ಮಂಗಳವಾರ, ಸೆಪ್ಟೆಂಬರ್ 21, 2021
21 °C
ವಿವೇಕ ಸ್ಮಾರಕಕ್ಕೆ ವಿರೋಧ ಸಲ್ಲ; ‘ಜಯಸಿರಿ’ ಅಭಿನಂದನಾ ಗ್ರಂಥ ಬಿಡುಗಡೆ

ವಿ.ವಿ ಗಳು ಮಾಡದ ಕೆಲಸವನ್ನು ರಾಮಕೃಷ್ಣ ಆಶ್ರಮ ಮಾಡಿದೆ: ಡಾ.ಎಸ್‌.ಎಲ್‌.ಭೈರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕನ್ನಡದ ಸೇವೆಗೆ ಸಂಬಂಧಿಸಿದಂತೆ ಎಷ್ಟೋ ವಿಶ್ವವಿದ್ಯಾಲಯಗಳು ಮಾಡದಂತಹ ಕಾರ್ಯವನ್ನು ರಾಮಕೃಷ್ಣ ಆಶ್ರಮ ಮಾಡಿದೆ. ದೊಡ್ಡ ಪ್ರಮಾಣದ ಯೋಜನೆಯನ್ನು ಕೈಗೊಂಡಿರುವ ಆಶ್ರಮದ ಕಾರ್ಯಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಇದು ದೇಶವನ್ನು ಹಾಳು ಮಾಡುವ ಕೃತ್ಯ’ ಎಂದು ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಕಿಡಿಕಾರಿದರು.

ಡಾ.ಡಿ.ಎಸ್‌.ಜಯಪ್ಪಗೌಡ ಅವರ ಹಿತೈಷಿ ಬಳಗದಿಂದ ನಗರದ ಕೃಷ್ಣಮೂರ್ತಿಪುರಂನ ರಾಮಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಡಾ.ಡಿ.ಎಸ್‌.ಜಯಪ್ಪಗೌಡರ ಅಭಿನಂದನಾ ಗ್ರಂಥ ‘ಜಯಸಿರಿ’ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ರಾಮಕೃಷ್ಣ ಆಶ್ರಮವು ಆಧ್ಯಾತ್ಮಿಕತೆ, ನೀತಿಶಾಸ್ತ್ರಕ್ಕೆ ಸಂಬಂಧಿಸಿದಂತೆ 450ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡದಲ್ಲಿ ಹೊರತಂದಿದೆ. ಕನ್ನಡ ಗದ್ಯವನ್ನು ಬೆಳೆಸುವ ಕೆಲಸ ಮಾಡಿದೆ. ಮಕ್ಕಳಿಗೆ ಹೇಗೆ ಮಾರ್ಗದರ್ಶನ ನೀಡಬೇಕು ಎಂಬ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡುವ ಉದ್ದೇಶವನ್ನೂ ಆಶ್ರಮ ಹೊಂದಿದೆ. ಇದಕ್ಕಾಗಿ ವಿಶಾಲವಾದ ಜಾಗವೂ ಬೇಕು. ಈ ಯೋಜನೆ ಕಾರ್ಯಗತಗೊಳ್ಳದಂತೆ ಕೆಲವರು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ಎನ್‌ಟಿಎಂ ಶಾಲೆ ಕನ್ನಡ ಮಾಧ್ಯಮದ ಶಾಲೆಯಾಗಿದ್ದು, ಅದನ್ನು ಮುಚ್ಚಬಾರದು ಎಂದು ಕೆಲವರು ಬೇಡಿಕೆ ಇಟ್ಟಿದ್ದರು. ಪ್ರಕರಣ ಕೋರ್ಟ್‌ಗೆ ಹೋಯ್ತು. ಈ ಜಾಗವನ್ನು ವಿವೇಕ ಸ್ಮಾರಕ ನಿರ್ಮಿಸಲು ನೀಡಬೇಕೆಂದು ಕೋರ್ಟ್‌ ಆದೇಶ ನೀಡಿತ್ತು. ಈಗ ಹೊಸ ಬೇಡಿಕೆಯನ್ನು ಮುಂದಿಟ್ಟಿರುವ ಕೆಲವರು, ಎನ್‌ಟಿಎಂ ಶಾಲೆ ಪಾರಂಪರಿಕ ಕಟ್ಟಡವಾಗಿದ್ದು, ಅದನ್ನು ನೆಲಸಮಗೊಳಿಸಬಾರದು ಎನ್ನುತ್ತಿದ್ದಾರೆ. ಇದು ಅಷ್ಟಕ್ಕೇ ನಿಂತಿಲ್ಲ. ಅಲ್ಲಿನ ವರ್ತಕರನ್ನೂ ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದರು.

‘ಸಿ.ಪಿ.ಕೃಷ್ಣಕುಮಾರ್‌ ಹಾಗೂ ದೇ.ಜವರೇಗೌಡ ಅವರು ಕನ್ನಡ ದ್ರೋಹಿಗಳು ಎಂದು ಕೆಲ ಮಹಾತ್ಮರು ಹೇಳಿಕೆ ನೀಡಿದ್ದಾರೆ. ಇದರಲ್ಲಿ ನನ್ನ ಹೆಸರನ್ನೂ ಸೇರಿಸಿದ್ದಾರೆ. ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಈ ಶಾಲೆಯಲ್ಲಿ 5–6 ಮಕ್ಕಳಿದ್ದು, ಅವರನ್ನು 200 ಮೀಟರ್‌ ದೂರದಲ್ಲಿರುವ ಶಾಲೆಗೆ ವರ್ಗಾಯಿಸುವ ಪ್ರಯತ್ನಕ್ಕೂ ಅಡ್ಡಿಪಡಿಸಿದ್ದರು. ಮಕ್ಕಳ ಪೋಷಕರನ್ನು ಛೂ ಬಿಟ್ಟರು. ಈ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡುವುದಾಗಿ ಸರ್ಕಾರ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. ಹೀಗಾಗಿ, ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ನೀಡಲು ಕೋರ್ಟ್‌ ಆದೇಶ ನೀಡಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಒಳವಿಷಯಗಳು ಏನಿದೆ ಎಂಬುದು ಗೊತ್ತಿಲ್ಲ’ ಎಂದರು.

‘ಡಾ.ಡಿ.ಎಸ್‌.ಜಯಪ್ಪಗೌಡರು ವಿಶ್ವೇಶ್ವರಯ್ಯ ಅವರ ಬಗ್ಗೆ ಬರೆದ ಕೃತಿಯನ್ನು ನಾನು ಓದಿದ್ದೇನೆ. ವಿಶ್ವೇಶ್ವರಯ್ಯನವರ ಆಡಳಿತದ ಕುರಿತ ಸಮಗ್ರ ಮಾಹಿತಿ ಈ ಕೃತಿಯಲ್ಲಿ ಸಿಗುತ್ತದೆ. ಇದು ಇಂಗ್ಲಿಷ್‌ಗೆ ಅನುವಾದಗೊಳ್ಳಲು ಸೂಕ್ತವಾದ ಕೃತಿ’ ಎಂದು ಹೇಳಿದರು.

‘ಜಯಸಿರಿ’ ಕೃತಿ ಕುರಿತು ಎಚ್‌.ಎಂ.ನಾಗರಾಜರಾವ್‌ ಮಾತನಾಡಿದರು. ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ವೆಂಗಿಪುರ ಮಠದ ಇಳೈ ಆಳ್ವಾರ್‌ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಪ್ರೊ.ಪ್ರಧಾನ ಗುರುದತ್ತ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಉಪಸ್ಥಿತರಿದ್ದರು.

‘ದುಡ್ಡು ಕೊಡುತ್ತಿರುವವರು ಯಾರು?’

‘ಎನ್‌ಟಿಎಂ ಶಾಲೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ಹೋಗಲು ಸಿದ್ಧ ಎಂದು ಕೆಲವರು ಹೇಳುತ್ತಿದ್ದಾರೆ. ಇಷ್ಟೆಲ್ಲಾ ಓಡಾಡಬೇಕಾದರೆ ದುಡ್ಡು ಎಲ್ಲಿಂದ ಬರುತ್ತದೆ? ಯಾವುದೋ ಐಡಿಯಾಲಜಿ ಹೊಂದಿರುವವರು ದುಡ್ಡು ಹಾಕುತ್ತಿರಬಹುದು’ ಎಂದು ಎಸ್‌.ಎಲ್‌.ಭೈರಪ್ಪ ಹೇಳಿದರು.

‘ನನ್ನ ಮಗ ಸರಿಹೋಗಿದ್ದು ಆಶ್ರಮದಿಂದ’

‘ನನ್ನ ಮಗ ಹೇಳಿದ ಮಾತು ಕೇಳುತ್ತಿರಲಿಲ್ಲ. ಅಡ್ಡದಾರಿ ತುಳಿಯುವನೋ ಎಂಬ ಆತಂಕ ಎದುರಾಗಿತ್ತು. ಈ ಸಂದರ್ಭದಲ್ಲಿ ಅವನನ್ನು ರಾಮಕೃಷ್ಣ ಆಶ್ರಮಕ್ಕೆ ಸೇರಿಸಿದೆ. ಅಲ್ಲಿಂದ ಹೊರಗೆ ಬಂದಾಗ ಮಗನ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಓದಿನಲ್ಲೂ ಮುಂದಿದ್ದ. ಈಗ ಲಂಡನ್‌ನಲ್ಲಿ ನೆಲೆಸಿದ್ದು, ಒಳ್ಳೆಯ ಸಂಪಾದನೆ ಮಾಡುತ್ತಿದ್ದಾನೆ. ಇಲ್ಲಿಗೆ ಬಂದಾಗಲೆಲ್ಲಾ ಆಶ್ರಮಕ್ಕೆ ತೆರಳಿ ದಕ್ಷಿಣೆ ನೀಡಿ ಬರುತ್ತಾನೆ. ಹೀಗೆ, ಎಷ್ಟೋ ಮಕ್ಕಳ ಬದಲಾವಣೆಗೆ ಆಶ್ರಮ ಕಾರಣವಾಗಿದೆ’ ಎಂದು ಎಸ್‌.ಎಲ್‌.ಭೈರಪ್ಪ ಹೇಳಿದರು.

‘ಕುವೆಂಪು ಅವರಿಗೆ ನೈತಿಕ ದೃಷ್ಟಿ, ಆಧ್ಯಾತ್ಮಿಕ ದೃಷ್ಟಿ ಹಾಗೂ ಕಾವ್ಯ ಬರೆಯಲು ಸ್ಫೂರ್ತಿ ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರು. ಇಂತಹ ಆಶ್ರಮವನ್ನು ಕನ್ನಡ ದ್ರೋಹಿ ಎನ್ನುವುದು ಸರಿಯೇ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು