ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧಿಕಾರಿ ಧೋರಣೆ ಬೇಡ: ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದ ಶಾಸಕ ಮಂಜುನಾಥ್

Last Updated 27 ನವೆಂಬರ್ 2020, 11:06 IST
ಅಕ್ಷರ ಗಾತ್ರ

ಮೈಸೂರು: ‘ಎರಡು ರಾಜ್ಯಗಳ ಮುಖ್ಯಮಂತ್ರಿಗಳು ನಿಮ್ಮ ಬೆನ್ನಿಗಿದ್ದಾರೋ, ಕಾಲ ಕೆಳಗೆ ಇದ್ದಾರೋ ಗೊತ್ತಿಲ್ಲ. ಈ ಮುಖ್ಯಮಂತ್ರಿಗಳ ಕಾರಣಕ್ಕೆ ಏನು ಬೇಕಾದರೂ ಮಾಡಬಹುದು ಅಂದುಕೊಳ್ಳಬೇಡಿ. ಕಾನೂನಿನ ಅಡಿಯಲ್ಲಿ ಕೆಲಸ ಮಾಡಿ’ ಎಂದು ಹುಣಸೂರು ಶಾಸಕ ಎಚ್‌.ಪಿ.ಮಂಜುನಾಥ್‌ ಅವರು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿದ್ದಾರೆ.

‘ಕೆಡಿಪಿ ಸಭೆಯಲ್ಲಿ ಶಾಸಕರು, ಜನಪ್ರತಿನಿಧಿಗಳು ಅಧಿಕಾರಿಗಳನ್ನು ಪ್ರಶ್ನಿಸುವುದು ಸಹಜ. ಹುಣಸೂರಿನ ಅಭಿವೃದ್ಧಿ ಕೆಲಸಗಳ ವಿಷಯಕ್ಕೆ ಸಂಬಂಧಿಸಿದಂತೆ ನಾನು ಪ್ರಶ್ನೆ ಮಾಡಿದ್ದು ನಿಜ. ಅದನ್ನು ಅನುಪಾಲನಾ ವರದಿಯಲ್ಲಿ ಸೇರಿಸಿ ಮುಂದಿನ ಸಭೆಯಲ್ಲಿ ಉತ್ತರಿಸುವುದು ಪದ್ಧತಿ. ಆದರೆ ನಾನು ಪ್ರಶ್ನೆ ಮಾಡಿದ್ದಕ್ಕೆ ಇದೀಗ ಹಗೆತನ ಸಾಧಿಸಲು ಮುಂದಾಗಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ನಾನು ಪ್ರಶ್ನೆ ಮಾಡಿದ್ದನ್ನು ವೈಯಕ್ತಿವಾಗಿ ತೆಗೆದುಕೊಂಡು ನನಗೆ ಮರುದಿನವೇ ಪತ್ರ ಬರೆದಿದ್ದಾರೆ. ಆದರೆ ಆ ಪತ್ರ ಅಧಿಕೃತವಾಗಿ ನನ್ನ ಕೈಸೇರಿಲ್ಲ. ಅದಕ್ಕೂ ಮುನ್ನವೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ. ನನಗೆ ಪತ್ರ ಬರೆದಿರುವುದು ಕಾನೂನುಬಾಹಿರ ಕ್ರಮ. ಸಭೆ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿ ಶಾಸಕರಿಗೆ ಪತ್ರ ಬರೆಯುವಂತಿಲ್ಲ ಈ ವಿಚಾರದಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿದ್ದು, ಹಿಟ್ಲರಿಸಂ ಮಾಡುತ್ತಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ’ ಎಂದರು.

’ನನಗೆ ಬರೆದಿರುವ ಪತ್ರದಲ್ಲಿ ನನ್ನ ವೈಯಕ್ತಿಕ ಸ್ಥಿರಾಸ್ತಿಯ ಭೂಪರಿವರ್ತನೆ ವಿಚಾರವನ್ನೂ ಪ್ರಸ್ತಾಪಿಸಿದ್ದೀರಿ. ಅದನ್ನು ಪ್ರಸ್ತಾಪಿಸುವ ಅಗತ್ಯವಾದರೂ ಏನಿತ್ತು? ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದ ನನಗೆ ಪತ್ರ ಬರೆಯಲಾಗಿದೆ ಎಂಬುದು ಸ್ಪಷ್ಟ. ಈ ಮೂಲಕ ನನಗೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದೀರಿ. ನಿಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿಕ ಇದೆ ಎಂಬ ಎಚ್ಚರಿಕೆ ನೀಡಿದ್ದೀರಿ. ಜಿಲ್ಲೆಯ ಜನಪ್ರತಿನಿಧಿಗಳು ಬಾಯಿ ಮುಚ್ಚಿಕೊಂಡಿರಬೇಕು ಎಂಬ ಸಂದೇಶವನ್ನು ಈ ಪತ್ರದ ಮೂಲಕ ಕೊಟ್ಟಿದ್ದೀರಿ. ಈ ರೀತಿಯ ಗೊಡ್ಡು ಬೆದರಿಕೆ ತಂತ್ರಕ್ಕೆ ನಾನು ಮಣಿಯಲ್ಲ’ ಎಂದು ತಿರುಗೇಟು ನೀಡಿದರು.

ಐಎಎಸ್ ಪಾಸ್ ಮಾಡಿರುವ ಬಗ್ಗೆ ಅನುಮಾನ:

‘ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಐಎಎಸ್‌ ಪಾಸ್‌ ಮಾಡಿರುವ ಬಗ್ಗೆ ನನಗೆ ಅನುಮಾನ ಇದೆ. ನಿಜವಾಗಿಯೂ ಪಾಸ್‌ ಆಗಿದ್ದರೆ ಆಡಳಿತದ ಬಗ್ಗೆ ಸಾಮಾನ್ಯ ಜ್ಞಾನವಾದರೂ ಇರಬೇಕಲ್ವಾ’ ಎಂದು ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ಪ್ರಶ್ನಿಸಿದರು.

‘ಶಾಸಕರಿಗೆ ಬರೆದ ಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿ ಅವಮಾನ ಮಾಡಿದ್ದೀರಿ. ಇದಕ್ಕೆ ಎರಡು ದಿನಗಳಲ್ಲಿ ಕ್ಷಮೆಯಾಚಿಸಬೇಕು. ಪತ್ರವನ್ನು ನಿಮ್ಮ ಕಚೇರಿಯವರು ಬಹಿರಂಗಪಡಿಸಿದ್ದಾ ಅಥವಾ ನೀವೇ ಬಹಿರಂಗಪಡಿಸಿದ್ದಾ ಎಂಬುದು ಗೊತ್ತಾಬೇಕು. ಈ ವಿಷಯವನ್ನು ಪರಿಷತ್‌ನಲ್ಲೂ ಪ್ರಸ್ತಾಪಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT