ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಹಿಳಾ ಜನಪ್ರತಿನಿಧಿಗಳ ಅಳಲಿಗೆ ದನಿಗೂಡಿಸಿದ ಜಿ.ಟಿ.ದೇವೇಗೌಡ

ಪಿಡಿಒಗೆ ಬೈದ ಶಾಸಕ
Last Updated 27 ಜುಲೈ 2021, 13:47 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ತಾಲ್ಲೂಕಿನ ಧನಗನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಗೋಪಾಲಕೃಷ್ಣ ಅವರನ್ನು, ಶಾಸಕ ಜಿ.ಟಿ.ದೇವೇಗೌಡ ಮಂಗಳವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವಾಚ್ಯವಾಗಿ ನಿಂದಿಸಿದರು.

ಗ್ರಾಮ ಪಂಚಾಯಿತಿವಾರು ಪ್ರಗತಿ ಪರಿಶೀಲನೆ ಸಂದರ್ಭ ಅಧ್ಯಕ್ಷೆ ಮಹಾಲಕ್ಷ್ಮೀ, ಉಪಾಧ್ಯಕ್ಷೆ ಲೀಲಾವತಿ ಪಿಡಿಒ ವಿರುದ್ಧ ದೂರಿದರು. ಗೋಪಾಲಕೃಷ್ಣ ನಮಗೆ ಯಾವೊಂದು ಮಾಹಿತಿಯನ್ನು ಕೊಡಲ್ಲ. ಕೇಳಿದರೆ ಉಡಾಫೆಯಿಂದ ಮಾತನಾಡುತ್ತಾರೆ ಎಂದು ಶಾಸಕರ ಬಳಿ ಹೇಳಿಕೊಂಡರು.

ಅಧ್ಯಕ್ಷೆ–ಉಪಾಧ್ಯಕ್ಷೆಯ ಅಳಲು ಆಲಿಸಿದ ಜಿ.ಟಿ.ದೇವೇಗೌಡ, ಸಭೆಯಲ್ಲೇ ಪಿಡಿಒ ವಿರುದ್ಧ ಬಹಿರಂಗವಾಗಿ ಸಿಡಿಮಿಡಿಗೊಂಡರು. ಅವಾಚ್ಯ ಪದ ಬಳಸಿ ಎಚ್ಚರಿಕೆ ನೀಡಿದರು.

‘ಹೆಣ್ಮಕ್ಕಳು ಅಂದರೇ ಏನಂದುಕೊಂಡಿಯಾ? ಇದೇನಾ ಪ್ರಜಾಪ್ರಭುತ್ವ. ಅವರು ಹೇಳಿದಂಗೆ ಕೆಲಸ ಮಾಡಬೇಕಾದವನು ನೀನು. ನಿನ್ನ ಅಕ್ಕ–ತಂಗಿ ಜೊತೆಗೂ ಹೀಗೆ ನಡೆದುಕೊಳ್ತೀಯಾ?’ ಎಂದು ಗೋಪಾಲಕೃಷ್ಣ ವಿರುದ್ಧ ಹರಿಹಾಯ್ದ ಶಾಸಕರು, ‘ಈತನನ್ನು ಇದೇ ಸಭೆಯಲ್ಲಿ ಅಮಾನತುಗೊಳಿಸಿ. ಜಿ.ಪಂ. ಸಿಇಒಗೆ ನಾನು ಹೇಳುತ್ತೇನೆ’ ಎಂದು ಮೈಸೂರು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಪ್ರೇಮ್‌ಕುಮಾರ್‌ ಅವರನ್ನು ಆಗ್ರಹಿಸಿದರು.

ಪ್ರೇಮ್‌ಕುಮಾರ್‌ ತಡಬಡಾಯಿಸಿದ್ದಕ್ಕೆ, ‘ನಿಮ್ಮೆದುರಿಗೆ ಅವ ಏನು ಉತ್ತರ ಕೊಟ್ಟಿದ್ದಾನೆ ಎಂಬುದನ್ನು ಅವಲೋಕಿಸಿ. ಸಿಇಒ ಜೊತೆ ಚರ್ಚಿಸಿ, ನಿರ್ಧಾರ ಕೈಗೊಳ್ಳಿ’ ಎಂದು ಜಿ.ಟಿ.ದೇವೇಗೌಡ ಆಗ್ರಹಿಸಿದರು.

ಪ್ರಗತಿ ಪರಿಶೀಲನೆಗೂ ಮುನ್ನ ಪಿಡಿಒ ಗೋಪಾಲಕೃಷ್ಣ ಸಭೆಯಲ್ಲೇ ಅಧ್ಯಕ್ಷೆ–ಉಪಾಧ್ಯಕ್ಷೆಯನ್ನು ಯಾವುದೇ ದೂರು ಹೇಳದಂತೆ ಮನವೊಲಿಸುತ್ತಿದ್ದು ಗೋಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT