ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ| ಅಭಿಮನ್ಯುವಿಗೆ ಪುಷ್ಪಾರ್ಚನೆ ತಾಲೀಮು

ಗಜಪಡೆ, ಅಶ್ವಾರೋಹಿ ಪಡೆ ಭಾಗಿ: ಜಂಬೂ ಸವಾರಿ– ಅರಮನೆ ಆವರಣದಲ್ಲಿ ಮೂರು ದಿನಗಳ ಅಭ್ಯಾಸ
Last Updated 23 ಅಕ್ಟೋಬರ್ 2020, 1:25 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿದ್ದು, ಇದಕ್ಕೆ ಪೂರ್ವಭಾವಿಯಾಗಿ ಗುರುವಾರ ತಾಲೀಮು ಆರಂಭವಾಗಿದೆ.

ಅಂಬಾರಿ‌ ಕಟ್ಟುವ ಜಾಗದಿಂದ ಗಾಂಭೀರ್ಯವಾಗಿ ಹೆಜ್ಜೆ ಇಟ್ಟು ಬಂದ ಕ್ಯಾಪ್ಟನ್‌ ಅಭಿಮನ್ಯು ಆನೆಗೆ ಅರಮನೆ ಮುಂಭಾಗದಲ್ಲಿ ಪೊಲೀಸ್‌ ಇಲಾಖೆ ಹಾಗೂ ಅರಣ್ಯ ಅಧಿಕಾರಿಗಳು ಪುಷ್ಪಾರ್ಚನೆ ನೆರವೇರಿಸುವ ತಾಲೀಮು ನಡೆಸಿದರು.ಬಳಿಕ ಗೌರವ ವಂದನೆ ಸಲ್ಲಿಸಿದರು.

ವಿಕ್ರಂ ಹಾಗೂ ಗೋಪಿ ಆನೆಯನ್ನು ರಾಜವಂಶಸ್ಥರು ನಡೆಸುತ್ತಿರುವ ಪೂಜಾ ಕಾರ್ಯಕ್ರಮಕ್ಕೆ ಕರೆದೊಯ್ದ ಕಾರಣ ಕಾವೇರಿ, ವಿಜಯಾ ಹಾಗೂ ಅಭಿಮನ್ಯು ಮಾತ್ರ ಭಾಗವಹಿಸಿದ್ದವು. ಜೊತೆಗೆ ಕರ್ನಾಟಕ ವಾದ್ಯ ತಂಡ ಹಾಗೂ ಅಶ್ವಾರೋಹಿ ಪಡೆಇದ್ದವು.

ಈ ಬಾರಿ ದಸರಾ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತಗೊಂಡಿದ್ದು, ಗಜಪಡೆ ಹಾಗೂ ಅಶ್ವಾರೋಹಿ ಪಡೆ ಅಭ್ಯಾಸ ನಡೆಸುತ್ತಿವೆ. ಇನ್ನೂ ಎರಡು ದಿನ ಬೆಳಿಗ್ಗೆ 8 ಗಂಟೆಗೆ ತಾಲೀಮು ಆರಂಭವಾಗಲಿದ್ದು, 30 ಕುದುರೆಗಳು ಹಾಗೂ 5 ಆನೆಗಳು ಪಾಲ್ಗೊಳ್ಳಲಿವೆ. ಮೈಸೂರು ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ. ಕುಶಾಲತೋಪು ಸಿಡಿಸುವ ಅಂತಿಮ ಸುತ್ತಿನ ತಾಲೀಮು ಕೂಡ ನಡೆಯಲಿದೆ.

‘ಪ್ರತಿಬಾರಿ ಎರಡು ದಿನ ಮಾತ್ರ ತಾಲೀಮು ನಡೆಸುತ್ತಿದ್ದರು. ಈ ಬಾರಿ ಮೂರು ಬಾರಿ ನಡೆಸಲಾಗುತ್ತಿದೆ. ಶುಕ್ರವಾರ ನಡೆಯಲಿರುವ ಪುಷ್ಪಾರ್ಚನೆ ತಾಲೀಮಿನಲ್ಲಿ ಮೇಯರ್‌, ಪೊಲೀಸ್‌ ಕಮಿಷನರ್ ಕೂಡ ಪಾಲ್ಗೊಳ್ಳಲಿದ್ದಾರೆ’ ಎಂದು ಅರಣ್ಯ ಇಲಾಖೆ ಪಶುವೈದ್ಯ ಡಾ.ನಾಗರಾಜು ತಿಳಿಸಿದರು.

ಈಗಾಗಲೇ ಅಭಿಮನ್ಯುವಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನೀಡಲಾಗಿದೆ. ಅಲ್ಲದೇ, ಗೋಪಿಗೂ ಮೊದಲ ಬಾರಿ ಮರದ ಅಂಬಾರಿ ಹೊರಿಸಲಾಗಿದೆ.

ಮೊದಲ ದಿನ ಪುಷ್ಪಾರ್ಚನೆ ತಾಲೀ ಮಿನಲ್ಲಿ ಡಾ.ನಾಗರಾಜು, ಅರಮನೆ ಭದ್ರತಾ ಎಸಿಪಿ ಚಂದ್ರಶೇಖರ್‌, ಶೈಲೇಂದ್ರ ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.

ಅರಮನೆಯಲ್ಲೂ ಪೂಜೆ

ಶರನ್ನವರಾತ್ರಿ ಅಂಗವಾಗಿ ರಾಜವಂಶಸ್ಥರು ಅರಮನೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಪೂಜಾ ಕೈಂಕರ್ಯ ಮುಂದುವರಿಸಿದ್ದಾರೆ.

ಗುರುವಾರ ಆರನೇ ದಿನದ ಖಾಸಗಿ ದರ್ಬಾರ್‌ ಕೊನೆಗೊಂಡಿದೆ. ಪಟ್ಟದಾನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಪೂಜೆಗೆಂದು ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಪಟ್ಟದ ಕುದುರೆ ಗಾಬರಿಗೊಂಡಿತು.

ನಾಗರಾಜು ನೇತೃತ್ವ

ದಸರಾ ಮೆರವಣಿಗೆಯಲ್ಲಿ ಈ ಬಾರಿ ಅಶ್ವಾರೋಹಿ ಪಡೆಯನ್ನು ಕೆಎಆರ್‌ಪಿ ಮೌಂಟೆಂಡ್‌ ಕಮಾಂಡೆಂಟ್ ಎಂ.ಜಿ.ನಾಗರಾಜು ಮುನ್ನಡೆಸಲಿದ್ದಾರೆ.

ಈಗಾಗಲೇ ತಾಲೀಮು ಆರಂಭವಾಗಿದ್ದು, ಸೋಮವಾರ ನಡೆಯಲಿರುವ ಮೆರವಣಿಗೆಯಲ್ಲಿ ಅವರು 30 ಕುದುರೆಗಳನ್ನು ಮುನ್ನಡೆಸಲಿದ್ದಾರೆ.

‘ಹಿಂದೆ ನಾನು ಸ್ವಾತಂತ್ರ್ಯೋತ್ಸವ ದಿನದ ಪರೇಡ್‌ನಲ್ಲಿ ಮುಂದಾಳತ್ವ ವಹಿಸಿದ್ದೆ. ಈಗ ದಸರೆಯಲ್ಲಿ ಅಶ್ವಾರೋಹಿ ನೇತೃತ್ವ ವಹಿಸಲು ಅವಕಾಶ ಲಭಿಸಿದೆ’ ಎಂದರು.

‘ಈ ಬಾರಿ ಕೆಲ ಕುದುರೆಗಳು ಮೊದಲ ಬಾರಿ ಪಾಲ್ಗೊಳ್ಳುತ್ತಿದ್ದು, ತರಬೇತಿ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT