ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಪುಂಡಾನೆ, ಹುಲಿ ಸೆರೆಗೂ ಎತ್ತಿದ ಕೈ l ಮಾವುತ ವಸಂತ ಜೊತೆಗಿದ್ದರೆ ಮತ್ತಷ್ಟು ಬಲ
Last Updated 17 ಸೆಪ್ಟೆಂಬರ್ 2021, 3:51 IST
ಅಕ್ಷರ ಗಾತ್ರ

ಮೈಸೂರು: ದಸರೆಯಲ್ಲಿ ಚಿನ್ನದ ಅಂಬಾರಿ ಹೊರುವುದಷ್ಟೇ ಅಲ್ಲ; ದಾಂದಲೆ ನಡೆಸುವ ಕಾಡಾನೆ ಹಾಗೂ ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಗೂ ಅಭಿಮನ್ಯು ಎತ್ತಿದ ಕೈ. ‘ಜೀವರಕ್ಷಕ’ನಾಗಿಯೂ ಕೆಲಸ ಮಾಡುತ್ತಿದ್ದು, ಮಾವುತ ವಸಂತ ಜೊತೆಗಿದ್ದರೆ ಮತ್ತಷ್ಟು ಧೈರ್ಯದಿಂದ ಮುನ್ನುಗುತ್ತದೆ.

ಕರ್ನಾಟಕವಲ್ಲದೇ ಕೇರಳ, ಆಂಧ್ರ, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಕಾಡಾನೆ, 25ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಶ ಸಾಧಿಸಿದೆ. ರೌಡಿ ರಂಗಣ್ಣ ಹಾಗೂ ಐರಾವತ ಆನೆ ಸೆರೆ ಹಿಡಿದಿದ್ದು ಇದೇ ಸಲಗ.

ಪುಂಡಾನೆಗಳ ಉಪಟಳದಿಂದ ಅರಣ್ಯ ಇಲಾಖೆ ಸಮಸ್ಯೆಗೆ ಸಿಲುಕಿದಾಗಲೆಲ್ಲಾ ಅಭಿಮನ್ಯು ಆಪತ್ಬಾಂಧವ. ಆನೆ ಮೇಲೇರಿ ಮಾವುತನ ಹಿಂದೆ ಕುಳಿತುಕೊಳ್ಳುವ ಪಶುವೈದ್ಯರು, ಶಾರ್ಪ್‌ ಶೂಟರ್‌ಗಳು ಕಾಡಾನೆ ಹಾಗೂ ಹುಲಿಗೆ ಅರಿವಳಿಕೆ ಚುಚ್ಚುಮದ್ದು ಹೊಡೆದು ಪ್ರಜ್ಞೆ ತಪ್ಪಿಸುತ್ತಾರೆ.

ಆಹಾರ ಅರಸಿ ಊರಿಗೆ ನುಗ್ಗುವ ಹಾಗೂ ಮದವೇರಿದ ಆನೆ ಪಳಗಿಸಲು, ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲು, ನಿತ್ರಾಣಗೊಂಡ ಆನೆ ಸಾಗಿಸಲು, ರೇಡಿಯೊ ಕಾಲರ್‌ ಅಳವಡಿಸುವ ಕಾರ್ಯದಲ್ಲಿ ಅಭಿಮನ್ಯು ಮೂರು ದಶಕದಿಂದ ತೊಡಗಿದೆ. ಹೀಗಾಗಿಯೇ, ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ‘ಎಕೆ–47’ ಎಂದು ಕರೆಯುತ್ತಾರೆ.

ರೋಚಕ ಕಾದಾಟದಲ್ಲಿ ಯಶಸ್ಸು: 2017ರಲ್ಲಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮೂವರನ್ನು ಕೊಂದು ಆತಂಕ ತಂದೊಡ್ಡಿದ್ದ ಕಾಡಾನೆಯನ್ನು ಚನ್ನಗಿರಿ ತಾಲ್ಲೂಕಿನ ಮಾನಮಟ್ಟಿಯಲ್ಲಿ ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ಅಭಿಮನ್ಯು.

‘ಚನ್ನಗಿರಿಯಲ್ಲಿ ಕಾಡಾನೆ ಸೆರೆಹಿಡಿಯುವಾಗ ಮತ್ತೊಂದು ಆನೆ ಎಲ್ಲಿಂದಲೋ ನುಗ್ಗಿಬಂತು. ಅಧಿಕಾರಿಗಳಿಗೆ ಓಡಲೂ ಆಗಲಿಲ್ಲ. ಆಗ ಅಭಿಮನ್ಯುವನ್ನು ಕಾದಾಟಕ್ಕೆ ಬಿಟ್ಟೆ. ಅದು ಆನೆಯ ದಂತವನ್ನು ಮುರಿದುಹಾಕಿತು. ಆಕಸ್ಮಾತ್‌ ಅಭಿಮನ್ಯು ಆ ಜಾಗದಲ್ಲಿ ಇರದಿದ್ದರೆ ಅಥವಾ ಭಯಗೊಂಡು ಹಿಂದೆ ಸರಿದಿದ್ದರೆ ದೊಡ್ಡ ಅವಘಡವೇ ನಡೆದು ಹೋಗುತಿತ್ತು’ ಎಂದು ವಸಂತ ನೆನಪಿಸಿಕೊಂಡರು.

ಅಭಿಮನ್ಯು ನೇತೃತ್ವದ ಆನೆಗಳು 2015ರಲ್ಲಿ ಮಹಾರಾಷ್ಟ್ರದಲ್ಲಿ ‘ಆಪರೇಷನ್ ಎಲಿಫೆಂಟ್ಸ್’ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ್ದವು. ಆಗ ಮೂರು ಸಲಗಗಳನ್ನು ಸೆರೆ ಹಿಡಿದು ಕ್ರಾಲ್‌ಗೆ ತಳ್ಳಿದ್ದವು.

ಶಿಂಷಾ ನದಿ ಪಾತ್ರದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ್ದ ಪುಂಡಾನೆ ‘ಮೌಂಟೇನ್ ಟಸ್ಕರ್-3945’ ಅನ್ನು ಕೂಳಗೆರೆ ಬಳಿ ಸೆರೆ ಹಿಡಿಯುವಲ್ಲೂ ಪ್ರಮುಖ ಪಾತ್ರ ವಹಿಸಿತ್ತು. ಸಕಲೇಶಪುರ ತಾಲ್ಲೂಕಿನಲ್ಲಿ ಐವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ‘ಮೌಂಟೈನ್’ ಹಾಗೂ ‘ಗುಂಡ’ ಹೆಸರಿನ ಎರಡು ಗಂಡು ಕಾಡಾನೆಗಳನ್ನು ಅಭಿಮನ್ಯು ಮುಂದಾಳತ್ವದಲ್ಲಿ ಜೂನ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಒಂದೇ ದಿನದಲ್ಲಿ ಎರಡೂ ಆನೆಗಳನ್ನು ಸೆರೆ ಹಿಡಿದಿದ್ದು ವಿಶೇಷ. 2019ರಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮೀಣ ಭಾಗದ ಜನರ ನಿದ್ದೆಗೆಡಿಸಿದ್ದ ತಮಿಳುನಾಡಿನ ಪುಂಡಾನೆಯನ್ನು ಸೆರೆ ಹಿಡಿದಿತ್ತು.

‘ಅಭಿಮನ್ಯು’ ಜೀವ ಉಳಿಸಿದ!: ‘ಚನ್ನಗಿರಿ ತಾಲ್ಲೂಕಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಮ್ಮ ಜೀವ ಉಳಿಸಿದ್ದು ಅಭಿಮನ್ಯು. ಅದೊಂದು ರೋಚಕ ಕಾದಾಟ’ ಎಂದು ನೆನಪಿಸಿಕೊಳ್ಳುತ್ತಾರೆ ಪಶುವೈದ್ಯ ಡಾ.ನಾಗರಾಜ್‌.

‘ಆ ಕಾರ್ಯಾಚರಣೆಯಲ್ಲಿ ನಾನೂ ಪಾಲ್ಗೊಂಡಿದ್ದೆ. ಒಂದು ಆನೆಯು ಅಭಿಮನ್ಯು ಮೇಲೆ ದಾಳಿಗೆ ಮುಂದಾಗಿ ದಂತ ಮುರಿಸಿಕೊಂಡು ಪರಾರಿಯಾಯಿತು. ಇನ್ನೊಂದು ಕಾಡಾನೆ ಸೆರೆ ಹಿಡಿಯಲು ಅಭಿಮನ್ಯು ಮುಂದೆ ಕಾಲ್ನಡಿಗೆಯಲ್ಲಿ ನಾನು, ಅಕ್ರಂ, ವೆಂಕಟೇಶ್‌ ಹೊರಟೆವು. ಕಾಡಾನೆ ಕಂಡ ತಕ್ಷಣ ಅರಿವಳಿಕೆ ಚುಚ್ಚುಮದ್ದು ಹೊಡೆದೆವು. ಅದು ಕೆಳಗೆ ಬೀಳಬಹುದೆಂದು ಭಾವಿಸಿದ್ದೆವು. ಆದರೆ, ಒಮ್ಮೆಲೇ ಹಿಂದಿರುಗಿ ನಮ್ಮ ಮೇಲೇರಗಿ ಬಂತು. ಸಮೀಪದಲ್ಲೇ ಇದ್ದ ಅಭಿಮನ್ಯು ಕಂಡು ಬೆದರಿತು. ಆಗ ಅಲ್ಲಿನ ಡಿಸಿಎಫ್‌ ಆಗಿದ್ದ ಟಿ.ಬಾಲಚಂದ್ರ ಧೈರ್ಯ ತುಂಬಿದರು. ಸಂಜೆ ವೇಳೆಗೆ 3–4 ಡೋಸ್‌ ಕೊಟ್ಟು ಆ ಕಾಡಾನೆ ಹಿಡಿದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT