ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಲಲಿತಮಹಲ್ ಖಾಸಗಿಗೆ ನೀಡಲು ಯತ್ನ

ಜೂನ್‌ 14ರಂದು ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚೆ ಸಾಧ್ಯತೆ
Last Updated 14 ಜೂನ್ 2022, 10:49 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಲಲಿತಮಹಲ್ ಹೋಟೆಲ್‌ ಅನ್ನು ಖಾಸಗಿ ಕಂಪನಿಗೆ ನೀಡುವುದಕ್ಕೆ ಪ್ರಯತ್ನ ನಡೆಯುತ್ತಿದೆ. ಈ ಪ್ರಸ್ತಾವದ ಕುರಿತು ಜೂನ್‌ 14ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಮುಂದಿನ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಈ ಹಿಂದೆ ಕೇಂದ್ರ ಸರ್ಕಾರ ನಷ್ಟದ ನೆಪ ಮುಂದು ಮಾಡಿ ಖಾಸಗಿಗೆ ನೀಡುವುದಕ್ಕೆ ಪ್ರಯತ್ನ ನಡೆಸಿತ್ತು. ಆದರೆ, ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಪ್ರಸ್ತಾವವನ್ನು ಕೈಬಿಟ್ಟಿತ್ತು. ಇದೀಗ ಪ್ರಖ್ಯಾತ ಖಾಸಗಿ ಕಂಪನಿಯೊಂದು ಮುಂದೆ ಬಂದಿದ್ದು, ವಿಶಾಲವಾದ ಈ ಹೋಟೆಲ್‌ ಅನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ಪ್ರಯತ್ನ ನಡೆಸಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

53 ಎಕರೆ ಜಾಗದಲ್ಲಿದೆ:

ಈ ಹೋಟೆಲ್‌ ಅನ್ನು ಕೇಂದ್ರ ಪ್ರವಾಸೋದ್ಯಮ ಇಲಾಖೆ ನಿರ್ವಹಿಸುತ್ತಿತ್ತು. ನಷ್ಟ ಉಂಟಾಗುತ್ತಿತ್ತೆಂಬ ಕಾರಣದಿಂದ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ 2017–18ರಲ್ಲಿ ನಿರ್ವಹಣೆಯ ಜವಾಬ್ದಾರಿಯನ್ನು ವರ್ಗಾಯಿಸಲಾಗಿತ್ತು. ಇಲಾಖೆಯ ಭಾಗವೇ ಆಗಿರುವ ಜಂಗಲ್‌ ಲಾಡ್ಜಸ್ ಅಂಡ್ ರೆಸಾರ್ಟ್ಸ್ (ಜೆಎಲ್‌ಆರ್‌) ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ವಿಶ್ವವಿಖ್ಯಾತ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬರೋಬ್ಬರಿ 53 ಎಕರೆಯಷ್ಟು ವಿಶಾಲವಾದ ಜಾಗವನ್ನು ಹೊಂದಿರುವ ಹಾಗೂ ಬರೋಬ್ಬರಿ 3 ಎಕರೆ ಜಾಗದಲ್ಲಿ ಕಟ್ಟಡವನ್ನು ಹೊಂದಿರುವ ಹೋಟೆಲ್‌ ಇದು. ಪ್ರಸ್ತುತ ವಾರ್ಷಿಕ ಸರಾಸರಿ ₹ 1.50 ಕೋಟಿಯಿಂದ ₹ 2 ಕೋಟಿ ಆದಾಯ ಕಾಣುತ್ತಿದೆ. ಪ್ರವಾಸೋದ್ಯಮ ಇಲಾಖೆಯು ಪ್ರಸ್ತುತ ಸ್ಥಿತಿಗತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಉಪ ಸಮಿತಿ ಸಭೆಯಲ್ಲಿ ವಿಸ್ತೃತ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಹೋಟೆಲ್‌ನಲ್ಲಿ 500ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ.

ಭಾರ ಇಳಿಸಿಕೊಳ್ಳಲು:

‘ಇದು ಮೈಸೂರಿನ 2ನೇ ಅತಿ ದೊಡ್ಡ ಅರಮನೆ ಎಂಬ ಖ್ಯಾತಿ ಗಳಿಸಿದೆ. ಲಂಡನ್‌ನ ಸಂತ ಪಾಲರ ಕೆಥಡ್ರಲ್‌ ವಾಸ್ತುಶಿಲ್ಪದ ಸ್ಫೂರ್ತಿ ಪಡೆದು ಮೈಸೂರಿನ ಪರಂಪರೆಯನ್ನು ಬಿಂಬಿಸುವಂತೆ ಈ ಅರಮನೆ ನಿರ್ಮಾಣಗೊಂಡು 2021ರ ನ.18ಕ್ಕೆ ನೂರು ವರ್ಷಗಳು ತುಂಬಿವೆ. ಪಾರಂಪರಿಕ ಕಟ್ಟಡ ಇದಾಗಿದ್ದು, ಅಲ್ಲಲ್ಲಿ ನವೀಕರಣ ಕಾರ್ಯ ಆಗಬೇಕಿದೆ. ಸಂರಕ್ಷಣೆಯ ಸವಾಲು ಕೂಡ ಇದೆ. ಅನೇಕ ಸಿವಿಲ್ ಕೆಲಸಗಳನ್ನು ಮಾಡಬೇಕಿದ್ದು, ಕೋಟ್ಯಂತರ ರೂಪಾಯಿ ಬೇಕಾಗುತ್ತದೆ. ಹೀಗಾಗಿ, ಖಾಸಗಿಯವರಿಗೆ ನೀಡಿದರೆ ಸ್ಟಾರ್‌ ಹೋಟೆಲ್‌ನ ದರ್ಜೆಗೆ ಏರಿಸಬಹುದು. ಈ ಮೂಲಕ ನಿರ್ವಹಣೆಯ ಭಾರವನ್ನು ಇಳಿಸಿಕೊಳ್ಳಬಹುದು ಎಂಬುದು ಸರ್ಕಾರದ ಉದ್ದೇಶವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಹೋಟೆಲ್‌ ಅನ್ನು ಖಾಸಗಿ ಅವರಿಗೆ ಕೊಟ್ಟರೆ ಗುತ್ತಿಗೆ ಆಧಾರದ ಮೇಲೆ ಕೊಡುವ ಸಾಧ್ಯತೆ ಇರುತ್ತದೆ. ಖಾಸಗಿ ಕಂಪನಿಗಳು ಹೋಟೆಲ್ ನಿರ್ವಹಣೆಗಿಂತಲೂ 53 ಎಕರೆ ಜಾಗವನ್ನು ಮುಖ್ಯವಾಗಿ ನೋಡುತ್ತವೆ. ನಷ್ಟವನ್ನೆ ತೋರಿಸುತ್ತವೆಯೇ ಹೊರತು ಲಾಭವನ್ನಲ್ಲ. ಅಲ್ಲದೇ, ಸರ್ಕಾರದ ಆಸ್ತಿಯನ್ನು ವಾಪಸ್ ಪಡೆದುಕೊಳ್ಳುವ ಸಂದರ್ಭದಲ್ಲಿ ಕಾನೂನು ತೊಡಕುಗಳು ಉಂಟಾಗಲೂಬಹುದು. ಸದ್ಯ ಲಾಭದಲ್ಲಿರುವ ಹೋಟೆಲ್‌ ಅನ್ನು ಸರ್ಕಾರವೇ ನಿರ್ವಹಿಸುವುದು ಸಮಂಜಸವಾಗಿದೆ. ಕೊರೊನಾ ನಂತರ ಉತ್ತಮವಾಗಿ ನಡೆಯುತ್ತಿದೆ. ಆದರೆ, ಎಲ್ಲವೂ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ’ ಎನ್ನುತ್ತಾರೆ ಅವರು.

ಸಂದರ್ಭವಿಲ್ಲ

ಪ್ರಸ್ತಾವವು ಸಂಪುಟ ಉಪಸಮಿತಿ ಎದುರು ಬರುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಆಗಬೇಕಾಗುತ್ತದೆ. ಲಾಭದಲ್ಲಿರುವುದರಿಂದ ಖಾಸಗಿಯವರಿಗೆ ಕೊಡಬೇಕಾದ ಸಂದರ್ಭವಿಲ್ಲ.

–ಎಂ. ಅಪ್ಪಣ್ಣ, ಅಧ್ಯಕ್ಷ, ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT