ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆ ರಾಜಮಾರ್ಗಕ್ಕಷ್ಟೆ ಸೀಮಿತವೇ? ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಏಕಿಲ್ಲ?

ನಗರದಾದ್ಯಂತ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿಗೆ ಕ್ರಮವಿಲ್ಲ!
Last Updated 20 ಸೆಪ್ಟೆಂಬರ್ 2022, 9:24 IST
ಅಕ್ಷರ ಗಾತ್ರ

ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ನಡೆಸಲಾಗುವುದು ಎಂದು ಸರ್ಕಾರ ಪ್ರಕಟಿಸುತ್ತಿದ್ದಂತೆಯೇ, ಇನ್ನಾದರೂ ನಮ್ಮ ರಸ್ತೆಗಳು ಸುಧಾರಣೆ ಕಾಣಲಿವೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ, ಉತ್ಸವಕ್ಕೆ ಕೆಲವೇ ದಿನಗಳು ಉಳಿದಿದ್ದರೂ ಸ್ಥಿತಿ ಬದಲಾಗಿಲ್ಲ. ರಸ್ತೆಗಳು ಡಾಂಬರು ಕಂಡಿಲ್ಲ. ಗುಂಡಿಗಳು ಮಾಯವಾಗಿಲ್ಲ. ಅವಾಂತರಗಳು ತಪ್ಪಿಲ್ಲ.

ಕೋವಿಡ್ ಕಾರಣದಿಂದ ರಸ್ತೆ ದುರಸ್ತಿಗೆ ಸರ್ಕಾರ ಕ್ರಮ ವಹಿಸಿರಲಿಲ್ಲ. ಜೊತೆಗೆ, ಈ ಬಾರಿ ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾದ್ದರಿಂದ ನಗರದಾದ್ಯಂತ ರಸ್ತೆಗಳು ಮತ್ತಷ್ಟು ದುಃಸ್ಥಿತಿಗೆ ತಲುಪಿವೆ. ತ್ವರಿತವಾಗಿ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂಬ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭರವಸೆಯು ಈಡೇರಿಲ್ಲ.

ದಸರೆಯು ರಾಜ ಮಾರ್ಗಕ್ಕಷ್ಟೆ ಸೀಮಿತವೇ ಎನ್ನುವ ಪ್ರಶ್ನೆಯೂ ಎದುರಾಗಿದೆ. ಏಕೆಂದರೆ, ನಗರದ ‘ಕೋರ್‌ ಏರಿಯಾ’ ಎಂದೇ ಪರಿಗಣಿಸಲಾಗಿರುವ ಮೈಸೂರು ಅರಮನೆ ಸುತ್ತಮುತ್ತಲಿನ ರಸ್ತೆಗಳ ಸುಧಾರಣೆಗೆ ಮಾತ್ರವೇ ಆದ್ಯತೆ ಕೊಟ್ಟಿರುವುದು ಈ ಪ್ರಶ್ನೆಗೆ ಕಾರಣವಾಗಿದೆ.

ನಗರದ ಬಹುತೇಕ ರಸ್ತೆಗಳು ಹಾಳಾಗಿವೆ. ಹಲವು ಬಡಾವಣೆಗಳಲ್ಲಿನ ಒಳ ರಸ್ತೆಗಳ ಸ್ಥಿತಿ ಹೇಳತೀರದು. ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿವೆ. ಅದರ ನಡುವೆಯೇ ಜನರು ಸರ್ಕಸ್ ಮಾಡಿಕೊಂಡು ಜನರು ಸಂಚರಿಸುತ್ತಿದ್ದಾರೆ. ದಸರೆಯಲ್ಲಿ ಮೂಲಸೌಕರ್ಯ ಕೈಗೊಳ್ಳುವುದಕ್ಕಾಗಿ ಸರ್ಕಾರದಿಂದ ಪಾಲಿಕೆಗೆ ವಿಶೇಷ ಅನುದಾನ ನೀಡುವುದು ವಾಡಿಕೆ. ಆದರೆ, ಈ ಬಾರಿ ಆ ಅನುದಾನ ಲಭ್ಯವಾಗದಿರುವುದು ಕೂಡ ತೊಡಕಾಗಿ ಪರಿಣಮಿಸಿದೆ.

ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚಿನ ಗಮನ ಕೊಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಸಮಾಧಾನಕ್ಕೆ ಕಾರಣ:

ಯೋಗ ದಿನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲವೇ ರಸ್ತೆಗಳು ‘ಡಾಂಬರು ಭಾಗ್ಯ’ ಕಂಡಿದ್ದವು. ದಸರೆಗಾದರೂ ಎಲ್ಲ ರಸ್ತೆಗಳ ಗುಂಡಿಗಳಿಗೆ ಮುಕ್ತಿ ದೊರೆಯಬಹುದು ಎಂಬುದು ಜನರ ನಿರೀಕ್ಷೆಯಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ದಸರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಾಡಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಆದರೂ ಬಹುತೇಕ ಪ್ರಮುಖ ರಸ್ತೆಗಳು ದುರಸ್ತಿಯನ್ನು ಈವರೆಗೂ ಕಾಣದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

‘ಕೃಷ್ಣರಾಜ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಕಾಳಜಿಯಿಂದ ಅನುದಾನ ದೊರೆತಿದೆ. ಹಿಂದಿನ ಮೇಯರ್‌ ಸುನಂದಾ ಫಾಲನಾತ್ರ ಅವಧಿಯಲ್ಲಿ ₹ 25 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ಅಲ್ಲಲ್ಲಿ ಕಾಮಗಾರಿಗಳು ನಡೆಯುತ್ತಿವೆ. ದಸರೆಯ ವೇಳೆಗೆ ಎಲ್ಲವನ್ನೂ ಮುಗಿಸಲಾಗುವುದು’ ಎನ್ನುತ್ತಾರೆ ಮೇಯರ್‌ ಶಿವಕುಮಾರ್. ಆದರೆ, ನಗರದಲ್ಲಿ ರಿಯಾಲಿಟಿ ಚೆಕ್ ನಡೆಸಿದರೆ ಕೆಲವೇ ರಸ್ತೆಗಳಲ್ಲಷ್ಟೆ ಕೆಲಸ ನಡೆದಿದೆ. ಕೆಲವೆಡೆ ಗುದ್ದಲಿಪೂಜೆ ಆಗದ್ದರೂ ದುರಸ್ತಿ ಕಾಮಗಾರಿ ಆರಂಭವಾಗಿಲ್ಲ. ಇನ್ನೈದು ದಿನ ಕಳೆದರೆ ದಸರಾ ಉದ್ಘಾಟನೆಗೊಳ್ಳಲಿದೆ. ಅಲ್ಲಿವರೆಗೆ ಎಲ್ಲ ಕಡೆಯೂ ರಸ್ತೆಗಳ ಸುಧಾರಣೆ ಆಗುವುದು ಅನುಮಾನ ಎನ್ನುವಂತಹ ಸ್ಥಿತಿ ಇದೆ. ಸಂತೆ ವೇಳೆಗೆ ಮೂರು ಮೊಳ ನೇಯುವುದರಿಂದ ಗುಣಮಟ್ಟ ನಿರೀಕ್ಷಿಸಲಾಗದು!

ಕೆಟ್ಟ ಸಂದೇಶ ಹೋಗುತ್ತದೆ:

‘ವಿಶ್ವವಿಖ್ಯಾತ ಮೈಸೂರು ದಸರಾ ನೋಡಲು ಹೊರ ಜಿಲ್ಲೆ, ರಾಜ್ಯ ಹಾಗೂ ದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಹೀಗೆ ಬಂದವರು ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಾರೆ. ಹೀಗೆ ಸಂಚರಿಸುವಾಗ ಒಳ್ಳೆಯ ರಸ್ತೆಗಳಿದ್ದರೆ ಸಾಂಸ್ಕೃತಿಕ ನಗರಿಯ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಬರುತ್ತದೆ. ಹಾಳಾಗಿದ್ದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದ ಪರಿಣಾಮ ರಸ್ತೆಗಳು ಸುಧಾರಣೆ ಕಂಡಿಲ್ಲ’ ಎಂದು ಮಹಾನಗರಪಾಲಿಕೆ ವಿರೋಧಪಕ್ಷದ ನಾಯಕ ಅಯೂಬ್‌ ಖಾನ್‌ ಅಸಮಾಧಾನ ವ್ಯಕ್ತಪಡಿಸಿದರು.

ಬಹಳ ಹಾಳಾಗಿವೆ

ನಗರದಾದ್ಯಂತ, ಅದರಲ್ಲೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆಗಳು ಬಹಳ ಹಾಳಾಗಿವೆ. ದಸರಾ ಎಂದರೆ ರಾಜಪಥಕ್ಕಷ್ಟೆ ಸೀಮಿತವೇ?
– ಅಯೂಬ್ ಖಾನ್, ಮಹಾನಗರಪಾಲಿಕೆ ವಿರೋಧಪಕ್ಷದ ನಾಯಕ

ಸೂಚಿಸಲಾಗಿದೆ

ನಗರದಲ್ಲಿ ರಸ್ತೆ ದುರಸ್ತಿ ಕೈಗೆತ್ತಿಕೊಳ್ಳುವುದು ಮಳೆಯ ಕಾರಣದಿಂದಾಗಿ ವಿಳಂಬವಾಯಿತು. ಇತ್ತೀಚೆಗೆ ಚಾಲನೆ ದೊರೆತಿದೆ. ಎಲ್ಲ ಕಡೆಯೂ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ.
– ಶಿವಕುಮಾರ್, ಮೇಯರ್

ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ಕೊಡುವುದು ಸರಿಯಲ್ಲ. ಈ ಬಾರಿ ಎಲ್ಲ ಬಡಾವಣೆಗಳ ರಸ್ತೆಗಳೂ ಸಂಪೂರ್ಣ ಹದಗೆಟ್ಟಿದ್ದು, ಅವುಗಳ ದುರಸ್ತಿಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು.
–ವಿಕ್ರಂ ಅಯ್ಯಂಗಾರ್, ಸಾಮಾಜಿಕ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT