ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 65 ರಷ್ಟು ಯುವ ಜನರಿಗೆ ಕೌಶಲ ತರಬೇತಿ: ಡಿ.ವಿ.ಸದಾನಂದಗೌಡ

ಕೌಶಲ ಭಾರತ ಅಭಿಯಾನದಿಂದ ಆರ್ಥಿಕ ಪ್ರಗತಿ: ಡಿ.ವಿ.ಸದಾನಂದಗೌಡ
Last Updated 9 ಅಕ್ಟೋಬರ್ 2020, 4:00 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಸರ್ಕಾರವು ಕೌಶಲ ಭಾರತ ಅಭಿಯಾನಯಡಿ ಯುವ ಜನರಿಗೆ ಆಯಾ ವೃತ್ತಿಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಿದೆ. 2014ರಲ್ಲಿ ಪ್ರಾರಂಭವಾದ ಈ ಅಭಿಯಾನದಿಂದ ಶೇ.65ರಷ್ಟು ಯುವ ಜನರಿಗೆ ಕೌಶಲ ತರಬೇತಿ ಒದಗಿಸಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಗುರುವಾರ ಆಯೋಜಿಸಿದ್ದ ಶಾರದಾ ವಿಲಾಸ ಕಾಲೇಜಿನ ಅಮೃತ ಮಹೋತ್ಸವ ಮತ್ತು ಕೌಶಲಾಧಾರಿತ ಶೈಕ್ಷಣಿಕ ಕೋರ್ಸ್‍ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೌಶಲ ಭಾರತ ಅಭಿಯಾನ ದೇಶದ ಆರ್ಥಿಕ ಪ್ರಗತಿಗೆ ನೆರವಾಗಿದೆ. ಪ್ರತಿವರ್ಷ ಒಂದು ಕೋಟಿ ಜನರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕೌಶಲ ತರಬೇತಿಗೆ 3.60 ಲಕ್ಷ ಜನರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 2.50 ಲಕ್ಷ ಮಂದಿ ತರಬೇತಿ ಪಡೆದಿದ್ದಾರೆ. 60 ಸಾವಿರ ಜನರಿಗೆ ವಿವಿಧ ಕ್ಷೇತ್ರದಲ್ಲಿ ಉದ್ಯೋಗಾವಕಾಶ ದೊರೆತಿದೆ ಎಂದು ಮಾಹಿತಿ ನೀಡಿದರು.

ದೇಶದಾದ್ಯಂತ ಕೈಗಾರಿಕೆ ತರಬೇತಿ ಸಂಸ್ಥೆಗಳಿಗೆ (ಐಟಿಐ ಕಾಲೇಜು) ಪ್ರವೇಶ ಪಡೆಯುವವರ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ 22 ಲಕ್ಷ ದಾಟಿದೆ. ಕೌಶಲಾಭಿವೃದ್ಧಿಗೆ ಒತ್ತು ನೀಡಿದ ಪರಿಣಾಮವಾಗಿ ಈ ಬೆಳವಣಿಗೆ ಕಂಡುಬಂದಿದೆ. ದೇಶದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗಲು ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ ವಲಯ ಮತ್ತು ಸರ್ಕಾರ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಶಾರದಾವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ಪಾರ್ಥಸಾರಥಿ ಭಾಗವಹಿಸಿದ್ದರು.

‘ಮೆಗಾ ಫಾರ್ಮಸಿ ಸೆಂಟರ್‌ ಸ್ಥಾಪನೆ’

ದೇಶಕ್ಕೆ ಅಗತ್ಯವಿರುವ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳು, ಉಪಕರಣಗಳಲ್ಲಿ ಸದ್ಯ ಶೇ 60 ರಿಂದ 70 ರಷ್ಟು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಚೀನಾದ ಅವಲಂಬನೆ ತಪ್ಪಿಸಲು ದೇಶದ ನಾಲ್ಕು ಭಾಗದಲ್ಲಿ ಮೆಗಾ ಫಾರ್ಮಸಿ ಸೆಂಟರ್‌ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಡಿ.ವಿ.ಸದಾನಂದಗೌಡ ಹೇಳಿದರು.

ಕೊರೊನಾ ಬಂದ ಆರಂಭದಲ್ಲಿ ಪಿಪಿಟಿ ಕಿಟ್, ಅಗತ್ಯ ವೆಂಟಿಲೇಟರ್ ಸೌಲಭ್ಯವನ್ನು ವಿದೇಶದಿಂದ ತರಿಸಿಕೊಳ್ಳಲಾಗುತಿತ್ತು. ಇದೀಗ ದೇಶದಲ್ಲೇ ಉತ್ಪಾದನೆ ಪ್ರಾರಂಭಿಸಿದ್ದು, ಪ್ರತಿ ದಿನ 5 ಲಕ್ಷ ಪಿಪಿಟಿ ಕಿಟ್, ಅಗತ್ಯಕ್ಕೆ ತಕ್ಕಷ್ಟು ವೆಂಟಿಲೇಟರ್ ಹಾಗೂ ಮಾಸ್ಕ್ ಉತ್ಪಾದಿಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT