ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ರಸ್ತೆಯಲ್ಲಿ ಮಲಗಿ ರೈತರ ಆಕ್ರೋಶ

ಪೊಲೀಸರೊಂದಿಗೆ ಜಟಾಪಟಿ; ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಲು ಆಗ್ರಹ
Last Updated 3 ನವೆಂಬರ್ 2020, 1:38 IST
ಅಕ್ಷರ ಗಾತ್ರ

ಮೈಸೂರು: ಕಬ್ಬಿಗೆ ನ್ಯಾಯಯುತ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಬಾಗಿಲಿನಲ್ಲಿ ಕುಳಿತು ಪ್ರತಿಭಟಿಸಲು ಯತ್ನಿಸಿದಾಗ ಪೊಲೀಸರು ತಡೆದರು. ಈ ವೇಳೆ ಪೊಲೀಸ್ ಸಿಬ್ಬಂದಿ ರೈತರ ಕುತ್ತಿಗೆಪಟ್ಟಿ ಹಿಡಿದರು ಎಂದು ರೈತರು ಆರೋಪಿಸಿದರು.

ಕೋಪಗೊಂಡ ಪ್ರತಿಭಟನಕಾರರು ಸಮೀಪದ ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಈ ಹಿಂದೆ ಬಾಗಿಲಿನಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ, ಈ ಬಾರಿ ಜಿಲ್ಲಾಧಿಕಾರಿ ಇದಕ್ಕೆ ಅವ ಕಾಶ ಮಾಡಿಕೊಡುತ್ತಿಲ್ಲ. ರೈತರನ್ನು ಬಿಸಿಲಿನಲ್ಲಿ ಒಣಗಿಸುತ್ತಿದ್ದಾರೆ ಎಂದು ರೈತರು ಕಿಡಿಕಾರಿದರು. ನಂತರ, ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜು ನಾಥಸ್ವಾಮಿ ಮನವಿ ಸ್ವೀಕರಿಸಿದರು.

ಬೇಡಿಕೆ ಏನು?: ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನು ಸಕ್ಕರೆ ಕಾರ್ಖಾನೆಗಳು ಕಡಿಮೆ ತೋರಿಸುವ ಮೂಲಕ ಕಡಿಮೆ ಎಫ್‌ಆರ್‌ಪಿ ದರ ನಿಗದಿಯಾಗುವಂತೆ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ದರ ನಿಗದಿಯಾಗಿದೆ. ಸರ್ಕಾರವೇ ಒಂದು ಟನ್‌ ಕಬ್ಬಿಗೆ ₹ 3,050 ಉತ್ಪಾದನಾ ವೆಚ್ಚ ಎಂದು ಹೇಳಿರುವುದರಿಂದ ಕನಿಷ್ಠ ₹ 3,300 ಬೆಲೆ ನಿಗದಿ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಹೊರ ಜಿಲ್ಲೆಯ ಕಬ್ಬು ತರುತ್ತಿರುವು ದರಿಂದ ಕಾರ್ಖಾನೆ ವ್ಯಾಪ್ತಿಯ ರೈತರಿಗೆ ಕಬ್ಬು ಕಟಾವು ವಿಳಂಬವಾಗುತ್ತಿದೆ. ಸರ್ಕಾರ ಎಫ್‌ಆರ್‌ಪಿ ದರ ಕುರಿತು ನಿರ್ಧಾರ ‍ಪ್ರಕಟಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಕಿಡಿಕಾರಿದರು.

ಪ್ರತಿ ರೈತರಿಂದ ಕನಿಷ್ಠ 100 ಕ್ವಿಂಟಲ್‌ ಭತ್ತವನ್ನು ಖರೀದಿ ಮಾಡಬೇಕು. ಕನಿಷ್ಠ ಬೆಂಬಲ ಬೆಲೆಗೆ ₹ 200 ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಕೆಆರ್‌ ಎಸ್‌ ರಾಮೇಗೌಡ, ಗಳಿಗರ ಹುಂಡಿ ವೆಂಕಟೇಶ್, ಬರಡನಪುರ ನಾಗರಾಜ್, ದೊಡ್ಡಕಾಟೂರು ಮಹದೇವಸ್ವಾಮಿ ಇದ್ದರು.

ಸೇವಾ ಘಟಕ ಆರಂಭಕ್ಕೆ ಒತ್ತಾಯ

ಗ್ರೀನ್‌ಬಡ್ಸ್‌ ಠೇವಣಿದಾರರ ನೆರವಿಗಾಗಿ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಸ್ಥಾಪನೆಯಾಗಿ ಈಗ ಸ್ಥಗಿತಗೊಂಡಿರುವ ಸೇವಾಕೇಂದ್ರವನ್ನು ಪುನರ್ ಆರಂಭಿಸಬೇಕು ಎಂದು ಒತ್ತಾಯಿಸಿ ಗ್ರೀನ್‌ಬಡ್ಸ್ ಕಾರ್ಯಕರ್ತರು ಮತ್ತು ಠೇವಣಿದಾರರ ರಕ್ಷಣಾ ಸಮಿತಿ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಕೋವಿಡ್ ಹಾಗೂ ಇನ್ನಿತರ ಕಾರಣಗಳಿಂದ ಸೇವಾ ಕೇಂದ್ರವನ್ನು ಸ್ಥಗಿತಗೊಳಿಸಿರುವುದರಿಂದ ಠೇವಣಿದಾರರಿಗೆ ತೊಂದರೆಯಾಗಿದೆ. ಕೂಡಲೇ ಈ ಸೇವಾ ಕೇಂದ್ರ ಆರಂಭಿಸುವ ಮೂಲಕ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಭಟನೆಯಲ್ಲಿದ್ದ ಇತರ ರೈತರೂ ದನಿಗೂಡಿಸಿದರು.

ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎ.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT