ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Yoga Day 2021: ಯೋಗ ನಗರಿಯಾಗಿ ನಂಜನಗೂಡು- ಸಂಕಲ್ಪ

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ನಿರಂತರ ಸೇವೆ
Last Updated 21 ಜೂನ್ 2021, 3:08 IST
ಅಕ್ಷರ ಗಾತ್ರ

ನಂಜನಗೂಡು: ಯೋಗ ಶಿಕ್ಷಣ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯು 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ನಗರವನ್ನು ಯೋಗನಗರಿಯನ್ನಾಗಿ ಮಾಡುವ ಸಂಕಲ್ಪ ತೊಟ್ಟಿದೆ.

ಸಂಘಟನೆಯೇ ಬಲ, ಸಂಸ್ಕಾರವೇ ಪ್ರಾಣವಾಯು, ಸೇವೆಯೇ ಜೀವಾ ಳವಾಗಿಸಿಕೊಂಡಿರುವ ನಂಜನಗೂಡು ಶಾಖೆಯು 2008ರಲ್ಲಿ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ನೇತೃತ್ವದಲ್ಲಿ ಕೆಲವೇ ಯೋಗಾಸಕ್ತರೊಂದಿಗೆ ಆರಂಭವಾಯಿತು. ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ನಿರಂತರವಾಗಿ ಉಚಿತ ಯೋಗ, ಧ್ಯಾನ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಳಗವನ್ನು ವಿಸ್ತರಿಸಿಕೊಂಡಿದೆ.

ಪ್ರಸ್ತುತ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ದಾನಿ ಎಸ್.ಉಮೇಶ್ ಶರ್ಮ ಅವರು ನೀಡಿರುವ ನಿವೇಶನದಲ್ಲಿ ಯೋಗಾಸಕ್ತರೇ ಸೇರಿ ಯೋಗ ಮಹಾಮನೆ ಮೂಲಕ ಸಾವಿರಾರು ಮಂದಿಗೆ ಉಚಿತವಾಗಿ ಯೋಗ ಶಿಕ್ಷಣ ನೀಡಲಾಗುತ್ತಿದೆ.

ಕೇವಲ ಯೋಗ, ಪ್ರಾಣಾಯಾಮ, ಧ್ಯಾನಕ್ಕೆ ಸೀಮಿತಗೊಳ್ಳದ ಸಮಿತಿಯು ಪ್ರತಿಯೊಬ್ಬರಲ್ಲೂ ಸಂಸ್ಕಾರ, ಸಹಬಾಳ್ವೆ, ಭ್ರಾತೃತ್ವ, ಭಾವೈಕ್ಯತೆ ನೆಲೆಗಟ್ಟಿನಲ್ಲಿ ಜನರನ್ನು ಸಂಘಟಿಸಿ ಆರೋಗ್ಯವಂತ ಸಮಾಜ ನಿರ್ಮಾಣದ ಪಣತೊಟ್ಟಿದೆ.

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ನಂಜನಗೂಡು ಶಾಖೆಯು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಾದ, ಶ್ರೀಬಸವಾನಂದ ಸ್ವಾಮಿಜಿ ಪ್ರೇರಣೆ ಹಾಗೂ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗಾಚಾರ್ಯ ಅ.ರ.ರಾಮಸ್ವಾಮಿ ಅವರ ಮಾರ್ಗದರ್ಶನದೊಂದಿಗೆ, ಶಾಖೆಯ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ಅವರ ಶ್ರಮದಿಂದ ಸುತ್ತೂರು ಮಠದ ಆಶ್ರಯದಲ್ಲಿ ಬೆಳೆದಿದೆ. ಏಳು ಉಪಶಾಖೆಗಳನ್ನು ಪ್ರಾರಂಭಿಸಲಾಗಿದೆ.

2014ರಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರವಾಗಿ ಸೂರ್ಯ ನಮಸ್ಕಾರ ಮಾಡುವ ‘ಅಖಂಡ ಸೂರ್ಯ ನಮಸ್ಕಾರ ಯಜ್ಞ’ ಕೈಗೊಂಡಿತ್ತು. 2017ರಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ವರೆಗೆ ನಿರಂತರವಾಗಿ ಓಂಕಾರ ಜಪ ಮಾಡುವ ‘ಅಖಂಡ ಓಂಕಾರ ಯಜ್ಞ’ ಕೈಗೊಂಡಿದೆ. ಅ.28, 2019ರಲ್ಲಿ ಕಂತೇ ಮಾದಪ್ಪನ ಬೆಟ್ಟದಲ್ಲಿ ಒಂದು ದಿನದ ಮೌನ ಶಿಬಿರ, ಡಿ.29, 2019ರಲ್ಲಿ ಚಿಕ್ಕಹಳ್ಳಿ ರಾಘವೇಂದ್ರಸ್ವಾಮಿ ಮಠದಲ್ಲಿ ಒಂದು ದಿನದ ಬುದ್ಧ ಧ್ಯಾನ ಶಿಬಿರ ನಡೆಸಿತ್ತು.

ಕೋವಿಡ್ ಸಂದರ್ಭದಲ್ಲಿ ಜನರಲ್ಲಿ ಸಕಾರಾತ್ಮಕ ಚಿಂತನೆ ಮೂಡಿಸಲು ನ.4, 2020ರಿಂದ ಫೆ.19, 2021ವರೆಗೆ ‘108 ದಿನಗಳ 108 ಸೂರ್ಯ ನಮಸ್ಕಾರ ಯಜ್ಞ’ ಕೈಗೊಂಡಿತ್ತು. ಸೂರ್ಯ ನಮಸ್ಕಾರ ಹಾಗೂ ಸೂರ್ಯನನ್ನು ಕುರಿತು ‘ದಿನಕರ ದರ್ಶನ’ ಕೃತಿ ಹೊರತಂದಿದೆ.

ಯೋಗ ಶಿಕ್ಷಣದ ಜೊತೆಗೆ ಮಕ್ಕಳ ಬೇಸಿಗೆ ಶಿಬಿರ (ಯೋಗ ಮತ್ತು ಬೌದ್ಧಿಕ್), ವಿದ್ಯಾರ್ಥಿಗಳಿಗಾಗಿ ಕಲಿಕಾ ಕೇಂದ್ರ, ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪ್ರಕೃತಿ ಚಿಕಿತ್ಸಾ ಕಾರ್ಯಾಗಾರ, ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ, ಗ್ರಾಮೀಣ ಪ್ರದೇಶಗಳಲ್ಲಿ ಯೋಗ ಶಿಬಿರ, ಧ್ಯಾನ ಶಿಬಿರ, ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಮಿತಿಯ ಸೇವೆಯನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಜಿ ಮೆಚ್ಚಿಕೊಂಡಿದ್ದಾರೆ.

ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ಮಾತನಾಡಿ, ಯೋಗ ಎಂದರೆ ಅದೊಂದು ಜೀವನ ಕ್ರಮ. ಹಾಗಾಗಿಯೇ ಯೋಗವನ್ನು ಈ ಯುಗದ ಧರ್ಮ ಎಂದೇ ಹೇಳ ಬಹುದು. 13 ವರ್ಷಗಳಿಂದ ಯೋಗ ಕಾರ್ಯ ನಡೆದು
ಕೊಂಡು ಬರುತ್ತಿದ್ದು, ಧ್ಯಾನ ಮಂದಿರ ನಿರ್ಮಾಣ ಮಾಡಬೇಕೆಂಬ ಕನಸಿದೆ. ಅದು ಯೋಗಾಸಕ್ತರ ಸಹಕಾರದೊಂದಿಗೆ ಸಾಕಾರವಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT