ಗುರುವಾರ , ಡಿಸೆಂಬರ್ 3, 2020
18 °C
ಉದ್ಯೋಗ ಸ್ವರೂಪಕ್ಕೆ ಯುವಕರು ಹೊಂದಿಕೊಳ್ಳಬೇಕು: ಮೋದಿ

ಅಭಿವೃದ್ಧಿಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ: ನರೇಂದ್ರ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಈ ದಶಕವೂ ಭಾರತಕ್ಕೆ ಸೇರಿದ್ದು. ರಾಷ್ಟ್ರದ ಅಭಿವೃದ್ಧಿಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ಅಗತ್ಯ ಬದಲಾವಣೆ ತರಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿದ್ದ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ವರ್ಚುಯಲ್‌ ವೇದಿಕೆಯಲ್ಲಿ ನವದೆಹಲಿಯಿಂದ ಮಾತನಾಡಿದರು.

‘ಕಳೆದ ಆರೇಳು ತಿಂಗಳಲ್ಲಿ ಸುಧಾರಣೆ ಪರ್ವ ಹಾಗೂ ಆಡಳಿತದ ವೇಗವನ್ನು ತಾವು ಗಮನಿಸಿರಬಹುದು. ಇದು ಕೃಷಿ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರ, ವಿಮಾನಯಾನ, ಕಾರ್ಮಿಕ ವಲಯದಲ್ಲಿ ಇರಬಹುದು. ಈ ಎಲ್ಲಾ ಬೆಳವಣಿಗೆಯು ಭಾರತದ ಕೋಟ್ಯಂತರ ಯುವಕರ ಏಳಿಗೆ ಹಾಗೂ ಈ ದಶಕವು ಭಾರತದ್ದಾಗಿರಬೇಕು ಎಂಬ ಸದುದ್ದೇಶ ಒಳಗೊಂಡಿದೆ. ಯುವಕರಿಗಂತೂ ಈ ದಶಮಾನ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಿದೆ. ತಳಪಾಯ ಗಟ್ಟಿ ಇದ್ದಾಗ ಮಾತ್ರ ಇದೆಲ್ಲಾ ಸಾಧ್ಯ’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ–2020 ಪ್ರಸ್ತಾಪಿಸುತ್ತಾ, ‘ದೇಶವನ್ನು ಉನ್ನತ ಶಿಕ್ಷಣದ ಪ್ರಮುಖ ತಾಣವನ್ನಾಗಿಸಲು ಹಾಗೂ ಯುವಕರನ್ನು ಸ್ಮರ್ಧಾತ್ಮಕರನ್ನಾಗಿ ಮಾಡಲು ಎಲ್ಲಾ ಪ್ರಯತ್ನಗಳು ಸಾಗಿವೆ. ಅದಕ್ಕಾಗಿ ಕೌಶಲ, ಪುನರ್‌ಕೌಶಲ, ಸುಧಾರಿತ ಕೌಶಲದ ಅಗತ್ಯವಿದೆ. ಬದಲಾಗುತ್ತಿರುವ ಉದ್ಯೋಗ ಸ್ವರೂಪಕ್ಕೆ ಯುವಕರು ಹೊಂದಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಗೆ ಮಹತ್ವದ ಹೆಜ್ಜೆ ಇಡಲಾಗಿದೆ. ನರ್ಸರಿಯಿಂದ ಹಿಡಿದು ಪಿಎಚ್‌.ಡಿವರೆಗೆ ಮೂಲಭೂತ ಬದಲಾವಣೆ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯು ಮಹತ್ವದ ಮೆಟ್ಟಿಲಾಗಿದೆ. ಕೇವಲ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವುದಲ್ಲ; ಆಡಳಿತ ಸುಧಾರಣೆ, ಲಿಂಗ ಸಮಾನತೆ, ಸಾಮಾಜಿಕ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುತ್ತಿದೆ’ ಎಂದು ಹೇಳಿದರು.

ನೂತನ ಶಿಕ್ಷಣ ನೀತಿ ಅನ್ವಯ ಮೈಸೂರು ವಿಶ್ವವಿದ್ಯಾಲಯ ಆರಂಭಿಸುತ್ತಿರುವ ಬಹುಶಿಸ್ತೀಯ ಅಧ್ಯಯನ ವಿಚಾರ ಕುರಿತು ಶ್ಲಾಘಿಸಿದ ಪ್ರಧಾನಿ, ‘ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಜಾಗತಿಕ ತಂತ್ರಜ್ಞಾನವನ್ನು ಸ್ಥಳೀಯ ಸಂಸ್ಕೃತಿಗೆ ಅನ್ವಯಿಸಿಕೊಂಡು ಕಲಿಯಲು ಅವಕಾಶಗಳಿವೆ. ಸ್ಥಳೀಯ ಸಂಸ್ಕೃತಿ, ಕಲೆಯನ್ನು ಪ್ರೋತ್ಸಾಹಿಸಿ, ಸಾಮಾಜಿಕ ವಿಚಾರಗಳ ಬಗೆಗಿನ ಸಂಶೋಧನೆಯ ಸಂಪ್ರದಾಯ ಉತ್ತೇಜಿಸಬೇಕು’ ಎಂದರು.

ಸುಮಾರು 25 ನಿಮಿಷಗಳ ತಮ್ಮ ಭಾಷಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌ ಎಂ.ವಿಶ್ವೇಶ್ವರಯ್ಯ, ಕುವೆಂಪು ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರನ್ನು ಸ್ಮರಿಸಿದರು. ಪದವಿ ಪ್ರಮಾಣ ಪತ್ರ ಪಡೆದವರಿಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದರು.‌

ಗೌರವ ಡಾಕ್ಟರೇಟ್‌ ಗೌರವಕ್ಕೆ ಪಾತ್ರರಾಗಿರುವ ಇನ್ಫೊಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಗೈರಾಗಿದ್ದರು. ಅತಿಹೆಚ್ಚಿನ ಪದಕ ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡ 30 ಮಂದಿಗೆ ಈ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.

ರಾಜ್ಯಪಾಲ ವಜುಭಾಯಿ ವಾಲಾ (ವರ್ಚುವಲ್‌ ವೇದಿಕೆ), ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಕುಲಪತಿ ಪ್ರೊ.ಹೇಮಂತ್‌ ಕುಮಾರ್‌, ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು