ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ರಾಜಕೀಯ ಪುಕ್ಕಲುತನ: ಎಚ್.ವಿಶ್ವನಾಥ್

Last Updated 11 ಅಕ್ಟೋಬರ್ 2021, 10:16 IST
ಅಕ್ಷರ ಗಾತ್ರ

ಮೈಸೂರು: ‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ರಾಜಕೀಯ ಪುಕ್ಕಲುತನವಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸೋಮವಾರ ಇಲ್ಲಿ ಲೇವಡಿ ಮಾಡಿದರು.

‘ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ನವದೆಹಲಿಗೆ ಕರೆಸಿಕೊಂಡು ಮಾತನಾಡಿದಾಗ; ರಾಷ್ಟ್ರ ರಾಜಕಾರಣಕ್ಕೆ ಬರುವೆ. ನನ್ನನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿ ಎಂದೇಳುವ ಧೈರ್ಯವನ್ನು ಸಿದ್ದರಾಮಯ್ಯ ಮಾಡಬೇಕಿತ್ತು’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಿದ್ದಾಗ ನಿತ್ಯವೂ ಭ್ರಷ್ಟ ಎಂದು ವಾಗ್ದಾಳಿ ನಡೆಸುತ್ತಿದ್ದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ; ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ, ಇದರಲ್ಲೇನೋ ರಾಜಕೀಯ ವಾಸನೆ ಇದೆ. ವಿಜಯೇಂದ್ರ, ಯಡಿಯೂರಪ್ಪ ಹಣಿಯುವ ತಂತ್ರಗಾರಿಕೆ ನಡೆದಿದೆ ಎನ್ನುತ್ತಿರುವುದು ಬೂಟಾಟಿಕೆಯ ಹೇಳಿಕೆ. ನೀವಿಬ್ಬರೂ ಭ್ರಷ್ಟಾಚಾರದ ಪರವೋ? ವಿರುದ್ಧವೋ? ಎಂಬುದನ್ನು ಮೊದಲು ಸ್ಪಷ್ಟಪಡಿಸಿ’ ಎಂದು ವಿಶ್ವನಾಥ್‌ ವಾಗ್ದಾಳಿ ನಡೆಸಿದರು.

‘ವೀರಶೈವ ಲಿಂಗಾಯತರ ಅನುಕಂಪ ಗಿಟ್ಟಿಸಲಿಕ್ಕಾಗಿ ಕುಮಾರಸ್ವಾಮಿ, ಸಿದ್ದರಾಮಯ್ಯ ಪೈಪೋಟಿಗೆ ಬಿದ್ದವರಂತೆ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ಯಡಿಯೂರಪ್ಪ ಕುಟುಂಬಕ್ಕೆ ಸಮೀಕರಿಸಿ ಮಾತನಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್, ಜೆಡಿಎಸ್‌ಗೆ ಕಿಂಚಿತ್‌ ಲಾಭವಾಗಲ್ಲ. ಬಿಜೆಪಿಗೆ ನಷ್ಟವೂ ಆಗಲ್ಲ. ಏಕೆಂದರೇ ವೀರಶೈವ ಲಿಂಗಾಯತರು ಬುದ್ಧಿವಂತರು’ ಎಂದು ಅವರು ಕುಟುಕಿದರು.

ಲೋಕಾಯುಕ್ತ ಶಕ್ತಿಗೊಳಿಸಿ: ‘ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ನಿಷ್ಕ್ರಿಯಗೊಳಿಸಿದ ಲೋಕಾಯುಕ್ತ ಸಂಸ್ಥೆ ಹಾಗೂ ಯಶಸ್ವಿನಿ ರೈತ ಆರೋಗ್ಯ ವಿಮೆಯನ್ನು ಮತ್ತೆ ಸದೃಢಗೊಳಿಸಿ’ ಎಂದು ವಿಶ್ವನಾಥ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು.

‘ನಿಮ್ಮಪ್ಪ ಅಧಿಕಾರದಲ್ಲಿದ್ದಾಗ ರೂಪುಗೊಂಡ ಸಂಸ್ಥೆ ಲೋಕಾಯುಕ್ತ. ಈ ಸಂಸ್ಥೆಗೆ ಹಿಂದಿನ ಅಧಿಕಾರವನ್ನೇ ನೀಡಿ. ಭ್ರಷ್ಟರಿಗೆ ಕೊಂಚವಾದರೂ ಭಯವಿರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT