ಭಾನುವಾರ, ಆಗಸ್ಟ್ 7, 2022
21 °C
ವಿಶ್ವವಿದ್ಯಾಲಯ, ಈಜು ಸಂಸ್ಥೆಯ ಪ್ರಬಲ ವಿರೋಧ l ಕ್ರೀಡಾಪಟುಗಳಿಂದಲೂ ಆಕ್ಷೇಪ

ಈಜುಕೊಳದ ಈಜುಕೊಳ ಮುಂಭಾಗವೇ ಮಾರಾಟ ವಲಯ; ಸಾರ್ವಜನಿಕರಿಂದ ವಿರೋಧ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯ ಈಜುಕೊಳ ಮುಂಭಾಗವೇ ಬೀದಿಬದಿ ವ್ಯಾಪಾರಸ್ಥರಿಗಾಗಿ ಆಹಾರ ಮಾರಾಟ ವಲಯ ಸ್ಥಾಪಿಸುವ ಪಾಲಿಕೆಯ ಪ್ರಯತ್ನಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

‘ವಲಯ ಸ್ಥಾಪನೆಯಿಂದ ಈಜುಕೊಳದ ಸುತ್ತಮುತ್ತ ಅನೈರ್ಮಲ್ಯ ಉಂಟಾಗಿ ಕ್ರೀಡಾ ವಾತಾವರಣವೇ ಹಾಳಾಗುತ್ತದೆ’ ಎಂದು ವಿಶ್ವವಿದ್ಯಾಲಯ, ಜಿಲ್ಲಾ ಈಜು ಸಂಸ್ಥೆ, ಕ್ರೀಡಾಪಟು ಗಳು ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ದ್ದಾರೆ. ಈ ಸಂಬಂಧ ಸೋಮವಾರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್‌ ರೆಡ್ಡಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

ಈಜುಕೊಳ ರಸ್ತೆಯ ಮುಂಭಾಗದ 105x18.50 ಮೀಟರ್‌ ವಿಸ್ತೀರ್ಣವೂ ಸೇರಿದಂತೆ ಪಾಲಿಕೆಯು ನಗರದ ಏಳು ಕಡೆ ಮಾರಾಟ ವಲಯಕ್ಕಾಗಿ (ವೆಂಡರ್‌ ಜೋನ್‌) ಜಾಗ ಗುರುತಿಸಿದ್ದು, ಯೋಜನೆ ರೂಪಿಸಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾಗಿದೆ.

ವಲಯ–4ರ ವ್ಯಾಪ್ತಿಯಲ್ಲಿ ಪಾಲಿಕೆ ಗುರುತಿಸಿರುವ ಜಾಗದ ಬಳಿ ಈಜುಕೊಳವಲ್ಲದೆ, ಶನೇಶ್ವರಸ್ವಾಮಿ ದೇಗುಲ, ಕಲ್ಯಾಣಿಗಳಿವೆ. ಆಯುರ್ವೇದ ಗಿಡಮೂಲಿಕೆಗಳ ’ಚಂದ್ರವನ’ವಿದೆ. ಜೆಎಸ್‌ಎಸ್‌ ಮಹಿಳಾ ಕಾಲೇಜು ಹಾಗೂ ಮೈಸೂರು ಚೆಸ್‌ ಸೆಂಟರ್‌ ಕೂಡ ಸನಿಹದಲ್ಲೇ ಇದೆ.

‘ಕ್ರೀಡಾಂಗಣದ ಸುತ್ತ ಶಾಂತ ಹಾಗೂ ಸ್ವಚ್ಛ ವಾತಾವರಣವಿರಬೇಕು. ಆಗ ಸ್ಪರ್ಧಿಗಳು ಹಾಗೂ ಶಿಬಿರಾರ್ಥಿಗಳು ತದೇಕಚಿತ್ತದಿಂದ ಅಭ್ಯಾಸ ನಡೆಸಲು ಸಾಧ್ಯ. ಜೊತೆಗೆ ಚಾಂಪಿಯನ್‌ಷಿಪ್‌ಗಳು ನಡೆದಾಗ ಬೇರೆ ಕಡೆಯಿಂದ ಸ್ಪರ್ಧಿಗಳು ಬರುತ್ತಾರೆ. ವಾಹನ ನಿಲ್ಲಿಸಲೂ ಜಾಗ ಬೇಕಾಗುತ್ತದೆ’ ಎಂದು ಈಜು ಸಂಸ್ಥೆ ಕಾರ್ಯದರ್ಶಿ ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಧರಣಿ ನಡೆಸುತ್ತೇವೆ: ‘ಸರಸ್ವತಿಪುರಂ ಈಜುಕೊಳ ಮೈಸೂರಿನ ಹೆಮ್ಮೆ. ಇಂಥ ಈಜುಕೊಳದ ಮುಂದೆ ತಿಂಡಿ ಗಾಡಿಗಳು ಬಂದರೆ ವಾತಾವರಣ ಗಬ್ಬೆದ್ದು ಹೋಗುತ್ತದೆ. ವಲಯ ಸ್ಥಾಪಿಸಿದರೆ ಧರಣಿ ನಡೆಸುತ್ತೇವೆ’ ಎಂದು ಹಿರಿಯ ಈಜುಪಟು ರವಿ ಹಾಗೂ ಯುವ ಈಜುಪಟು ರಾಜವರ್ಧನ್‌ ಎಚ್ಚರಿಸಿದರು.

ತೊಂದರೆಯಾಗದಂತೆ ಯೋಜನೆ: ‘ಸ್ಥಳೀಯರು, ಕ್ರೀಡಾಪಟುಗಳು, ಪಾದಚಾರಿಗಳು ಸೇರಿದಂತೆ ಯಾರಿಗೂ ತೊಂದರೆ ಆಗದಂತೆ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಬೀದಿಬದಿ ವ್ಯಾಪಾರಿಗಳು ಒಂದೇ ಕಡೆ ವ್ಯಾಪಾರ ಮಾಡಲಿ ಎಂಬುದು ಇದರ ಉದ್ದೇಶ. ಮಾರಾಟ ವಲಯದಲ್ಲಿ  ವ್ಯಾಪಾರಿಗಳಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಿಕೊಡಲಾಗುವುದು. ಅದರಿಂದ ನೈರ್ಮಲ್ಯ ಕಾಪಾಡಿಕೊಳ್ಳಲು ಸುಲಭವಾಗುತ್ತದೆ. ಈ ಯೋಜನೆಗೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನಯದಡಿ ಕೇಂದ್ರದಿಂದ ಅನುದಾನ ದೊರೆಯುತ್ತಿದೆ’‌ ಎಂದು ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.