ಭಾನುವಾರ, ಫೆಬ್ರವರಿ 28, 2021
31 °C

ಸೂಕ್ತ ವಾತಾವರಣ ಕಂಡು ಬಂದರೆ ಪೂರ್ಣ ಪ್ರಮಾಣದಲ್ಲಿ ಕಾಲೇಜು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸೂಕ್ತವಾದ ವಾತಾವರಣ ಕಂಡುಬಂದರೆ ಪೂರ್ಣ ಪ್ರಮಾಣದಲ್ಲಿ ಕಾಲೇಜುಗಳನ್ನು ಆರಂಭಿಸಲಾಗುವುದು. ಎಲ್ಲವೂ ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಲ್ಲಿ ಹೇಳಿದರು.

‘ಈ ಶೈಕ್ಷಣಿಕ ವರ್ಷದಲ್ಲಿ ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ತರಗತಿಗಳು ನಡೆಯುತ್ತಿವೆ. ಎರಡೂ ಕಡೆ ಹಾಜರಾತಿ ತೆಗೆದುಕೊಳ್ಳಲಾಗುತ್ತಿದೆ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಕಾಲೇಜುಗಳಲ್ಲಿ ಶೇ 50ರಷ್ಟು ಹಾಜರಾತಿಯೂ ಇಲ್ಲ. ಯಾರಿಗೂ ಹಾಸ್ಟೆಲ್‌ ಸಮಸ್ಯೆ ಆಗುತ್ತಿಲ್ಲ. ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಆದ್ಯತೆ ನೀಡಲಾಗುತ್ತಿದೆ. ಶೈಕ್ಷಣಿಕ ವರ್ಷ ವ್ಯರ್ಥವಾಗದಂತೆ ಉತ್ತಮ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಸರ್ಕಾರದಿಂದ ಹೊಸ ಕಾಲೇಜು, ಪಾಲಿಟೆಕ್ನಿಕ್‌ಗಳನ್ನು ಆರಂಭಿಸುವ ಯೋಚನೆ ಇಲ್ಲ. ಇರುವ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸುವುದು, ಪ್ರಾಧ್ಯಾಪಕರು, ಉಪನ್ಯಾಸಕರನ್ನು ಒದಗಿಸಿ ಮೂಲಸೌಕರ್ಯ ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗುವುದು. ಆನ್‌ಲೈನ್‌ ಹಾಗೂ ಆಫ್‌ಲೈನ್‌ಗಳಲ್ಲೂ ತರಗತಿ ನಡೆಯುತ್ತಿರುವುದರಿಂದ ಅತಿಥಿ ಉಪನ್ಯಾಸಕರಿಗೂ ಅವಕಾಶ ನೀಡಲಾಗುತ್ತಿದೆ ಎಂದರು.

ಖಾತೆ ಬದಲಾವಣೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವರು, ಖಾತೆ ಹಂಚಿಕೆ ಮುಖ್ಯಮಂತ್ರಿಯ ಪರಮಾಧಿಕಾರ. ರಾಜಕೀಯದಲ್ಲಿ ಸಮಸ್ಯೆ, ಸವಾಲುಗಳು ಇರುತ್ತವೆ. ಅದನ್ನು ಬಗೆಹರಿಸಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಹೇಳಿದರು.

ರೈತರು ಶಾಂತಿಯುತವಾಗಿ ಪ‍್ರತಿಭಟನೆ ಮಾಡಬೇಕು ಎಂದು ಮನವಿ ಮಾಡಿದ ಅವರು, ಕಾಯ್ದೆಗಳಿಗೆ ರೈತರ ಪರವಾಗಿರುವಂಥ ಸುಧಾರಣೆ ಮಾಡಲಾಗಿದೆ. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದ ಕಾರಣ ಗೊಂದಲ ಮಾಡಿಕೊಂಡಿದ್ದಾರೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು