ಶುಕ್ರವಾರ, ಮೇ 20, 2022
23 °C
ವಿಶ್ವ ಕ್ಯಾನ್ಸರ್ ದಿನಾಚರಣೆ: ವಿವಿಧೆಡೆ ಜಾಗೃತಿ ಜಾಥಾ–ಅರಿವಿನ ಶಿಬಿರ

ಕ್ಯಾನ್ಸರ್‌ ಭಯ ಬಿಡಿ: ಚಿಕಿತ್ಸೆ ಪಡೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಗುರುವಾರ ಜಾಗೃತಿ ಜಾಥಾ, ಅರಿವಿನ ಶಿಬಿರ, ಉಚಿತ ತಪಾಸಣೆ, ವಿಶೇಷ ಉಪನ್ಯಾಸವೂ ನಡೆದವು.

ಕ್ಲಿಯರ್‌ಮೆಡಿ ರೇಡಿಯೆಂಟ್ ಆಸ್ಪತ್ರೆ ವತಿಯಿಂದ ನಸುಕಿನಲ್ಲೇ ಸೈಕ್ಲೋಥಾನ್ ನಡೆಯಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಸೈಕ್ಲೋಥಾನ್ ಆರಂಭಿಸಿದ 300 ಸೈಕಲ್ ಸವಾರರು ಅರಮನೆಯ ಸುತ್ತ ಒಂದು ಸುತ್ತು ಜಾಥಾ ನಡೆಸಿ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು. ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್‌ ವಿಭಾಗದ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗಿಯಾಗಿದ್ದರು.

ಸೈಕ್ಲೋಥಾನ್‌ಗೆ ಚಾಲನೆ ನೀಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು ಕೇವಲ ಆಸ್ಪತ್ರೆಗಳ ಜವಾಬ್ದಾರಿಯಲ್ಲ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉತ್ತಮ ಆಹಾರ ಕ್ರಮ, ನಿಯಮಿತ ವ್ಯಾಯಾಮವನ್ನು ತಮ್ಮ ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಳ್ಳಬೇಕು. ಆಗ ಮಾತ್ರ ಇಂತಹ ಕಾರ್ಯಕ್ರಮ ಸಾರ್ಥಕವಾಗುತ್ತವೆ. ಸೈಕ್ಲೋಥಾನ್ ಮೂಲಕ ಜಾಗೃತಿ ಮೂಡಿಸುತ್ತಿರುವ ಕ್ಲಿಯರ್‌ಮೆಡಿ ರೇಡಿಯೆಂಟ್ ಆಸ್ಪತ್ರೆಯ ಕಾರ್ಯ ಶ್ಲಾಘನೀಯ’ ಎಂದರು.

ಸಂಚಾರ ವಿಭಾಗದ ಎಸಿಪಿ ಸಂದೇಶ್ ಕುಮಾರ್, ನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗರಾಜ್, ಕ್ಲಿಯರ್‌ಮೆಡಿ ರೇಡಿಯೆಂಟ್ ಆಸ್ಪತ್ರೆಯ ಡಾ.ವೇಣುಗೋಪಾಲ್, ಆಸ್ಪತ್ರೆಯ ಮುಖ್ಯ ವ್ಯವಸ್ಥಾಪಕ ಎ.ಆರ್.ಮಂಜುನಾಥ್ ಕಾರ್ಯಕ್ರಮದಲ್ಲಿದ್ದರು.

ಜಾಥಾ–ಉಪನ್ಯಾಸ: ಮಹಾರಾಣಿ ಮಹಿಳಾ ಕಲಾ ಕಾಲೇಜು, ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್ ಹಾಗೂ ಸುಯೋಗ್ ಆಸ್ಪತ್ರೆಯ ವತಿಯಿಂದ ಮಹಾರಾಣಿ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಉಪನ್ಯಾಸ ನಡೆಯಿತು.

ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್‌ನ ಅಧ್ಯಕ್ಷ ರಮೇಶ್ ಬಿಳಿಕೆರೆ ಮಾತನಾಡಿ, ‘ಕ್ಯಾನ್ಸರ್ ಬಂದರೆ ಭಯವನ್ನು ಮೊದಲು ಬಿಡಬೇಕು. ಅದಕ್ಕೂ ಔಷಧಿ ಇದೆ. ಬೇರೆ ರೋಗಗಳಂತೆ ಕ್ಯಾನ್ಸರ್ ಸಹ ಗುಣವಾಗುತ್ತದೆ. ಈ ಬಗ್ಗೆ ಅರಿವು ಮೂಡಿಸುವುದು ಅವಶ್ಯಕ. ಈಚೆಗೆ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿರುವುದು ಆತಂಕದ ಸಂಗತಿ. ಈ ಬಗ್ಗೆ ಎಚ್ಚತ್ತುಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

ಉರಗ ತಜ್ಞ ಸ್ನೇಕ್‌ ಶ್ಯಾಮ್ ಮಾತನಾಡಿ, ‘ಕ್ಯಾನ್ಸರ್‌ ಭಯವನ್ನು ತೊಡೆದುಹಾಕಬೇಕು. ಮನಸ್ಸಿನಲ್ಲಿ ಧೈರ್ಯ ಇದ್ದರೆ ಎಂತಹ ಸಮಸ್ಯೆಯೂ ಪರಿಹಾರವಾಗುತ್ತದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಧೈರ್ಯ ತುಂಬುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕು’ ಎಂದು ಹೇಳಿದರು.

ಇದಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಡೆದ ಕ್ಯಾನ್ಸರ್ ಜಾಗೃತಿ ಜಾಥಾಗೆ ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ಚಾಲನೆ ನೀಡಿದರು.

ಭವತಾರಿಣಿ ಮತ್ತು ತಂಡದವರು ಸಂಗೀತ ಕಛೇರಿ ನಡೆಸಿಕೊಟ್ಟರು. ಎಂಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸುಯೋಗ್ ಆಸ್ಪತ್ರೆಯ ಡಾ.ಎಸ್.ಪಿ.ಯೋಗಣ್ಣ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಡಾ.ಟಿ.ಎಲ್.ಜಗದೀಶ್‌, ಡಾ.ಆರ್.ಡಿ.ಶ್ರೀನಿವಾಸ್, ಡಾ.ಪಿ.ಎನ್.ಹೇಮಚಂದ್ರ, ಗಿರೀಶ್ ಉಪಸ್ಥಿತರಿದ್ದರು.

ಚಿಕಿತ್ಸಾ ಅಭಿಯಾನ
ದಿ ಆರ್ಗನೈಸೇಷನ್ ಫಾರ್ ದಿ ಡೆವಲಪ್‌ಮೆಂಟ್ ಆಫ್ ಪೀಪಲ್ (ಓಡಿಪಿ), ಸಂತ ಜೋಸೆಫರ ಆಸ್ಪತ್ರೆ ಮತ್ತು ಸಂತ ಫಿಲೋಮಿನಾಸ್ ಕಾಲೇಜು ವತಿಯಿಂದ ‘ಸ್ಪರ್ಶ-ಇನ್‌ಸ್ಟಿಲ್ಲಿಂಗ್ ಹೋಪ್’ ಶೀರ್ಷಿಕೆಯಡಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಕ್ಯಾನ್ಸರ್ ಚಿಕಿತ್ಸಾ ಅಭಿಯಾನ ಹಾಗೂ ವಾಕಥಾನ್ ನಡೆಯಿತು.

ನಗರದ ಕೋಟೆ ಆಂಜನೇಯ ದೇವಸ್ಥಾನದ ಎದುರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಅಮರನಾಥ್ ಹಸಿರು ನಿಶಾನೆ ತೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೋಟೆ ಆಂಜನೇಯ ದೇವಸ್ಥಾನದ ಬಳಿ ಆರಂಭವಾದ ಜಾಥಾ ಸಂತ ಫಿಲೋಮಿನಾ ಚರ್ಚ್‌ವರೆಗೂ ಸಾಗಿ ಬಂತು. ಸಂತ ಫಿಲೋಮಿನಾ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಕ್ಯಾನ್ಸರ್ ಚಿಕಿತ್ಸೆ ಕುರಿತು ಕಿರು ರೂಪಕ ಪ್ರದರ್ಶಿಸಿದರು.

ಕ್ಯಾನ್ಸರ್ ನಿಯಂತ್ರಿಸಲು ತಂಬಾಕು, ಮದ್ಯಪಾನ ತ್ಯಜಿಸಿ. ಪೌಷ್ಟಿಕ ಆಹಾರ ಸೇವಿಸಬೇಕು. ಉತ್ತಮ ಜೀವನ ಶೈಲಿ ಮೈಗೂಡಿಸಿಕೊಳ್ಳಬೇಕು. ಸಂರಕ್ಷಿಸಿದ ಮಾಂಸ, ಕುರುಕಲು ಹಾಗೂ ಅಶುಚಿತ್ವದಿಂದ ತಯಾರಾದ ಆಹಾರ, ಮೈದಾಹಿಟ್ಟು ಮುಂತಾದ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು. ಸಮಯಕ್ಕೆ ಸರಿಯಾಗಿ ವೈದ್ಯರನ್ನು ಭೇಟಿ ಮಾಡಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳಬೇಕು.

ಕ್ಯಾನ್ಸರ್ ಗುಣವಾಗುವ ಕಾಯಿಲೆ. ರೋಗಿಗಳು ನಿರಾಶರಾಗದೆ, ಮಾನಸಿಕ ಸ್ಥೈರ್ಯದಿಂದ ಇದರ ವಿರುದ್ಧ ಹೋರಾಡಿ ನೆಮ್ಮದಿಯ ಜೀವನ ನಡೆಸಿ ಎಂದು ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು.

ಫಾದರ್‌ಗಳಾದ ಸಿ.ರಾಯಪ್ಪ, ಲೆಸ್ಲಿ ಮೋರಾಸ್, ಡಾ.ಬರ್ನಾರ್ಡ್ ಪ್ರಕಾಶ್ ಬಾರ್‌ನಿಸ್, ಡಾ.ರವಿ, ಡಾ.ಅನಿಲ್ ಥಾಮಸ್ ಮತ್ತಿತರರಿದ್ದರು.

ಕ್ಯಾನ್ಸರ್ ತಜ್ಞರಿಂದ ಆನ್‌ಲೈನ್ ಸಂವಾದ ನಡೆಯಿತು. ಡಾ.ವಿಶ್ವೇಶ್ವರ್, ಡಾ.ಶ್ಯಾಮ ಸುಂದರ್, ಡಾ.ಚೈತ್ರ ವೆಬಿನಾರ್ ಸಂವಾದದಲ್ಲಿ ಭಾಗವಹಿಸಿದ್ದರು.

ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ‘ಪಿಂಕ್ ಹೋಪ್’
ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರ್‌ನಾಥ್, ‘ಕ್ಯಾನ್ಸರ್‌ಗೆ ಹೆಚ್ಚು ಭಯ ಪಡುವ ಅಗತ್ಯವಿಲ್ಲ. ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಒಳ್ಳೆಯದು. ನೀವು ನಿಮ್ಮ ಸುತ್ತಮುತ್ತಲಿನವರಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಬೇಕು. ಆಗ ಮಾತ್ರ ಕ್ಯಾನ್ಸರ್ ತಡೆಗಟ್ಟಲು ಸಾಧ್ಯ. ಯಾವುದಕ್ಕೂ ಹೆದರದೆ ಚಿಕಿತ್ಸೆ ಪಡೆಯಿರಿ’ ಎಂದು ಸಲಹೆ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ ಮಾತನಾಡಿ, ‘ರೋಗಿಗಳ ಆತ್ಮಸ್ಥೈರ್ಯವೂ ಮದ್ದಾಗಿ ಕೆಲಸ ಮಾಡಲಿದೆ. ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ. ಆಗ ಯಾವ ರೋಗವೂ ನಿಮ್ಮನ್ನು ಕಾಡುವುದಿಲ್ಲ’ ಎಂದು ಕಿವಿಮಾತು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಆಹಾರ ಮತ್ತು ಪೋಷಣೆ ವಿಭಾಗದ ಉಪನ್ಯಾಸಕರಾದ ಡಾ.ಅಸ್ನಾ ಉರುಜ್ ಕಾರ್ಯಕ್ರಮ ಉದ್ಘಾಟಿಸಿದರು.

ಕ್ಯಾನ್ಸರ್‌ನಿಂದ ಗುಣಮುಖರಾದವರು ಸೇರಿ ರಚಿಸಿರುವ ಪಿಂಕ್ ಹೋಪ್ ಎಂಬ ತಂಡದ ಸದಸ್ಯರು ತಮ್ಮ ಕಥೆ, ಅನುಭವಗಳನ್ನು ಹೇಳಿಕೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ಸ್ಫೂರ್ತಿ ತುಂಬಿದ್ದು ವಿಶೇಷವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು