ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಮಾಧ್ಯಮಕ್ಕೆ ಹೊಡೆತ ಬೀಳಲ್ಲ: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ

Last Updated 21 ಜೂನ್ 2021, 1:27 IST
ಅಕ್ಷರ ಗಾತ್ರ

ಸರಗೂರು (ಮೈಸೂರು): ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಭಾಷಾ ಮಾಧ್ಯಮಕ್ಕೆ ಯಾವುದೇ ರೀತಿಯ ಹೊಡೆತ ಬೀಳಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವೂ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾನುವಾರ ಇಲ್ಲಿ ಪ್ರತಿಕ್ರಿಯಿಸಿದರು.

ಕೋವಿಡ್‌ ಆರೈಕೆ ಕೇಂದ್ರ ಉದ್ಘಾಟಿಸಿದ ಬಳಿಕ ಮಾಧ್ಯಮದವರೊಟ್ಟಿಗೆ ಮಾತನಾಡಿದ ಅವರು, ‘ನಮ್ಮತನ, ಸಂಸ್ಕೃತಿ, ಆಚಾರ–ವಿಚಾರ, ಭಾಷೆಯನ್ನು ಸಂರಕ್ಷಿಸಿ–ಬೆಳೆಸುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಧ್ಯೇಯೋದ್ದೇಶವಾಗಿದೆ’ ಎಂದು ಅವರು ತಿಳಿಸಿದರು.

‘2021–22ನೇ ಶೈಕ್ಷಣಿಕ ಸಾಲಿನಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಕ್ರಮ ವಹಿಸಿದೆ. ಇದಕ್ಕಾಗಿಯೇ ರಾಜ್ಯದಲ್ಲಿನ ಎಲ್ಲ ವಿಶ್ವವಿದ್ಯಾನಿಲಯಗಳ ಕುಲಪತಿಗಳನ್ನೊಳಗೊಂಡ ಸಮಿತಿ ರಚಿಸಿದ್ದು, ಈ ತಿಂಗಳ ಅಂತ್ಯದೊಳಗೆ ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬ ವರದಿ ನೀಡುವಂತೆ ಸೂಚನೆ ನೀಡಲಾಗಿದೆ’ ಎಂದು ಅಶ್ವಥನಾರಾಯಣ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮೂರೂವರೆ ದಶಕದ ಬಳಿಕ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಇದಕ್ಕಾಗಿ ಶಿಕ್ಷಣ ತಜ್ಞರು ಐದೂವರೆ ವರ್ಷ ಸಮಯ ತೆಗೆದುಕೊಂಡಿದ್ದಾರೆ. ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದರಿಂದ ಶೈಕ್ಷಣಿಕ ಬದಲಾವಣೆ, ಸುಧಾರಣೆ ತರಬಹುದು’ ಎಂದು ಸಚಿವರು ಹೇಳಿದರು.

7,500 ಸಿಬ್ಬಂದಿ ನೇಮಕ: ‘ಕೋವಿಡ್‌ನ ಸಂಭಾವ್ಯ ಮೂರನೇ ಅಲೆ ತಡೆಗಟ್ಟಲು ಹಲವು ಕ್ರಮ ತೆಗೆದುಕೊಳ್ಳಲಾಗುತ್ತಿದೆ. 7,500 ವೈದ್ಯಕೀಯ ಸಿಬ್ಬಂದಿ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದು ಅಶ್ವಥನಾರಾಯಣ ತಿಳಿಸಿದರು.

‘ಮೂರನೇ ಅಲೆ ಎದುರಾಗುವ ಹೊತ್ತಿಗೆ ಎಲ್ಲ ತಾಲ್ಲೂಕು–ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕದ ಜನರೇಟರ್‌, ಸಾಂದ್ರಕ ಹಾಗೂ ಸಂಗ್ರಹಣ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವ್ಯವಸ್ಥೆಗಳನ್ನು ಸುಧಾರಿಸುತ್ತೇವೆ. ಕುಗ್ರಾಮದಲ್ಲೂ ವೈದ್ಯಕೀಯ ಸೇವೆ ಲಭಿಸುವಂತೆ ನೋಡಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT