಟ್‌ ಸಿಕ್ಕಿಲ್ಲ ಅಥವಾ ಬಸ್ಸು ಸೌಕರ್ಯ ಇಲ್ಲ ಎಂಬ ಕಾರಣದಿಂದ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತರಾಗಬಾರದು. ಆ ರೀತಿಯ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಪರೀಕ್ಷೆ ಬರೆಯುವ ವಿಧಾನದ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಫೋನ್‌ ಕರೆ ಮಾಡಿ ತಿಳಿಸಲಾಗಿದೆ. ವಾಟ್ಸ್ಆ್ಯಪ್‌ ಮತ್ತು ಪೋಷಕರ ಇ–ಮೇಲ್‌ಗೂ ಮಾಹಿತಿ ಕಳುಹಿಸಲಾಗಿದೆ. ಪರೀಕ್ಷೆ ಕೊಠಡಿಗೆ ಬಂದ ಬಳಿಕ ಗೊಂದಲ ಇದೆ ಎನ್ನುವ ಮಕ್ಕಳು ಯಾರೂ ಇರಬಾರದು. ಆ ರೀತಿ ಸಮಗ್ರ ಮಾಹಿತಿ ಕೊಡಲಾಗಿದೆ’ ಎಂದು ತಿಳಿಸಿದರು.

‘ಪರೀಕ್ಷೆ ಸಿದ್ಧತೆಗೆ ಜಿಲ್ಲಾಡಳಿತ ಎಲ್ಲ ಸಹಕಾರ ಕೊಟ್ಟಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರು ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಈ ಸಂಬಂಧ ಸ್ಪಷ್ಟ ಸೂಚನೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಮೂಲಕ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಪರೀಕ್ಷೆಗೆ ಮುಂಚೆ ಹಾಗೂ ಪರೀಕ್ಷೆ ಕೊನೆಗೊಂಡ ಬಳಿಕವೂ ಸ್ಯಾನಿಟೈಸ್‌ ಮಾಡಲಾಗುವುದು’ ಎಂದು ಹೇಳಿದರು.

ಎಲ್ಲ ಸಿಬ್ಬಂದಿಗೆ ಲಸಿಕೆ: ‘ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 6,619 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಎಲ್ಲರಿಗೂ ಕನಿಷ್ಠ ಒಂದು ಡೋಸ್‌ ಲಸಿಕೆ ನೀಡಲಾಗಿದೆ. ಕೆಲವರು ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಲಸಿಕೆ ಪಡೆಯದೇ ಇದ್ದವರಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ’ ಎಂದರು.

‘ಕಾಡಂಚಿನ ಗ್ರಾಮಗಳ ಮಕ್ಕಳ ಓಡಾಟಕ್ಕೆ ತೊಂದರೆ ಆಗಬಾರದು ಎಂಬ ಕಾರಣ ಪರೀಕ್ಷಾ ಕೆಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಮತ್ತು ಮಗ್ಗೆಯಲ್ಲೂ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಅಲ್ಲಿ ಇದುವರೆಗೂ ಪರೀಕ್ಷಾ ಕೇಂದ್ರ ಇರಲಿಲ್ಲ. ಅಂತರಸಂತೆಗೆ ಬಂದು ಪರೀಕ್ಷೆ ಬರೆಯಬೇಕಿತ್ತು. ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ವತಿಯಿಂದ ಎಲ್ಲ ಮಕ್ಕಳಿಗೂ ಮಾಸ್ಕ್‌ ವಿತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಆರೋಗ್ಯ ಇಲಾಖೆಯ ತಂಡ ಇರಲಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ತಪಾಸಣೆ ನಡೆಸಲಾಗುತ್ತದೆ. ಸೋಂಕು ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡ ಬಳಿಕವೇ ಪರೀಕ್ಷಾ ಕೇಂದ್ರದ ಒಳಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಬೇರೆ ಕಡೆ ಪರೀಕ್ಷೆ ಬರೆಯಲಿರುವ 775 ವಿದ್ಯಾರ್ಥಿಗಳು: ‘ಬೇರೆ ಜಿಲ್ಲೆ ಮತ್ತು ತಾಲ್ಲೂಕಿನಿಂದ ಬಂದಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಸಿಕ್ಕಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ. ಮೈಸೂರು ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹೋಗಿರುವವರು 775 ಮಂದಿ ಇದ್ದರೆ, ಜಿಲ್ಲೆಯ ಒಂದು ತಾಲ್ಲೂಕುಗಳಿಂದ ಇನ್ನೊಂದು ತಾಲ್ಲೂಕಿಗೆ ಹೋಗಿರುವ ಹಾಗೂ ಬೇರೆ ಜಿಲ್ಲೆಯಿಂದ ಬಂದಿರುವ ವಿದ್ಯಾರ್ಥಿಗಳು 338 ಮಂದಿ ಇದ್ದಾರೆ’ ಎಂದರು.

ಅಂಗವಿಕಲರಿಗೆ ತರಬೇತಿ: ‘ಅಂಗವಿಕಲ ವಿದ್ಯಾರ್ಥಿಗಳಿಗೆ ಒಎಂಆರ್‌ ಹಾಳೆಯನ್ನು ತುಂಬುವುದು ಹಾಗೂ ಮಾದರಿ ಪ್ರಶ್ನೆ ಪತ್ರಿಕೆ ಹೇಗಿರುತ್ತದೆ ಎಂಬುದನ್ನು ಶಿಕ್ಷಕರು ವಿದ್ಯಾರ್ಥಿ ಮನೆಗಳಿಗೇ ತೆರಳಿ ಅಭ್ಯಾಸ ಮಾಡಿಸಿದ್ದಾರೆ. ದೃಷ್ಟಿದೋಷವಿರುವ ವಿದ್ಯಾರ್ಥಿಗಳಿಗೆ ಅವರ ಹಿಂದಿನ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಹಕರಿಸಲಿದ್ದಾರೆ. ಅವರಿಗೆ ಪರೀಕ್ಷೆಯಲ್ಲಿ ಹೆಚ್ಚುವರಿ 15 ನಿಮಿಷಗಳು ಇರುತ್ತವೆ’ ಎಂದು ತಿಳಿಸಿದರು.

ಉಪನಿರ್ದೇಶಕರ ಕಚೇರಿಯ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಜಿ.ವೆಂಕಟಾಚಲ ಉಪಸ್ಥಿತರಿದ್ದರು.

‘ಒಎಂಆರ್‌ ಶೀಟ್‌: ಎಚ್ಚರಿಕೆಯಿಂದ ಭರ್ತಿ ಮಾಡಿ’: ಜುಲೈ 19ರಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಜುಲೈ 22ರಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಪ್ರತಿ ಪ್ರಶ್ನೆಪತ್ರಿಕೆಗೂ ಪ್ರತ್ಯೇಕ ಒಎಂಆರ್‌ ಶೀಟ್‌ ನೀಡಲಾಗುತ್ತದೆ. ಪ್ರತಿ ವಿಷಯದ ಪ್ರಶ್ನೆಪತ್ರಿಕೆ 40 ಅಂಕಗಳಿಗೆ ಇರುತ್ತದೆ.

ಒಎಂಆರ್‌ ಶೀಟ್‌ನಲ್ಲಿ ವಿದ್ಯಾರ್ಥಿಗಳ ಭಾವಚಿತ್ರ, ತಂದೆಯ ಹೆಸರು, ಪರೀಕ್ಷಾ ಕೇಂದ್ರದ ಮಾಹಿತಿಯೂ ಮುದ್ರಣಗೊಂಡಿರುತ್ತದೆ. ವಿದ್ಯಾರ್ಥಿಗಳು ಒಎಂಆರ್‌ ಶೀಟ್‌ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕು. ನೀಲಿ ಅಥವಾ ಕಪ್ಪು ಬಣ್ಣದ ಬಾಲ್‌ ಪಾಯಿಂಟ್‌ ಪೆನ್‌ನಿಂದ ಶೇಡ್‌ ಮಾಡಬೇಕು. ಜೆಲ್‌ ಪೆನ್‌ ಬಳಕೆ ಮಾಡಬಾರದು.

ಬೆಳಿಗ್ಗೆ 8.30ಕ್ಕೆ ಕೇಂದ್ರ ಸಜ್ಜು: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳು ಬೆಳಿಗ್ಗೆ 8.30ರಿಂದ ತೆರೆಯಲಿವೆ. ವಿದ್ಯಾರ್ಥಿಗಳು ಕೇಂದ್ರಕ್ಕೆ ಬಂದು ಕೊಠಡಿಗಳಲ್ಲಿ ಕುಳಿತು ಓದಬಹುದು. 10 ಗಂಟೆ ಆಗುತ್ತಿದ್ದಂತೆ ಬ್ಯಾಗ್‌, ಪುಸ್ತಕ ಇತ್ಯಾದಿ ಪರಿಕರಗಳನ್ನು ಹೊರಗೆ ಇಡಬೇಕು. 10.15ಕ್ಕೆ ಮೊದಲ ಬೆಲ್‌ ಆಗಲಿದೆ. 10.30ಕ್ಕೆ ಪ್ರಶ್ನೆಪತ್ರಿಕೆ, ಒಎಂಆರ್‌ ಶೀಟ್‌ ನೀಡಲಾಗುತ್ತದೆ. ಮಧ್ಯಾಹ್ನ 1.30ಕ್ಕೆ ಪರೀಕ್ಷೆ ಮುಗಿಯಲಿದೆ.

ಉಚಿತ ಬಸ್‌ ವ್ಯವಸ್ಥೆ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನಿಗದಿತ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಕೆಲ ಗ್ರಾಮಗಳ ಮಕ್ಕಳಿಗಾಗಿ ಬಸ್‌ ವ್ಯವಸ್ಥೆ ಮಾಡಲಾಗುವುದು. ಮಕ್ಕಳನ್ನು ‍ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು, ವಾಪಸ್‌ ಊರಿಗೆ ತಂದು ಬಿಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಒಂದು ವೇಳೆ, ಬಸ್‌ ಸಮಸ್ಯೆ ಇದ್ದರೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೆ, ಬಸ್‌ ವ್ಯವಸ್ಥೆ ಮಾಡುತ್ತಾರೆ ಎಂದು ಪಾಂಡುರಂಗ ತಿಳಿಸಿದರು.

ಹೆಚ್ಚುವರಿಯಾಗಿ 95 ಕೇಂದ್ರ: ಕೋವಿಡ್‌ ಮಾರ್ಗಸೂಚಿ ಪ್ರಕಾರ ಅಂತರ ಪಾಲನೆಗೆ ಒತ್ತು ನೀಡಲಾಗಿದೆ. ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳಷ್ಟೇ ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 95 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಉಪನಿರ್ದೇಶಕರ ಕಚೇರಿಯ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಜಿ.ವೆಂಕಟಾಚಲ ತಿಳಿಸಿದರು.

‘ಪ್ರವೇಶಪತ್ರ ಸಿಗದಿದ್ದರೆ ಬಿಇಒಗೆ ಕರೆ ಮಾಡಿ’: ‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಹಾಲ್‌ ಟಿಕೆಟ್‌ (ಪ್ರವೇಶ ಪತ್ರ) ಸಿಗದೇ ಇದ್ದರೆ, ಆಯಾ ಬಿಇಒಗಳಿಗೆ ಕರೆ ಮಾಡಿ ಮಾಹಿತಿ ನೀಡಿ’ ಎಂದು ಪಾಂಡುರಂಗ ಸೂಚಿಸಿದರು.

‘ಪೂರ್ಣ ಶುಲ್ಕ ಕಟ್ಟಿಲ್ಲ ಎಂದು ಶಾಲೆಗಳು ಮಕ್ಕಳಿಗೆ ಪ್ರವೇಶ ಪತ್ರ ನಿರಾಕರಿಸುವಂತಿಲ್ಲ. ಎಲ್ಲರಿಗೂ ಪ್ರವೇಶ ಪತ್ರ ಲಭಿಸಿದೆ ಎಂಬುದನ್ನು ಖಚಿತಪಡಿಸುವಂತೆ ಬಿಇಒಗಳಿಗೆ ಸೂಚಿಸಲಾಗಿದೆ. ಶಾಲೆಗಳು ಪ್ರವೇಶ ಪತ್ರ ನಿರಾಕ‌ರಿಸಿದರೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಿಂದಲೇ ನೇರವಾಗಿ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿ ಕೊಡಲಾಗುವುದು’ ಎಂದರು.

ಪ್ರಶ್ನೋತ್ತರ

l ಪುನರಾವರ್ತಿತ ವಿದ್ಯಾರ್ಥಿಗಳಿಗೆ ಹೇಗೆ ಪರೀಕ್ಷೆ ನಡೆಸುತ್ತೀರಿ?

–ಪ್ರಜ್ವಲ್‌, ಹೂಟಗಳ್ಳಿ, ಮೈಸೂರು

ಸಾಮಾನ್ಯ ವಿದ್ಯಾರ್ಥಿಗಳಂತೆ ಪುನರಾವರ್ತಿತ ವಿದ್ಯಾರ್ಥಿಗಳಿಗೂ ಒಂದೇ ಮಾದರಿಯ ಪರೀಕ್ಷೆ ನಡೆಯಲಿದೆ. ವಸ್ತುನಿಷ್ಠ ಮಾದರಿಯಲ್ಲಿ ಪ್ರಶ್ನೆಪತ್ರಿಕೆ ಇರುತ್ತದೆ. ಪ್ರತಿ ಪ್ರಶ್ನೆಪತ್ರಿಕೆಗೆ ಪ್ರತ್ಯೇಕ ಒಎಂಆರ್‌ ಶೀಟ್‌ ನೀಡಲಾಗುತ್ತದೆ. ಸರಿ ಉತ್ತರಗಳಿಗೆ ಒಎಂಆರ್‌ ಶೀಟ್‌ನಲ್ಲಿ ಶೇಡ್‌ ಮಾಡಬೇಕಿದೆ.

l ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಕೆಲ ಶಿಕ್ಷಕರು, ಸಿಬ್ಬಂದಿಗೆ ಇನ್ನೂ ಕೋವಿಡ್‌ ಲಸಿಕೆ ನೀಡಿಲ್ಲ.

–ಆರಾಧ್ಯ, ಎಚ್‌.ಡಿ.ಕೋಟೆ

ಪರೀಕ್ಷಾ ಕಾರ್ಯಕ್ಕೆ ನಿಯುಕ್ತಿಗೊಂಡವರು ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದಿರಲೇಬೇಕು. ಜಿಲ್ಲೆಯ ಎಲ್ಲ ಪರೀಕ್ಷಾ ಸಿಬ್ಬಂದಿಗೂ ಒಂದು ಡೋಸ್‌ ನೀಡಲಾಗಿದೆ. ಕೆಲವರಿಗೆ 2ನೇ ಡೋಸ್‌ ಬಾಕಿ ಇದ್ದು, ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

l ಸಂವೇದ ಇ–ಕಲಿಕಾ ಕಾರ್ಯಕ್ರಮ ನಿಂತಿದೆ. ಹಾಡಿಗಳಲ್ಲಿ ವಿದ್ಯುತ್‌ ಸಮಸ್ಯೆ ಇರುವುದರಿಂದ ಮಕ್ಕಳ ಕಲಿಕೆಗೂ ತೊಂದರೆ ಉಂಟಾಗಿದೆ.

–ಪುಟ್ಟಬಸವಯ್ಯ, ವಡ್ಡರಗುಡಿ, ಎಚ್‌.ಡಿ.ಕೋಟೆ

ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ದೂರದರ್ಶನ ಚಂದನ ವಾಹಿನಿ ಮೂಲಕ ಸಂವೇದ ಇ–ಕಲಿಕಾ ಕಾರ್ಯಕ್ರಮ ನಡೆಸಲಾಗಿತ್ತು. ಕಳೆದ ಅಕ್ಟೋಬರ್‌ವರೆಗೂ ಪಾಠಗಳನ್ನು ಪ್ರಸಾರ ಮಾಡಲಾಗಿತ್ತು. ಕಷ್ಟಕರವಾದ ಪಾಠಗಳ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಿದ್ದರು. ಜನವರಿಯಿಂದ ಮಾರ್ಚ್‌ವರೆಗೆ ತರಗತಿಗಳು ನಡೆದವು. ಬಳಿಕ, ಕೋವಿಡ್‌ನ ಎರಡನೇ ಅಲೆ ವ್ಯಾಪಕವಾಗಿದ್ದರಿಂದ ತರಗತಿ ನಡೆಸಲು ಸಾಧ್ಯವಾಗಿರಲಿಲ್ಲ.

l ಕೋವಿಡ್‌ ಸಂದರ್ಭದಲ್ಲಿ ಪರೀಕ್ಷೆ ನಡೆಸಲು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳೇನು?

–ಕಾಂಚನಾ ಹಾಗೂ ಪೂರ್ವಿಕಾ,
ಶಾಸ್ತ್ರಿ ಪ್ರೌಢಶಾಲೆ, ಹುಣಸೂರು

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತದೆ. ಅಂತರ ಪಾಲನೆ, ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನಿಂಗ್‌, ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಕೋವಿಡ್‌ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಎನ್‌–95 ಮಾಸ್ಕ್‌ ನೀಡಲಾಗುತ್ತದೆ. ಅಂಥವರಿಗಾಗಿಯೇ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗವುದು. ಕೋವಿಡ್‌ ಪಾಸಿಟಿವ್‌ ಇರುವವರಿಗೆ ಕೋವಿಡ್‌ ಆರೈಕೆ ಕೇಂದ್ರಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

l ಶಿಕ್ಷಕರಿಗೆ ಪರೀಕ್ಷಾ ತರಬೇತಿ ನೀಡಲಾಗುತ್ತಿದ್ದು, ಲಸಿಕೆ ಪಡೆಯದ ಶಿಕ್ಷಕರನ್ನು ಹೊರಗೆ ಕಳುಹಿಸಲಾಗಿದೆ?

– ಮಲ್ಲೇಶ್‌, ಚನೀಪುರ, ಎಚ್‌.ಡಿ.ಕೋಟೆ

ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲ ಶಿಕ್ಷಕರು ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಾತರಿಪಡಿಸಿಕೊಂಡಿದ್ದಾರೆ. ಅಲ್ಲದೆ, ಹೆಚ್ಚುವರಿ ಸಿಬ್ಬಂದಿಯನ್ನೂ ಕಾಯ್ದಿರಿಸಲಾಗಿದೆ. ಒಂದು ವೇಳೆ, ಲಸಿಕೆ ಹಾಕಿಸಿಕೊಳ್ಳದ ಶಿಕ್ಷಕರು ಕಂಡುಬಂದರೆ ಅವರನ್ನು ಪರೀಕ್ಷಾ ಕಾರ್ಯಕ್ಕೆ ಬಳಸಿಕೊಳ್ಳುವುದಿಲ್ಲ.

l ಎಚ್‌.ಡಿ.ಕೋಟೆ ತಾಲ್ಲೂಕು, ಕೇರಳ ಗಡಿಭಾಗದಲ್ಲಿ ಇದೆ. ಕೇರಳದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಿದ್ದು, ಅಲ್ಲಿಂದ ಹಲವರು ತಾಲ್ಲೂಕಿಗೆ ಬರುತ್ತಿರುತ್ತಾರೆ. ಹಾಗಾಗಿ ತಾಲ್ಲೂಕನ್ನು ವಿಶೇಷವಾಗಿ ಪರಿಗಣಿಸಬೇಕು.

– ರವಿಕುಮಾರ್‌, ಬೆಳಗನಹಳ್ಳಿ, ಎಚ್‌.ಡಿ.ಕೋಟೆ.

ಹೌದು. ಈ ಬಗ್ಗೆ ಗಮನಹರಿಸಿದ್ದೇವೆ. ಗಡಿಭಾಗದ ತಾಲ್ಲೂಕಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕ ಪಡಬೇಕಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು