ಮೈಸೂರು ಜಿ.ಪಂ ಫೋನ್ ಇನ್ ಕಾರ್ಯಕ್ರಮ: ನರೇಗಾ ಯೋಜನೆಯಲ್ಲಿ ಜೆಸಿಬಿ ಬಳಕೆ- ದೂರು

ಮೈಸೂರು: ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೇಶ್ ಅವರು ಸೋಮವಾರ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಹಲವು ತೆರನಾದ ಸಮಸ್ಯೆಗಳು ರಿಂಗಣಿಸಿದವು.
ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಕೆಲಸ ನೀಡುವಂತಹ ‘ನರೇಗಾ’ ಯೋಜನೆಯ ಕಾಮಗಾರಿಗಳನ್ನು ಜೆಸಿಬಿ ಮೊದಲಾದ ಯಂತ್ರೋಪಕರಣದ ಮೂಲಕ ನಡೆಸಲಾಗುತ್ತಿದೆ ಎಂದು ತಿ.ನರಸೀಪುರ ತಾಲ್ಲೂಕಿನ ತುರುಗನೂರಿನ ಪ್ರಶಾಂತ್ ದೂರು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯೋಗೇಶ್, ‘ಸಾಕಷ್ಟು ಕಡೆ ಇಂತಹ ದೂರುಗಳು ಬಂದಿವೆ. ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
‘ಲಾಕ್ಡೌನ್ನಿಂದ ಸಂಪಾದನೆ ಇಲ್ಲ. ಖಾಸಗಿ ಫೈನಾನ್ಸ್ನವರು ಸಾಲದ ಕಂತು ಪಾವತಿಸಲು ಒತ್ತಡ ಹೇರುತ್ತಿದ್ದಾರೆ’ ಎಂದು ಆಲನಹಳ್ಳಿ ಪಂಚಾಯಿತಿಯ ಜಗದೀಶ್ ಹೆಮ್ಮಿಗೆ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಯೋಗೇಶ್, ‘ಈ ವಿಚಾರವನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗುವುದು’ ಎಂದರು.
ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಕ್ರಮ ಖಾತೆಯನ್ನು ಮಾಡಿಕೊಡುತ್ತಿದ್ದಾರೆ ಎಂದು ಲೋಕೇಶ್ ಎಂಬುವವರು ನೀಡಿದ ದೂರಿಗೆ ಪ್ರತಿಕ್ರಿಯಿಸಿದ ಯೋಗೇಶ್, ‘ಈಗಾಗಲೇ ಈ ಕುರಿತು ತನಿಖೆ ನಡೆಸಲು ತಾಲ್ಲೂಕು ಪಂಚಾಯಿತು ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸ ಲಾಗಿದೆ’ ಎಂದರು.
ಹುಣಸೂರು ತಾಲ್ಲೂಕಿನ ಮಹದೇವ ಅವರು ತಮ್ಮ ಮನೆ ಮಳೆಗೆ ಬಿದ್ದು ಹೋಗಿದ್ದು, ಮನೆ ಕಟ್ಟಿಸಿಕೊಡಬೇಕು ಎಂದು ಬೇಡಿಕೆ ಇತ್ತರು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಯೋಗೇಶ್ ಭರವಸೆ ನೀಡಿದರು.
ಒಟ್ಟು 25 ಮಂದಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ದೂರವಾಣಿ ಮೂಲಕ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಗಳಾದ ಡಾ.ಪ್ರೇಮ್ ಕುಮಾರ್, ಡಾ.ಎಂ.ಕೃಷ್ಣರಾಜು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.