ಶುಕ್ರವಾರ, ಅಕ್ಟೋಬರ್ 7, 2022
28 °C
ಸಂತ ಫಿಲೋಮಿನಾ ಕಾಲೇಜಿನಲ್ಲಿ ಶಾಂತಿ ಉತ್ಸವ

‘ಯಾವ ಧರ್ಮವೂ ದ್ವೇಷ ಸಾರದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಯಾವುದೇ ಧರ್ಮವೂ ಯುದ್ಧ ಮತ್ತು ದ್ವೇಷವನ್ನು ಸಾರುವುದಿಲ್ಲ–ಬೋಧಿಸುವುದಿಲ್ಲ’ ಎಂದು ಹುಡಾ ಪಬ್ಲಿಕ್ ಶಾಲೆಯ ಅಧ್ಯಕ್ಷ ಡಾ.ಅನೀಸ್ ಅಹಮದ್ ಹೇಳಿದರು.

ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಾನವಿಕ ವಿಭಾಗಗಳ ಸಹಯೋಗದಲ್ಲಿ ಕಾಲೇಜಿನ 70ನೇ ವರ್ಷಾಚರಣೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಅಂತರ್‌ಧರ್ಮೀಯ ಸಂವಾದ’ ಹಾಗೂ ‘ಶಾಂತಿ ಉತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮೊಳಗಿನ ಹಾಗೂ ನಮ್ಮ ಸುತ್ತಮುತ್ತಲಿನ ಶಾಂತಿ ಕಾಪಾಡಿಕೊಳ್ಳುವುದು ಮಹತ್ವದ್ದಾಗಿದೆ. ಮುಸ್ಲಿಮರು ವಾಸಿಸಲು ಸುರಕ್ಷಿತ ಸ್ಥಳಗಳಲ್ಲಿ ಭಾರತವು ಒಂದಾಗಿದೆ’ ಎಂದರು.

ಧರ್ಮಗುರು ರೆ.ಜಾನ್‌ ಪೀಟರ್‌ ಮಾತನಾಡಿ, ‘ದೇವರು ಎಂದಿಗೂ ಶಾಂತಿಯ ಲೇಖಕ. ಇದು ಮಾನವನ ಬುದ್ಧಿವಂತಿಕೆಯ ಉಪ ಉತ್ಪನ್ನವಲ್ಲ’ ಎಂದು ನುಡಿದರು.

ಮುಖ್ಯ ಅತಿಥಿಯಾಗಿದ್ದ ವಿದ್ವಾಂಸ ಡಾ.ಬಿ.ಎನ್.ಬಾಲಾಜಿ, ‘ಎಲ್ಲ ಧರ್ಮಗಳು ಸೇರಿಯೇ ನಮ್ಮನ್ನು ಒಂದು ದೇಶವನ್ನಾಗಿ ಮಾಡಿವೆ. ಭಾರತದಲ್ಲಿ ಅಧ್ಯಾತ್ಮ ಮತ್ತು ಧರ್ಮಗಳು ಸಮ್ಮಿಲನಗೊಳ್ಳುತ್ತವೆ. ನಾವೆಲ್ಲರೂ ಭಾರತೀಯರು ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಒಗ್ಗೂಡಿ ಸಾರಬೇಕಾಗಿದೆ’ ಎಂದರು.

‘ಪ್ರತಿಯೊಬ್ಬರಿಗೂ ಪ್ರತಿ ದಿನ ಶಾಂತಿಗಾಗಿ ಪ್ರಾರ್ಥಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ’ ಎಂದು ಆಶಿಸಿದರು.

ಕೆಎಸ್‌ಒಯು ಕನ್ನಡ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್, ‘ವೇದಗಳಲ್ಲಿನ ವಿವಿಧ ಶ್ಲೋಕಗಳು ಪ್ರಪಂಚದಾದ್ಯಂತ ಶಾಂತಿಯನ್ನು ಎತ್ತಿ ಹಿಡಿಯುವ ಪ್ರಾಮುಖ್ಯತೆಯನ್ನು ಸಾರಿ ಹೇಳಿವೆ’ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ರವಿ ಜೆ.ಡಿ. ಸಾಲ್ಡಾನಾ ಮಾತನಾಡಿದರು.

‘ಶಾಂತಿ ಉತ್ಸವ’ದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ‘ಶಾಂತಿಯನ್ನು ಸಾಧಿಸಬಹುದು’ ಎಂಬ ಆಶಯ ಕಾರ್ಯಕ್ರಮ ನಡೆಯಿತು.

ರೆ.ಫಾ.ಪ್ಯಾಟ್ರಿಕ್‌ ಕ್ಸೇವಿಯರ್, ರೆ.ಫಾ.ಬರ್ನಾಡ್ ಪ್ರಕಾಶ್, ಉಪ ಪ್ರಾಂಶುಪಾಲ ಸಂಜಯ್, ಮುಖ್ಯ ಸಂಯೋಜಕ ಜೆ.ಜಾರ್ಜ್‌, ಸಂಚಾಲಕಿ ಪಂಚಮಾ ಎಸ್.ಎನ್. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.