ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯೇಂದ್ರ ನಡೆ ಕಾನೂನಿಗೆ ವಿರುದ್ಧ: ಧ್ರುವನಾರಾಯಣ

Last Updated 30 ಏಪ್ರಿಲ್ 2021, 9:06 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮೈಸೂರಿನಲ್ಲಿ ಗುರುವಾರ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಂಡಿದ್ದು ಕಾನೂನಿಗೆ ವಿರುದ್ಧವಾದ ನಡೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಟೀಕಿಸಿದರು.

‘ಅವರು ಪಕ್ಷದ ಕಚೇರಿಯಲ್ಲಿ ಕುಳಿತು ಸಭೆ ನಡೆಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸರ್ಕಾರದ ವ್ಯವಸ್ಥೆಯಲ್ಲಿರುವ ಚುನಾಯಿತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡದ್ದು ತಪ್ಪು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ಕುಟುಂಬ ವರ್ಗದವರನ್ನು ಹತೋಟಿಯಲ್ಲಿಡಬೇಕು. ಈ ರೀತಿಯ ಅಧಿಕಾರದ ದುರುಪಯೋಗ ಒಳ್ಳೆಯ ಬೆಳವಣಿಗೆಯಲ್ಲ. ಇದು ಗುಲಾಮಗಿರಿ ಸಂಸ್ಕೃತಿಯನ್ನು ತೋರಿಸುತ್ತದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು’ ಎಂದು ಆಗ್ರಹಿಸಿದರು.

ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಗುರುವಾರ ನಡೆದಿದ್ದ ಸಭೆಯಲ್ಲಿ ವಿಜಯೇಂದ್ರ ಮಧ್ಯದಲ್ಲಿ ಕುಳಿತಿದ್ದರೆ, ಅಕ್ಕಪಕ್ಕದಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕ ಎಲ್‌.ನಾಗೇಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಇದ್ದರು.

ಬಿಎಸ್‌ವೈಗೆ ಆಡಳಿತ ಗೊತ್ತಿಲ್ಲ: ‘ಬಿ.ಎಸ್‌.ಯಡಿಯೂರಪ್ಪ ಬಗ್ಗೆ ನನಗೆ ಗೌರವ ಇದೆ. ಅವರು ಒಬ್ಬ ಸಂಘಟನೆಗಾರ ಹೌದು. ಆದರೆ ಉತ್ತಮ ಆಡಳಿತಗಾರ ಅಲ್ಲ. ಬಹಳಷ್ಟು ವಿಷಯಗಳಲ್ಲಿ ಅವರಿಗೆ ಆಡಳಿತ ನಡೆಸಲು ಗೊತ್ತಿಲ್ಲ. ಬಿಜೆಪಿಯ ಒಂದಿಬ್ಬರು ಸಚಿವರನ್ನು ಬಿಟ್ಟರೆ ಉಳಿದ ಯಾರೂ ಉತ್ತಮ ಆಡಳಿತಗಾರರು ಅಲ್ಲ. ಸಚಿವರ ನಡುವೆ ಸಮನ್ವಯತೆ ಕೊರತೆ ಇದೆ. ಈ ಕಾರಣ ಕೋವಿಡ್‌ ನಿಯಂತ್ರಣದಲ್ಲಿ ಸರ್ಕಾರ ಪೂರ್ಣ ವಿಫಲವಾಗಿದೆ’ ಎಂದು ಅಸಮಾಧಾನ ಹೊರಹಾಕಿದರು.

‘ಜನರ ನೋವಿಗೆ ಸ್ಪಂದಿಸುವ ಬದಲು ಬಿಜೆಪಿ ಸಚಿವರು ಧಿಮಾಕಿನಿಂದ ಮಾತನಾಡುತ್ತಾರೆ. ಅಕ್ಕಿ ಕೇಳಿದ ರೈತನನ್ನು ಸತ್ತು ಹೋಗು ಎಂದಿರುವ ಆಹಾರ ಸಚಿವ ಉಮೇಶ ಕತ್ತಿ ಅವರನ್ನು ಮುಖ್ಯಮಂತ್ರಿ ಅವರು ತಕ್ಷಣವೇ ಸಂಪುಟದಿಂದ ಕೈ ಬಿಡಬೇಕಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT