ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಟ್ಟ ಗ್ರಂಥಾಲಯ ಮರು ನಿರ್ಮಾಣಕ್ಕೆ ಗ್ರಂಥಾಲಯ ಸಮಿತಿ ನೇತೃತ್ವ

ಆನ್‌ಲೈನ್‌ ಕ್ರೌಡ್‌ಫಂಡಿಂಗ್‌ನಲ್ಲಿ ₹ 20 ಲಕ್ಷ ಸಂಗ್ರಹ
Last Updated 12 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಶಾಂತಿನಗರದಲ್ಲಿ ಈಚೆಗೆ ಸುಟ್ಟು ಹೋದ, ಸೈಯದ್ ಇಸಾಕ್ ಅವರ ಗ್ರಂಥಾಲಯವನ್ನು ಮರು ನಿರ್ಮಿಸಲು ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಾಗೂ ಗ್ರಂಥಾಲಯ ಇಲಾಖೆ ನಿರ್ಧರಿಸಿವೆ. ಈ ಕಾರ್ಯಕ್ಕೆ, ಮೇಯರ್ ಅಧ್ಯಕ್ಷತೆಯ ಗ್ರಂಥಾಲಯ ಸಮಿತಿ ನೇತೃತ್ವ ವಹಿಸಲಿದೆ.

ದೇಣಿಗೆ ನೀಡುವವರು ಗ್ರಂಥಾಲಯ ಸಮಿತಿಗೇ ನೀಡಬೇಕು ಎಂದು ಮನವಿ ಮಾಡಲಾಗಿದ್ದು, ಸದ್ಯದಲ್ಲೇ ಪ್ರತ್ಯೇಕ ಖಾತೆ ಸಂಖ್ಯೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್, ಮುಡಾ ಆಯುಕ್ತ ಡಿ.ಬಿ.ನಟೇಶ್, ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಬಿ.ಮಂಜುನಾಥ್ ಅವರು ಸೋಮವಾರ ಸ್ಥಳದ ಸಮೀಕ್ಷೆ ನಡೆಸಿ, ಈ ನಿರ್ಧಾರಕ್ಕೆ ಬಂದರು.

‘ಗ್ರಂಥಾಲಯ ಸಮಿತಿಯಲ್ಲಿ ಸೈಯದ್ ಇಸಾಕ್ ಅವರಿಗೆ ಗೌರವ ಸದಸ್ಯತ್ವ ನೀಡಲಾಗುವುದು. ಈಗ ಗ್ರಂಥಾಲಯ ಮರು ನಿರ್ಮಾಣಕ್ಕಾಗಿ ಬಂದಿರುವ ಎಲ್ಲ ದೇಣಿಗೆಯನ್ನೂ ಈ ಸಮಿತಿಗೆ ಬರುವಂತೆ ಮಾಡಲಾಗುವುದು. ಆದಷ್ಟು, ಇದೇ ಜಾಗದಲ್ಲಿ ಸುಸಜ್ಜಿತವಾದ ಮಾದರಿ ಗ್ರಂಥಾಲಯ ನಿರ್ಮಿಸಲಾಗುವುದು’ ಎಂದು ಶಿಲ್ಪಾ ನಾಗ್ ತಿಳಿಸಿದರು.

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಈ ಜಾಗವನ್ನು, ನಾಗರಿಕ ಸೌಕರ್ಯ ನಿವೇಶನ (ಸಿ.ಎ ನಿವೇಶನ)ದ ಸ್ವರೂಪದಲ್ಲಿ ಬೋರಾ ಸಂಸ್ಥೆಗೆ ತುಂಬಾ ಹಿಂದೆಯೇ ನೀಡಲಾಗಿತ್ತು. ಕಡತವನ್ನು ಪರಿಶೀಲಿಸಿ, ಷರತ್ತುಗಳು ಉಲ್ಲಂಘನೆಯಾಗಿದ್ದರೆ ಬೋರಾ ಸಂಸ್ಥೆಯಿಂದ ಸಿ.ಎ ನಿವೇಶನವನ್ನು ವಾಪಸ್ ತೆಗೆದುಕೊಳ್ಳಲಾಗುವುದು. ಷರತ್ತು ಉಲ್ಲಂಘನೆ ಆಗಿರದೇ ಇದ್ದಲ್ಲಿ, ಅವರಿಗೆ ಬೇರೊಂದು ಕಡೆ ನಿವೇಶನ ನೀಡಿ, ಈ ನಿವೇಶನದಲ್ಲಿಯೇ ಗ್ರಂಥಾಲಯ ಸ್ಥಾಪಿಸಲಾಗುವುದು’ ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್ ತಿಳಿಸಿದರು.

ಈ ವೇಳೆ ಸೈಯದ್ ಇಸಾಕ್, ‘ಇದೇ ಜಾಗದಲ್ಲಿ ಕನ್ನಡ ಗ್ರಂಥಾಲಯ ಆರಂಭವಾಗಬೇಕು’ ಎಂದು ಒತ್ತಾಯಿಸಿದರು. ಸ್ಥಳೀಯರು, ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ತಮಗೂ ಅವಕಾಶ ನೀಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಗ್ರಂಥಾಲಯದ ಜತೆಗೆ ಕಂಪ್ಯೂಟರ್ ಕಲಿಕಾ ಕೇಂದ್ರ, ಡಿಜಿಟಲ್ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯಾಸಕ್ಕೆ ಪ್ರತ್ಯೇಕ ವಿಭಾಗಗಳನ್ನೂ ತೆರೆಯಬೇಕು ಎಂದು ಆಗ್ರಹಿಸಿದರು.‌

ಅವರ ಮನವಿಯನ್ನು ಪರಿಗಣಿಸುವುದಾಗಿ ಹೇಳಿದ ಅಧಿಕಾರಿಗಳು, ಸೈಯದ್ ಇಸಾಕ್ ಅವರಿಗೆ ಗೌರವಧನ ನೀಡುವ ಕುರಿತೂ ಚಿಂತಿಸಲಾಗುವುದು ಎಂದು ತಿಳಿಸಿದರು.

₹ 20 ಲಕ್ಷ ಸಂಗ್ರಹ

ಗ್ರಂಥಾಲಯದ ಮರುನಿರ್ಮಾಣಕ್ಕಾಗಿ, ಮೈಸೂರಿನ ಇನ್ಫೊಸಿಸ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಫತೇನ್‌ ಮಿಸ್ಬಾ, ಆನ್‌ಲೈನ್‌ನಲ್ಲಿ ಆರಂಭಿಸಿರುವ ಕ್ರೌಡ್‌ಫಂಡಿಂಗ್‌ನಲ್ಲಿ ₹ 20 ಲಕ್ಷ ಹಣ ಸಂಗ್ರಹವಾಗಿದೆ. 1,260 ಮಂದಿ ದೇಣಿಗೆ ನೀಡಿದ್ದಾರೆ.

₹ 50 ಸಾವಿರ ದೇಣಿಗೆ

‘ಗ್ರಂಥಾಲಯದ ಜಾಗಕ್ಕೆ ಸಂಬಂಧಿಸಿದಂತೆ ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ಜೊತೆ ಮಾತನಾಡುವೆ. ಸುಟ್ಟ ಜಾಗದಲ್ಲೇ, ಸೈಯದ್‌ ಹೆಸರಿನಲ್ಲೇ ನೂತನ ಗ್ರಂಥಾಲಯ ನಿರ್ಮಾಣವಾಗಬೇಕು. ನನ್ನ ಆತ್ಮೀಯರೊಬ್ಬರು ನೀಡಿದ ₹ 50 ಸಾವಿರವನ್ನು ಇಸಾಕ್‌ ಅವರಿಗೆ ಸೋಮವಾರ ಕೊಟ್ಟಿರುವೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಪ್ರಕಾಶಕರ ಸಂಘದ ನೆರವು

ಬೆಂಗಳೂರು: ಮೈಸೂರಿನ ಸೈಯದ್ ಐಸಾಕ್ ಅವರಿಗೆ ಗ್ರಂಥಾಲಯವನ್ನು ಪುನರ್ ಸ್ಥಾಪಿಸಲು 5 ಸಾವಿರ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕರ್ನಾಟಕ ಪ್ರಕಾಶಕರ ಸಂಘ ಘೋಷಿಸಿದೆ.

ಗ್ರಂಥಾಲಯಕ್ಕೆ ಬೆಂಕಿ ಇಟ್ಟ ದುಷ್ಕೃತ್ಯ ಖಂಡನೀಯ. ಅದೇ ಸ್ಥಳದಲ್ಲಿ ಗ್ರಂಥಾಲಯ ಪುನರ್ ಸ್ಥಾಪನೆಯಾಗಬೇಕು. ಸಂಘದ ವತಿಯಿಂದ 5 ಸಾವಿರ ಪುಸ್ತಕಗಳನ್ನು ನೀಡಲು ತೀರ್ಮಾನಿಸಲಾಗಿದೆ. ನವಕರ್ನಾಟಕ ಪಬ್ಲಿಕೇಷನ್ಸ್, ಅಂಕಿತ ಪುಸ್ತಕ, ಛಂದ ಪುಸ್ತಕ, ಸೃಷ್ಠಿ ಪಬ್ಲಿಕೇಷನ್ಸ್, ಚಾರುಮತಿ ಪ್ರಕಾಶನ, ಅಭಿನವ, ಸಿರಿವರ ಪ್ರಕಾಶನ, ವಿಕಾಸ ಪ್ರಕಾಶನ, ಭೂಮಿ ಬುಕ್ಸ್ ಸೇರಿದಂತೆ ವಿವಿಧ ಪ್ರಕಾಶನ ಸಂಸ್ಥೆಗಳು ಪುಸ್ತಕಗಳನ್ನು ಕೊಡಲು ಮುಂದೆ ಬಂದಿವೆ. ಇದೇ 23ರಂದು ವಿಶ್ವ ಪುಸ್ತಕ ದಿನದ ಪ್ರಯುಕ್ತ ಸಾಂಕೇತಿಕವಾಗಿ ಪುಸ್ತಕಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ತಿಳಿಸಿದ್ದಾರೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT