ಶನಿವಾರ, ಜೂನ್ 6, 2020
27 °C
ಪ್ರಯಾಣಿಕರಲ್ಲಿ ಖುಷಿ

ಮೈಸೂರು | ರೈಲು ಸಂಚಾರ ಆರಂಭ, ಮುಂಜಾನೆ–ಮುಸ್ಸಂಜೆಯೂ ಓಡಿಸಲಿ...

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬೆಂಗಳೂರು–ಮೈಸೂರು ನಡುವೆ ಭಾನುವಾರ ಹೊರತುಪಡಿಸಿ ನಿತ್ಯವೂ ರೈಲು ಸಂಚಾರ ಶುಕ್ರವಾರದಿಂದ ಆರಂಭಗೊಂಡಿದ್ದು, ರೈಲ್ವೆ ಪ್ರಯಾಣಿಕರ ವಲಯದಲ್ಲಿ ಸಂತಸ ವ್ಯಕ್ತವಾಗಿದೆ. ಮೊದಲ ದಿನವೇ ಪ್ರಯಾಣಿಸಿದವರು ತಮ್ಮ ಖುಷಿಯನ್ನು ಹಂಚಿಕೊಂಡರು.

ಬರೋಬ್ಬರಿ ಎರಡು ತಿಂಗಳ ಬಳಿಕ ರೈಲ್ವೆ ಸಂಚಾರ ಆರಂಭಗೊಂಡ ಬೆನ್ನಿಗೆ, ಇನ್ನಿತರ ಚಟುವಟಿಕೆಗಳು ಸಹ ಮೈಸೂರು ರೈಲ್ವೆ ನಿಲ್ದಾಣದ ಸುತ್ತಲೂ ಗರಿಗೆದರಿದವು.

ಮೈಸೂರಿನಿಂದ ಬೆಂಗಳೂರಿಗೆ ಮುಂಜಾನೆ, ಬೆಂಗಳೂರಿನಿಂದ ಮೈಸೂರಿಗೆ ಮುಸ್ಸಂಜೆಯ ವೇಳೆ ರೈಲು ಓಡಿಸಬೇಕು. ನಿತ್ಯವೂ ಕನಿಷ್ಠ ಎರಡ್ಮೂರು ರೈಲು ಸಂಚರಿಸಿದರೆ ವಾರದೊಳಗೆ ಈ ಹಿಂದಿನ ಯಥಾಸ್ಥಿತಿಗೆ ಮರಳಬಹುದು ಎಂಬ ಅಭಿಪ್ರಾಯವೂ ಹಲವರಿಂದ ವ್ಯಕ್ತವಾಯಿತು.

‘ಲಾಕ್‌ಡೌನ್‌ಗೂ ಮುನ್ನವೇ ಹೆಂಡತಿ ಬಾಣಂತನಕ್ಕಾಗಿ ಮೈಸೂರಿಗೆ ಬಂದಿದ್ದರು. ಮಗ–ಪತ್ನಿಯ ಮುಖ ನೋಡಿ ಎರಡು ತಿಂಗಳ ಮೇಲಾಗಿತ್ತು. ರೈಲ್ವೆ ಸಂಚಾರ ಆರಂಭವಾಯ್ತು ಎಂದೊಡನೆ ಆನ್‌ಲೈನ್‌ನಲ್ಲಿ ಟಿಕೆಟ್ ಕಾದಿರಿಸಿದೆ. ಬೆಳಿಗ್ಗೆ 9.15ಕ್ಕೆ ಮೆಮೊ ರೈಲು ಬೆಂಗಳೂರು ಬಿಟ್ಟಿತು. ನಿಗದಿತ ಸಮಯಕ್ಕೂ 15 ನಿಮಿಷ ಮೈಸೂರು ನಿಲ್ದಾಣ ತಲುಪಿತು. ಮೈಸೂರಿನಲ್ಲಿ ಇಳಿದೊಡನೆ ನನ್ನ ಸಂತಸಕ್ಕೆ ಪಾರವೇ ಇಲ್ಲದಾಯ್ತು’ ಎಂದು ಬೆಂಗಳೂರಿನ ಪಾರ್ಥಿಬನ್ ‘ಪ್ರಜಾವಾಣಿ’ ಜತೆ ತಮ್ಮ ಸಂತಸ ಹಂಚಿಕೊಂಡರು.

‘ಬೆಂಗಳೂರಿನಲ್ಲಿನ ಮಗನ ಮನೆಗೆ ಹೋಗಿದ್ದೆ. ಲಾಕ್‌ಡೌನ್‌ನಲ್ಲಿ ಲಾಕ್ ಆದೆ. ಮೈಸೂರಿಗೆ ಬರಲಾಗಲಿಲ್ಲ. ಬಸ್‌ ಆರಂಭಗೊಂಡರೂ ಬಂದಿರಲಿಲ್ಲ. ರೈಲ್ವೆ ಸಂಚಾರ ಶುರು ಎಂಬುದು ಕೇಳಿದೊಡನೆ ಟಿಕೆಟ್‌ ಬುಕ್ ಮಾಡಿಸಿಕೊಂಡು ಬಂದೆ. ಪ್ರಯಾಣ ತುಂಬಾ ಖುಷಿಕೊಟ್ಟಿತು. ರೈಲ್ವೆ ಇಲಾಖೆ ಕೋವಿಡ್–19 ತಗುಲದಂತೆ, ಕೊರೊನಾ ವೈರಸ್ ಹರಡದಂತೆ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ’ ಎಂದು ಬಸವರಾಜು ಮೆಚ್ಚುಗೆ ವ್ಯಕ್ತಪಡಿಸಿದರು.

‘ತಿಂಗಳ ಹಿಂದೆ ಊರಿಗೆ ಬಂದಿದ್ದೆ. ಕಂಪನಿಯವರು ಕೆಲಸಕ್ಕೆ ಬರುವಂತೆ ಕರೆ ಮಾಡಿದ್ರು. ಬಸ್‌ಗೆ ಹೋಗಿರಲಿಲ್ಲ. ರೈಲ್ವೆ ಸಂಚಾರ ಆರಂಭಗೊಳ್ಳುತ್ತಿದ್ದಂತೆ ಊರಿಂದ ಬಸ್‌ನಲ್ಲಿ ಮೈಸೂರಿಗೆ ಬಂದು ಇಲ್ಲಿಂದ ಬೆಂಗಳೂರಿಗೆ ಹೋಗುತ್ತಿರುವೆ’ ಎಂದು ಕೆ.ಆರ್‌.ನಗರ ತಾಲ್ಲೂಕಿನ ಮಾರಿಗುಡಿಕೊಪ್ಪಲಿನ ಕೃಷ್ಣ ತಿಳಿಸಿದರು.

ಮೊದಲ ದಿನ 122 ಜನರ ಪ್ರಯಾಣ
‘ಬೆಂಗಳೂರಿನಿಂದ ಮೈಸೂರಿಗೆ 63 ಜನರು ಬಂದರೆ, ಮೈಸೂರಿನಿಂದ ಬೆಂಗಳೂರಿಗೆ ಮೆಮೊ ರೈಲಿನಲ್ಲಿ 59 ಜನರು ಪ್ರಯಾಣಿಸಿದರು’ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹಾಗೂ ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನೈರುತ್ಯ ರೈಲ್ವೆಯ ಮೈಸೂರು ವಿಭಾಗ ಶುಕ್ರವಾರ ತನ್ನ ವ್ಯಾಪ್ತಿಯ ಪ್ರಮುಖ ನಿಲ್ದಾಣಗಳಾದ ಮೈಸೂರಿನಲ್ಲಿ 2, ದಾವಣಗೆರೆ, ಶಿವಮೊಗ್ಗ, ಹಾಸನ ನಿಲ್ದಾಣಗಳಲ್ಲಿ ತಲಾ ಒಂದೊಂದು ರಿಸರ್ವೇಷನ್ ಕೌಂಟರ್‌ ಆರಂಭಿಸಿದ್ದು, ರೈಲ್ವೆ ಪ್ರಯಾಣಿಕರು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದು’ ಎಂದು ಹೇಳಿದರು.

‘ಎಲ್ಲ ರೈಲು ನಿಲ್ದಾಣಗಳಲ್ಲಿ ಕನಿಷ್ಠ ಅಂತರ ಮತ್ತು ಇತರೆ ನಿಗದಿತ ಕೋವಿಡ್-19 ಕ್ರಮ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಬುಕ್ಕಿಂಗ್‌ ಕಚೇರಿ ಸೇರಿದಂತೆ ರೈಲ್ವೆಯ ಆವರಣದಲ್ಲಿ ಸ್ವಚ್ಛತೆ/ನೈರ್ಮಲ್ಯತೆ ಕಾಪಾಡಿಕೊಳ್ಳಲು ನಿತ್ಯವೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ರೈಲು ಸಂಚಾರ ಸಂಖ್ಯೆ ಹೆಚ್ಚಲಿ
‘ರೈಲ್ವೆ ಪ್ರಯಾಣಿಕರನ್ನೇ ನಂಬಿಕೊಂಡು ನಮ್ಮ ಜೀವನ ಸಾಗಿದೆ. ಒಂದು ರೈಲಿನ ಓಡಾಟ ನಮಗೇನು ಲಾಭವಾಗಲ್ಲ. ನಿತ್ಯವೂ ಮೂರ್ನಾಲ್ಕು ರೈಲು ಸಂಚರಿಸಿದರೆ ನಮ್ಮ ಬದುಕಿನ ಬಂಡಿಯೂ ಸಾಗಲಿದೆ’ ಎಂದು ಆಟೊ ಚಾಲಕರಾದ ಕೃಷ್ಣೇಗೌಡ, ಪ್ರಸನ್ನ, ವಿಜಯಕುಮಾರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು