ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಯ ಬೆನ್ನಟ್ಟಬೇಡಿ, ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿ: ಸಚಿವ ಸೋಮಶೇಖರ್

ಶಿಕ್ಷಣದಿಂದ ಪ್ರತಿಯೊಂದು ಮಗು ಹೊರಗುಳಿಯದಂತೆ ನೋಡಿಕೊಳ್ಳಿ: ಸಚಿವ ಸೋಮಶೇಖರ್‌
Last Updated 5 ಸೆಪ್ಟೆಂಬರ್ 2020, 13:13 IST
ಅಕ್ಷರ ಗಾತ್ರ

ಮೈಸೂರು: ‘ಪ್ರಶಸ್ತಿ ಪಡೆದವರಷ್ಟೇ ಉತ್ತಮ ಶಿಕ್ಷಕರಲ್ಲ. ಎಲ್ಲರೂ ಅತ್ಯುತ್ತಮ ಶಿಕ್ಷಕರೇ. ಪ್ರಶಸ್ತಿಗಾಗಿ ಬೆನ್ನಟ್ಟದೆ, ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗುವತ್ತ ನಿಮ್ಮಗಳ ಚಿತ್ತ ಹರಿಸಿ’ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಶಿಕ್ಷಕ ಸಮುದಾಯಕ್ಕೆ ಸಲಹೆ ನೀಡಿದರು.

ನಗರದ ಟೆರೇಷಿಯನ್ ಕಾಲೇಜಿನಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಸಂಕಷ್ಟದಲ್ಲೂ, ಹಲವು ಸಮಸ್ಯೆಗಳ ನಡುವೆಯೂ ಶಿಕ್ಷಕ ಸಮೂಹ ಕೊರೊನಾ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿದೆ. ಮಕ್ಕಳ ಮನೆ ಬಾಗಿಲಿಗೆ ಹೋಗಿ ಪಾಠ ಬೋಧಿಸುತ್ತಿದೆ’ ಎಂದು ಪ್ರಶಂಸಿಸಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಶಿಕ್ಷಕರು ಸಹ ಇದಕ್ಕೆ ಪೂರಕವಾಗಿ ಹೆಚ್ಚಿನ ತರಬೇತಿಗೆ ಸಿದ್ಧರಾಗಬೇಕಿದೆ. ಎಸ್ಸೆಸ್ಸೆಲ್ಸಿ–ಪಿಯುಸಿ ಪರೀಕ್ಷೆ, ಮೌಲ್ಯಮಾಪನದಿಂದ ದೇಶಕ್ಕೇ ಮಾದರಿಯಾದ ರಾಜ್ಯದ ಶಿಕ್ಷಕ ವೃಂದ, ಮುಂದಿನ ಒಂದೆರಡು ತಿಂಗಳಲ್ಲೇ ಹಳೆಯ ವ್ಯವಸ್ಥೆಗೆ ಮರಳಬೇಕಿದೆ. ಶಾಲೆಗಳಲ್ಲಿ ಪಾಠ ಮಾಡಲು ಸಿದ್ಧರಾಗಬೇಕಿದೆ’ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ‘ನಮ್ಮಲ್ಲಿ ಗುರು ಪರಂಪರೆಗೆ ಐತಿಹ್ಯವಿದೆ. ಗುರು ಎಂಬ ಪದಕ್ಕೆ ವಿಶೇಷ ಅರ್ಥವಿದೆ. ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕು. ಪ್ರತಿಯೊಂದು ಮಗು ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು’ ಎಂದು ತಿಳಿಸಿದರು.

ಶಾಸಕ ಎಸ್‌.ಎ.ರಾಮದಾಸ್ ಮಾತನಾಡಿ, ‘ಶಿಕ್ಷಕ ವೃತ್ತಿ ಸಂಬಳದ ಕೆಲಸವಲ್ಲ. ಸೇವಾ ಮನೋಭಾವದ ವೃತ್ತಿ. ಪ್ರತಿಯೊಬ್ಬ ಶಿಕ್ಷಕರು ನಿತ್ಯವೂ ಕಲಿಕಾ ವಿದ್ಯಾರ್ಥಿಗಳಾಗಿರಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಎಲ್.ನಾಗೇಂದ್ರ, ಮೇಯರ್ ತಸ್ನಿಂ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಮತ್ತಿತರರಿದ್ದರು. ಡಿಡಿಪಿಐ ಡಾ.ಪಾಂಡುರಂಗ ಸ್ವಾಗತಿಸಿದರು.

ರೈತಗೀತೆ: ಮುಜುಗರ

ನಾಡಗೀತೆಯ ಬಳಿಕ ರೈತ ಗೀತೆಯನ್ನು ಸಮಾರಂಭದ ಆರಂಭದಲ್ಲಿ ಹಾಡಲಾಯಿತು. ಶಿಕ್ಷಕ ಸಮೂಹ ಹಾಡುವುದಕ್ಕೂ ಮುನ್ನ ಸಂಘಟಕರಲ್ಲೊಬ್ಬರು ರೈತರಿಗೆ ಗೌರವ ಸಲ್ಲಿಸುವ ಗೀತೆ ಹಾಡುವಾಗ ಎಲ್ಲರೂ ಎದ್ದು ನಿಲ್ಲಬೇಕು ಎಂದು ಧ್ವನಿವರ್ಧಕದ ಮೂಲಕ ಮನವಿ ಮಾಡಿಕೊಂಡರು.

ಸಭಾಂಗಣದಲ್ಲಿ ಹಾಜರಿದ್ದವರು ಎದ್ದು ನಿಲ್ಲಲು ಮುಂದಾಗುತ್ತಿದ್ದಂತೆ, ಮತ್ತೊಬ್ಬರು ಯಾರೂ ಎದ್ದು ನಿಲ್ಲುವುದು ಬೇಡ. ನೀವು ಹಾಡಿ ಎನ್ನುವ ಮೂಲಕ ಮುಜುಗರದ ಸನ್ನಿವೇಶ ಸೃಷ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT