ಸೋಮವಾರ, ಆಗಸ್ಟ್ 2, 2021
27 °C

ವಾರಿಯರ್ಸ್‌ಗಳಿಗೆ ಸೌಲಭ್ಯ ಕೊಡಿ: ಮಾಜಿ ಶಾಸಕ ವಾಸು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಬಾಯಿ ಮಾತಿಗೆ ವಾರಿಯರ್ಸ್‌ ಎಂದರೇ ಸಾಲದು. ಅವರಿಗೆ ಅತ್ಯಗತ್ಯವಾಗಿ ಬೇಕಿರುವ ಮೂಲ ಸೌಲಭ್ಯಗಳನ್ನು ಸರ್ಕಾರವೇ ಒದಗಿಸಬೇಕು’ ಎಂದು ಮಾಜಿ ಶಾಸಕ ವಾಸು ಒತ್ತಾಯಿಸಿದರು.

‘ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿಕೊಳ್ಳಲಾಗಿದೆ. ಆದರೆ ಅಲ್ಲಿ ಲ್ಯಾಬ್ ಇಲ್ಲ. ಸಿಟಿ ಸ್ಕ್ಯಾನ್ ಇಲ್ಲ. ಎಕ್ಸರೇ ಮೆಷಿನ್ ಸೇರಿದಂತೆ ಅತ್ಯಗತ್ಯ ಮೂಲ ಸೌಕರ್ಯಗಳು ಇಲ್ಲವಾಗಿವೆ’ ಎಂದು ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಅರೆ ವೈದ್ಯಕೀಯ ಸಿಬ್ಬಂದಿ ಕೊರತೆಯಿದೆ. ಇದರ ಜೊತೆಗೆ ಇರೋ ಸಿಬ್ಬಂದಿಗೂ ಅಗತ್ಯ ಜೀವ ರಕ್ಷಣಾ ಸಾಧನಗಳೇ ಸಿಗದಾಗಿವೆ. ಇದರಿಂದ ಸಕಾಲಕ್ಕೆ ಸೇವೆ ಸಿಗದಾಗಿದೆ. ಸರ್ಕಾರ ಖಾಸಗಿ ಆಸ್ಪತ್ರೆಗಳ ಮೇಲೆ ಗದಾಪ್ರಹಾರ ನಡೆಸುವ ಮೊದಲು ತನ್ನ ಅಧೀನದಲ್ಲಿನ ಆಸ್ಪತ್ರೆಗಳಿಗೆ ಮೂಲ ಸೌಲಭ್ಯ ಒದಗಿಸಲು ಮುಂದಾಗಲಿ’ ಎಂದು ಹೇಳಿದರು.

‘ಮೈಸೂರಿನ ಜಿಲ್ಲಾ ಆಸ್ಪತ್ರೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ನಮ್ಮ ಅವಧಿಯಲ್ಲೇ ಪೂರ್ಣಗೊಂಡಿದ್ದು. ಉದ್ಘಾಟನೆ ವೇಳೆಗೆ ಸರ್ಕಾರ ಬದಲಾಯ್ತು. ಯಾರು ಉದ್ಘಾಟಿಸಿದರೇನು ? ಎಲ್ಲವೂ ಜನರ ತೆರಿಗೆ ಹಣ. ಇನ್ನುಳಿದ ಎರಡೂವರೆ ವರ್ಷದ ಅವಧಿಯಲ್ಲಾದರೂ ಈಗಿನ ಸರ್ಕಾರ ಅಗತ್ಯ ಮೂಲ ಸೌಲಭ್ಯ ಒದಗಿಸಿ, ಪೂರ್ಣ ಪ್ರಮಾಣದಲ್ಲಿ ಉದ್ಘಾಟಿಸಲು ಮುಂದಾಗಲಿ’ ಎಂದು ವಾಸು ಆಗ್ರಹಿಸಿದರು.

‘ಮೈಸೂರಿನಲ್ಲಿ ಕೊರೊನಾ ವೈರಸ್‌ ಸೋಂಕು ಸಮುದಾಯಕ್ಕೆ ಹರಡಿದೆ. ಆಸ್ಪತ್ರೆಗೆ ಕರೆದೊಯ್ದು ಹಾಸಿಗೆ ಕೊಟ್ಟರೇ ಸಾಲದು. ಸೋಂಕು ನಿಯಂತ್ರಣಕ್ಕೆ ತುರ್ತಾಗಿ ನಗರದ ವಿವಿಧೆಡೆ 20 ಪರೀಕ್ಷಾ ಕೇಂದ್ರ ಆರಂಭಿಸಬೇಕು. ಸಾವು ಹೆಚ್ಚುತ್ತಿದ್ದು, ಪೀಡಿತರಿಗೆ ಮನೋಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ’ ಎಂದು ತಿಳಿಸಿದರು.

‘ಪತ್ರಿಕಾ ಹೇಳಿಕೆ, ಸರಣಿ ಸಭೆಗಳಿಂದ ಯಾವುದೇ ಪ್ರಯೋಜನವಾಗಲ್ಲ. ವಾರಿಯರ್ಸ್‌ಗಳಿಗೆ ಸಕಾಲಕ್ಕೆ ಸಂಬಳವೇ ಸಿಕ್ತಿಲ್ಲ. ಇದನ್ನು ಸರಿಪಡಿಸಬೇಕಿದೆ. ಮೈಸೂರಿನಲ್ಲಿ ದಾನಿಗಳ ಸಂಖ್ಯೆ ದೊಡ್ಡದಿದೆ. ಈಗಲೂ ಸಿಎಸ್‌ಆರ್ ಫಂಡ್‌ನ ಸದ್ಬಳಕೆಗೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಮುಂದಾಗಬೇಕು’ ಎಂದರು.

ತನ್ವೀರ್ ಸೇಠ್‌ ಆರೋಗ್ಯವಾಗಿದ್ದಾರೆ: ವಾಸು

‘ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಆರೋಗ್ಯವಾಗಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿದ್ದಾರೆ. ಧ್ವನಿಪೆಟ್ಟಿಗೆಯದ್ದೇ ಸ್ವಲ್ಪ ಸಮಸ್ಯೆ. ಈ ಕ್ಷೇತ್ರದ ಉಸ್ತುವಾರಿಯನ್ನು ಸಂಸದರಿಗೆ ಏಕೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಉಸ್ತುವಾರಿ ಸಚಿವರು–ಶಾಸಕರ ನಡುವಿನ ಮಾತುಕತೆಯ ಮಾಹಿತಿ ನನಗಿಲ್ಲ’ ಎಂದು ವಾಸು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು