ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದಶ್ರೀ’ ಆ್ಯಪ್‌: ಕನ್ನಡ ಪದಬಂಧ ಆಟದ ಖುಷಿ!

ಕನ್ನಡದ ದಾರಿಯಲ್ಲಿ– 16
Last Updated 19 ನವೆಂಬರ್ 2021, 7:49 IST
ಅಕ್ಷರ ಗಾತ್ರ

ಮೈಸೂರು: ನಿತಿನ್‌ ಕೋಳೆಕರ್‌ ಮಾತೃಭಾಷೆ ಮರಾಠಿ. ಆದರೆ ಕನ್ನಡದ ಮೇಲಿನ ಪ್ರೀತಿಗಾಗಿ ಅವರು ‘ಪದಶ್ರೀ’ ಆ್ಯಂಡ್ರಾಯ್ಡ್‌ ಆ್ಯಪ್‌ಗಳನ್ನು ರೂಪಿಸಿ ನವ ಮಾಧ್ಯಮಗಳಲ್ಲಿ ಕನ್ನಡ ಕಲಿಕೆಯ ದಾರಿಗಳ ಹುಡುಕಾಟ ನಡೆಸಿದ್ದಾರೆ.

ನಗರದ ಮಂಡಿ ಮೊಹಲ್ಲಾದ ಬಹುಭಾಷಾ ವಾತಾವರಣ, ಸ್ನೇಹಿತರು, ಸದ್ವಿದ್ಯಾ ಶಾಲೆಯ ಶಿಕ್ಷಕಿ ಶಾರದಾ ರಂಗನಾಥ್‌ ಅವರ ಕನ್ನಡ ಪಾಠಗಳನ್ನು ಸ್ಮರಿಸುವ ನಿತಿನ್‌ ಅವರಿಗೆ ಐದನೇ ತರಗತಿಯಿಂದಲೇ ಪದಬಂಧಗಳನ್ನು ಬಿಡಿಸುವ ಹವ್ಯಾಸವಿತ್ತು. ಅದೇ ಮುಂದೆ ‘ಪದಶ್ರೀ’ 7 ಮನೆ, 9 ಮನೆಯ ಆಟಗಳನ್ನು ಆ್ಯಂಡ್ರಾಯ್ಡ್‌ನಲ್ಲಿ ರೂಪಿಸಲು ಪ್ರೇರಣೆಯಾಯಿತು.

‘ಕಂಪ್ಯೂಟರ್‌ ಸೈನ್ಸ್‌’ ಡಿಪ್ಲೊಮಾ ಪಡೆದಿರುವ ನಿತಿನ್‌, ನಗರದ 100ಕ್ಕೂ ಹೆಚ್ಚು ಸಂಘ– ಸಂಸ್ಥೆಗಳು, ಶಾಲಾ ಕಾಲೇಜುಗಳಿಗೆ ಜಾಲತಾಣವನ್ನು ವಿನ್ಯಾಸಗೊಳಿಸಿ ನಿರ್ವಹಿಸುತ್ತಿದ್ದಾರೆ.

ಕನ್ನಡ ಪದಬಂಧ ಆಟಗಳ ಆ್ಯಪ್‌ಗಳು ಇಲ್ಲದಿರುವುದನ್ನು ಗಮನಿಸಿದ ಅವರು, 2019ರಲ್ಲಿ ಆ್ಯಪ್‌ಗಳನ್ನು ರೂಪಿಸಲು ಶ್ರಮಿಸಿದರು. ಈಗ ‘ಪದಶ್ರೀ’, ‘ಪದಶ್ರೀ ಸಪ್ತಕ’ ಹಾಗೂ ‘ಕನ್ನಡ ಬರುತ್ತಾ?’ ಆ್ಯಪ್‌ಗಳು ಗೂಗಲ್‌ ಪ್ಲೇಸ್ಟೋರ್‌ನಲ್ಲಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್‌ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ನಿತ್ಯವೂ ಬಳಸುತ್ತಿದ್ದು, 400 ಬಳಕೆದಾರರು ಆಟಗಳನ್ನು ಗೆಲ್ಲುತ್ತಿದ್ದಾರೆ.

‘ಪ್ಲೇ ಸ್ಟೋರ್‌ನಲ್ಲಿ ಇಂಗ್ಲಿಷ್‌ ಸೇರಿದಂತೆ ಕನ್ನಡೇತರ ಭಾರತೀಯ ಭಾಷೆಗಳ ಪದಬಂಧ ಆಟದ ಆ್ಯಪ್‌ಗಳಿದ್ದವು. ಕನ್ನಡದ್ದು ಮಾತ್ರ ಇರಲಿಲ್ಲ. 6 ತಿಂಗಳಲ್ಲಿ ಆ್ಯಪ್‌ ಕೋಡಿಂಗ್‌ ಕಲಿತು ಆ್ಯಪ್‌ಗಳನ್ನು ರೂಪಿಸಿದೆ. ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡು ಆಡುತ್ತಿದ್ದಾರೆ’ ಎಂದು ಹೇಳಿದರು.

‘ಸುಧಾ, ಪ್ರಜಾವಾಣಿ ಪದಬಂಧಗಳು ಇಷ್ಟ. ಸಾಪ್ತಾಹಿಕ ಪುರವಣಿಯ 11 ಮನೆ ಪದಬಂಧ ಆಟದ ಖುಷಿಗೆ ಈಗಲೂ ಕಾಯುತ್ತೇನೆ. ಅದನ್ನು ಬಿಡಿಸುವುದೂ ಕಷ್ಟಸಾಧ್ಯ. ಕನ್ನಡ ಪದ ಸಂಪತ್ತು, ಚಿಂತಿಸುವ ತಾಳ್ಮೆ ಇರಬೇಕು. ನನ್ನ ಆ್ಯಪ್‌ಗಳನ್ನು ರೂಪಿಸಲು ಅವೇ ಸ್ಫೂರ್ತಿ’ ಎಂದರು.

‘ಆ್ಯಪ್‌ಗಳಿಂದ ಹೆಚ್ಚೇನೂ ಆದಾಯ ಬರದು. ಲಕ್ಷಗಟ್ಟಲೆ ಜನರು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಿತ್ಯ ಬಳಸಬೇಕು. ಖುಷಿಗಾಗಿಯಷ್ಟೇ ಆ್ಯಪ್‌ ರೂಪಿಸಿದ್ದೇನೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶಿವಮೊಗ್ಗ, ಮಂಡ್ಯ, ಬೆಂಗಳೂರು, ಮೈಸೂರಿಗರೇ ಹೆಚ್ಚಿದ್ದಾರೆ. ಮುಂದೆ 11 ಮನೆ ಆಟದ ಆ್ಯಪ್ ರೂಪಿಸುತ್ತಿದ್ದೇನೆ’ ಎಂದು ತಿಳಿಸಿದರು.

‘ಕನ್ನಡ ಬಿಟ್ಟು ಬೇರೆ ಭಾಷೆಯ ಅಗತ್ಯ ಬೇಕೆಂದೇನೂ ಅನ್ನಿಸಿಲ್ಲ. ವ್ಯಾವಹಾರಿಕವಾಗಿಯೂ ಅಷ್ಟೇ. ಕನ್ನಡ ಗೊತ್ತಿದ್ದರೆ ಸಾಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆ್ಯಪ್‌ ಮಾಡುವ ಅಭಿಲಾಷೆಯಿದೆ. ಪೂರಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೇನೆ. ಸಮಾನ ಮನಸ್ಕರು ಕೈ ಜೋಡಿಸುವ ಭರವಸೆಯಿದೆ’ ಎಂದರು.

ಆ್ಯಪ್‌ ಡೌನ್ಲೋಡ್‌ ಮಾಡಲು: https://bit.ly/3HG4aHB

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT