ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ನಿರ್ಮಾಣಕ್ಕೆ ಜನರಿಂದ ಹಣ ಕೇಳಿಲ್ಲ: ಇಲಾಖೆಯಿಂದ ಹೇಳಿಕೆ ಬಿಡುಗಡೆ

ಪಾಲಿಕೆ, ಮುಡಾ, ಗ್ರಂಥಾಲಯ ಇಲಾಖೆಯಿಂದ ಜಂಟಿ ಹೇಳಿಕೆ ಬಿಡುಗಡೆ
Last Updated 22 ಏಪ್ರಿಲ್ 2021, 5:09 IST
ಅಕ್ಷರ ಗಾತ್ರ

ಮೈಸೂರು: ರಾಜೀವ್‌ನಗರದಲ್ಲಿ ಬೆಂಕಿಗೆ ಆಹುತಿಯಾದ ಸೈಯದ್ ಇಸಾಕ್ ಅವರ ಗ್ರಂಥಾಲಯ ಮರು ನಿರ್ಮಿಸಲು ಸಾರ್ವಜನಿಕರಿಂದ ಯಾವುದೇ ದೇಣಿಗೆ ಕೇಳಿಲ್ಲ ಎಂದು ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಿ.ಬಿ.ನಟೇಶ್ ಹಾಗೂ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಬಿ.ಮಂಜುನಾಥ್ ಬುಧವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈ ಮೂರೂ ಸಂಸ್ಥೆಗಳು ಸ್ವತಂತ್ರವಾಗಿ ಅಥವಾ ಜಂಟಿಯಾಗಿ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಆರ್ಥಿಕವಾಗಿ ಶಕ್ತಿ ಹೊಂದಿವೆ. ಯಾವುದೇ ಸಾರ್ವಜನಿಕ ದೇಣಿಗೆಯ ಅವಶ್ಯಕತೆ ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸುವ ಮೊದಲೇ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಸೈಯದ್ ಇಸಾಕ್ ಅವರಿಗೆ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆಂದು ದೇಣಿಗೆ ನೀಡುವುದಕ್ಕೆ ಹಾಗೂ ದೇಣಿಗೆ ಸಂಗ್ರಹಿಸುವುದಕ್ಕೆ ಪ್ರಾರಂಭಿಸಿದ್ದರು. ಈ ಹಣವು ದುರುಪಯೋಗವಾಗದಿರಲಿ ಎಂಬ ಉದ್ದೇಶದಿಂದ ಪಾರದರ್ಶಕವಾಗಿ ಸಮಿತಿಯ ಮೂಲಕ ನಿರ್ವಹಿಸಲು ಪ್ರತ್ಯೇಕ ಜಂಟಿ ಖಾತೆ ತೆರೆಯಲಾಗಿತ್ತು. ಗ್ರಂಥಾಲಯಕ್ಕೆ ದೇಣಿಗೆ ನೀಡಲಿಚ್ಛಿಸುವ ದಾನಿಗಳು ಹಣದ ಬದಲಾಗಿ ಗ್ರಂಥಾಲಯಕ್ಕೆ ಅವಶ್ಯವಿರುವ ಪುಸ್ತಕಗಳು, ಪೀಠೋಪಕರಣಗಳು, ಕಂಪ್ಯೂಟರ್‌ಗಳು, ಉಪಕರಣಗಳು ಇತ್ಯಾದಿ ಪರಿಕರ ನೀಡಬಹುದಾಗಿದೆ ಎಂದು ಹೇಳಿದ್ದಾರೆ.

ಗ್ರಂಥಾಲಯ ನಿರ್ಮಾಣ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲೆಂದು ಉಪಸಮಿತಿ ರಚಿಸಲಾಗಿತ್ತೇ ಹೊರತೂ ಜಂಟಿ ಬ್ಯಾಂಕ್‌ ಖಾತೆಯ ನಿರ್ವಹಣೆಗಾಗಿ ಅಲ್ಲ. ದೇಣಿಗೆ ನೀಡಿರುವವರು ಸಮಿತಿ ಸಭೆಯ ಪ್ರಕ್ರಿಯೆಗಳನ್ನು ವೀಕ್ಷಿಸಬಹುದು, ವಿವರ ಪಡೆಯಬಹುದು ಹಾಗೂ ಸಲಹೆಗಳನ್ನೂ ಪಡೆಯಬಹುದಾಗಿದೆ.

ಗ್ರಂಥಾಲಯ ಇದ್ದ ಜಾಗದಲ್ಲೇ ಮೈಸೂರು ನಿರ್ಮಿತಿ ಕೇಂದ್ರದ ವತಿಯಿಂದ ಪಾಲಿಕೆ, ಮುಡಾ, ಗ್ರಂಥಾಲಯ ಇಲಾಖೆಗಳ ಜಂಟಿ ಅನುದಾನದಲ್ಲಿ ನಿರ್ಮಿಸಲಾಗುತ್ತದೆ. ಸದ್ಯ, ಖಾತೆಯಲ್ಲಿ ಸಾರ್ವಜನಿಕರಿಂದ ₹ 9,124 ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.

ವಿಶ್ವ ಪುಸ್ತಕ ದಿನವಾದ ಏ. 23ರಂದು ಕಟ್ಟಡ ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿ ಅವರಲ್ಲಿ ಅನುಮತಿಗಾಗಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಂಥಾಲಯವನ್ನು ಮರು ನಿರ್ಮಿಸಲೆಂದು ಕ್ರೌಡ್‌ ಫಂಡಿಂಗ್‌ ಅಭಿಯಾನ ನಡೆಸಿದ್ದ ಫತೇನ್‌ ಮಿಸ್ಬಾ, ಸಂಗ್ರಹವಾಗಿದ್ದ ₹ 29 ಲಕ್ಷದಷ್ಟು ಹಣವನ್ನು ದಾನಿಗಳ ಅಭಿಪ್ರಾಯ ಪಡೆದು, ಅವರ ಇಚ್ಛೆಯಂತೆ ವಾಪಸ್ ಮಾಡಲು ನಿರ್ಧರಿಸಿದ್ದರು.

‘ಸರ್ಕಾರವೇ ಗ್ರಂಥಾಲಯವನ್ನು ಮರು ನಿರ್ಮಿಸಲು ಮುಂದೆ ಬಂದಿರುವಾಗ ಸಾರ್ವಜನಿಕರ ಹಣ ಏಕೆ ಬೇಕು’ ಎಂದು ದಾನಿಗಳು ಸೇರಿದಂತೆ ಹಲವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು. ದಾನಿಗಳ ಅಭಿಪ್ರಾಯ ಸಂಗ್ರಹಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಫತೇನ್‌ ಮಿಸ್ಬಾ ಮಂಗಳವಾರವಷ್ಟೇ ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT