ಶನಿವಾರ, ಜೂನ್ 6, 2020
27 °C
ಪ್ರತಿಯೊಂದು ಪ್ರಶ್ನೆ, ಸಮಸ್ಯೆಯನ್ನು ನೋಟ್‌ ಮಾಡಿಕೊಂಡರು...

ಮೈಸೂರು | ದೂರುಗಳ ಮಹಾಪೂರ; ಪರಿಹಾರದ ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರ/ಪಟ್ಟಣಿಗರೂ ಸೇರಿದಂತೆ ಜಿಲ್ಲೆಯ ಗ್ರಾಮೀಣರಿಂದಲೂ ‘ಪ್ರಜಾವಾಣಿ’ ಕಚೇರಿಯಲ್ಲಿ ಶನಿವಾರ ನಡೆದ ಫೋನ್‌ ಇನ್‌ಗೆ ದೂರಿನ ಮಹಾಪೂರವೇ ಬಂತು.

ಪ್ರತಿಯೊಂದು ಪ್ರಶ್ನೆಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಪರಿಹಾರದ ಉತ್ತರ ನೀಡಿದರು. ನಗರ/ಪಟ್ಟಣಿಗರ ಸಮಸ್ಯೆಯನ್ನು ಆಲಿಸಿ, ಸಂಬಂಧಿಸಿದವರ ಗಮನಕ್ಕೆ ತಂದು ಪರಿಹರಿಸುವ ಭರವಸೆಯನ್ನು ಕೊಟ್ಟರು.

ಕೆಲವರ ಮೊಬೈಲ್‌ ನಂಬರ್ ಸಂಗ್ರಹಿಸಿದರು. ಪಿಡಿಒ ಮೂಲಕ ನಿಮಗೆ ಕರೆ ಮಾಡಿಸಿ, ಎರಡ್ಮೂರು ದಿನದಲ್ಲಿ ಸಮಸ್ಯೆ ಪರಿಹರಿಸಿಕೊಡುವೆ ಎಂಬ ವಿಶ್ವಾಸದ ಮಾತುಗಳನ್ನು ಹೇಳಿದರು.

ಒಂದು ತಾಸು ನಿರಂತರವಾಗಿ ಜನರ ಫೋನ್ ಕರೆ ಸ್ವೀಕರಿಸಿ, ಸಮಸ್ಯೆ ಆಲಿಸಿದ ಸಿಇಒ ಉತ್ತರಿಸಿದರೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಎಂ.ಕೃಷ್ಣರಾಜು ಪ್ರತಿಯೊಂದು ದೂರನ್ನು ಲಿಖಿತವಾಗಿ ದಾಖಲಿಸಿಕೊಂಡರು. ಅಗತ್ಯ ಸಂದರ್ಭದಲ್ಲಿ ಮಿಶ್ರಾ ಅವರಿಗೆ ಸಾಥ್ ನೀಡಿದರು.

ಕೆಲ ಆಯ್ದ ಪ್ರಶ್ನೆಗಳು: ಮೈಸೂರು ತಾಲ್ಲೂಕಿನ ನಾಗನಹಳ್ಳಿಯ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯ ಡಿ.ಲಿಂಗರಾಜು ಆಶ್ರಯ ನಿವಾಸ ಯೋಜನೆಯಡಿ ಮನೆಗೆ ಬೇಡಿಕೆ ಸಲ್ಲಿಸಿದರೆ, ಪಿರಿಯಾಪಟ್ಟಣ ತಾಲ್ಲೂಕಿನ ಸುಬ್ಬಯ್ಯನ ಕೊಪ್ಪಲು ಗ್ರಾಮದ ಚಂದ್ರು ಮೂರ್ನಾಲ್ಕು ತಿಂಗಳಿಂದ ಅಂಗವಿಕಲ ವೇತನ ಬಾರದಿರುವ ಬಗ್ಗೆ ಸಿಇಒ ಗಮನ ಸೆಳೆದರು.

ಊರ ಚರಂಡಿಯ ನೀರು ಗ್ರಾಮದ ಕೆರೆ ಸೇರುತ್ತಿದೆ. ನರೇಗಾದಡಿ ಜಾಬ್‌ ಕಾರ್ಡ್‌ ಕೊಡಿಸಿ ಎಂದು ಮೈಸೂರು ತಾಲ್ಲೂಕಿನ ಪುಟ್ಟೇಗೌಡನಹುಂಡಿಯ ಡಿ.ಮಹೇಶ್‌ ಕೇಳಿಕೊಂಡರೆ, ಮಲ್ಲುಪುರದ ಗುರುಸ್ವಾಮಿ, ಶಿವಶಂಕರ್ ಬಣ್ಣಾರಿ ಅಮ್ಮನ್ ಶುಗರ್ ಫ್ಯಾಕ್ಟರಿ ವಿರುದ್ಧ ದೂರಿದರು.

ಬೆಟ್ಟದತುಂಗ ಗ್ರಾಮದ ಅರುಣ್‌ರಾಜೇ ಅರಸ್‌ ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದರೆ, ಸರಗೂರಿನ ದರ್ಶನ್‌ ಕಪಿಲೆ ಸ್ವಚ್ಛಗೊಳಿಸುವ ಜತೆ ಊರ ರಸ್ತೆ ದುರಸ್ತಿಗೆ ಮನವಿ ಮಾಡಿಕೊಂಡರು. ನಗರ್ಲೆಯ ವಿಜಯಕುಮಾರ್ ಕವಲಂದೆ, ಕಲ್ಕುಂದ ಗ್ರಾಮದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಪ್ರಸ್ತಾಪಿಸಿ, ತನಿಖೆಗೆ ಆಗ್ರಹಿಸಿದರು.

ಹುಸೇನ್‌ಪುರದ ಶರತ್ 200 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡಿ ಎಂಬ ಬೇಡಿಕೆಯಿಟ್ಟರೆ, ಬೆಳವಾಡಿಯ ಅಮಿತ್, ಚೌತಿಯ ನಾಗಪ್ಪ, ಡಣಾಯಕನಪುರದ ರಾಜಶೇಖರ್, ಕುಪ್ಪೇಗಾಲದ ಪ್ರಶಾಂತ್ ನಮ್ಮೂರಿನ ಕುಡಿಯುವ ನೀರಿನ ಸಮಸ್ಯೆ, ಚರಂಡಿ, ಬೀದಿದೀಪದ ಸಮಸ್ಯೆ ಬಗೆಹರಿಸಿ ಎಂದರು. ಕೆ.ಆರ್.ನಗರದ ಪುರುಷೋತ್ತಮ್, ದೊಡ್ಡೇಕೊಪ್ಪಲಿನ ಪಿನಾಕಿನಿ, ಕಿರಂಗೂರಿನ ರಾಜೇಗೌಡ, ಹನಗೋಡಿನ ರವಿಕುಮಾರ್‌, ಕಿರಂಗೂರು ಚಂದ್ರು ರಸ್ತೆ ದುರಸ್ತಿ ಮಾಡಿಸಿ ಎಂದು ಮನವಿ ಮಾಡಿದರು.

ಸುತ್ತೂರಿನ ರವಿ ಮ್ಯಾನ್‌ಹೋಲ್ ಸಮಸ್ಯೆ ಹೇಳಿಕೊಂಡರೇ, ಕ್ಲೀನ್‌ ಮೈಸೂರು ಫೌಂಡೇಶನ್‌ನ ಕಿರಣ್‌, ಹಿನಕಲ್ ವ್ಯಾಪ್ತಿಯ ಕೆರೆ ಒತ್ತುವರಿ ಪ್ರಸ್ತಾಪಿಸಿದರು. ಬಿ.ದುಂಡನಹಳ್ಳಿಯ ದೇವೇಂದ್ರ ಜೆಸಿಬಿಯಿಂದ ಕೆರೆ ಹೂಳೆತ್ತಲಾಗುತ್ತಿದೆ ಎಂದು ದೂರಿದರೆ, ಕೆಗ್ಗೆರೆಯ ಚರಣ್‌ರಾಜ್ ನಮ್ಮಲ್ಲೂ ಸಿಮೆಂಟ್ ರಸ್ತೆ ನಿರ್ಮಿಸಿ ಎಂದು ಕೇಳಿಕೊಂಡರು.

ಕೆಗ್ಗೆರೆಯ ಕುಮಾರ್, ಚಟ್ನಳ್ಳಿಪಾಳ್ಯದ ಪ್ರಸಾದ್‌ ಕೈಪಂಪ್ ದುರಸ್ತಿಗೊಳಿಸಿ ಎಂದರೇ, ಗೋಪಾಲಪುರದ ವೆಂಕಟೇಶ್‌, ಸಾರನಹಳ್ಳಿಯ ವೆಂಕಟೇಶ್‌ ಜೋಶಿ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ ಮಾಡಿಸಿ ಎಂದು ಮನವಿ ಮಾಡಿದರು. ಬನ್ನೂರಿನ ನಾರಾಯಣ ಜೋಶಿ ಗ್ರಾಮ ಪಂಚಾಯಿತಿಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿದೆ ಎಂಬ ದೂರಿತ್ತರೇ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಿ ಎಂದು ಹುಸೇನ್‌ಪುರದ ಉಮೇಶ್‌, ತುರುಗನಹಳ್ಳಿಯ ಚಂದ್ರೇಗೌಡ ಮನವಿ ಮಾಡಿಕೊಂಡರು.

ಚಂದಗಾಲು ಸತೀಶ್‌ ಗ್ರಾ.ಪಂ. ಅಧಿಕಾರಿಗಳು ಆರ್‌ಟಿಐನಡಿ ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರೆ, ಕಿರಂಗೂರಿನ ಪುಟ್ಟಮಲ್ಲಯ್ಯ ಕನಿಷ್ಠ ಕೂಲಿಯನ್ನೇ ಕೊಡ್ತಿಲ್ಲ ಎಂದರು.  ಹಾರೋಹಳ್ಳಿಯ ಬೀರಪ್ಪ ಚರಂಡಿ ನೀರು ಇಂಗಿಸಲು ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡರು.

ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅವರ ಮನೆ ಮುಂಭಾಗ ಮಾತ್ರ ಚರಂಡಿ ಮಾಡಿಸಿಕೊಂಡಿದ್ದಾರೆ. ನೀವಾದರೂ ನಮ್ಮ ಮನೆ ಮುಂದೆ ಚರಂಡಿ ಮಾಡಿಸಿಕೊಡಿ ಎಂದು ಪುನೀತ್‌ಕುಮಾರ್‌ ಕೋರಿದರೆ, ಸರಗೂರಿನ ಚೆಲುವಮ್ಮ ಅಂಗವಿಕಲ ವೇತನ ಬರುತ್ತಿಲ್ಲ. ಶ್ರೀರಾಮ್ ಫೈನಾನ್ಸ್‌ನವರು ಇಎಂಐ ಕಟ್ಟುವಂತೆ ಹೇಳುತ್ತಿದ್ದಾರೆ ಎಂದು ಸಿಇಒ ಬಳಿ ದೂರು ಹೇಳಿಕೊಂಡರು.

ಮೈಸೂರಿನ ಬಲರಾಮ್, ಕಾಳಿಹುಂಡಿ ಶಿವಕುಮಾರ್ ಸೇರಿದಂತೆ ಇನ್ನೂ ಹಲವರು ತಮ್ಮೂರಿನ ಸಮಸ್ಯೆಗಳನ್ನು ಸಿಇಒ ಬಳಿ ಪ್ರಸ್ತಾಪಿಸಿ, ಪರಿಹಾರದ ಉತ್ತರ ಪಡೆದುಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು