ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ 37,475 ವಿದ್ಯಾರ್ಥಿಗಳು ನೋಂದಣಿ

ಮಾರ್ಚ್‌ 31ರಿಂದ ಏ.15ರವರೆಗೆ ಪರೀಕ್ಷೆ
Last Updated 30 ಮಾರ್ಚ್ 2023, 14:03 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಮಾರ್ಚ್‌ 31ರಿಂದ ಏ.15ರವರೆಗೆ ನಿಗದಿಯಾಗಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ 37,475 ವಿದ್ಯಾರ್ಥಿಗಳು (1,297 ಪುನರಾವರ್ತಿತರು ಸೇರಿ) ನೋಂದಾಯಿಸಿದ್ದಾರೆ.

ಕೋವಿಡ್–19 ನಂತರ ಈ ವರ್ಷ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆದಿದ್ದು, ಈ ಹಿಂದಿನಂತೆಯೇ ಪರೀಕ್ಷೆಯನ್ನೂ ಜರುಗಿಸಲಾಗುತ್ತಿದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮುನ್ನಾ ದಿನವಾದ ಗುರುವಾರ ಪರೀಕ್ಷಾ ಕೇಂದ್ರಗಳಲ್ಲಿ ಕೊನೆ ಹಂತದ ತಯಾರಿಗಳು ನಡೆದವು. ಡೆಸ್ಕ್‌ಗಳ ಮೇಲೆ ನಂಬರ್ ಹಾಕುವುದು ಮೊದಲಾದ ಸಿದ್ಧತೆ ಮಾಡಿಕೊಳ್ಳಲಾಯಿತು. ಇಲ್ಲಿನ ಪೀಪಲ್ಸ್‌ ‍ಪಾರ್ಕ್, ಮರಿಮಲ್ಲಪ್ಪ ಹಾಗೂ ಮಹಾರಾಣಿ ಪ್ರೌಢಶಾಲೆಗಳ ಕೇಂದ್ರಗಳಿಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್ ಗುರುವಾರ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದರು.

148 ಪರೀಕ್ಷಾ ಕೇಂದ್ರ: ಮೊದಲ ದಿನವಾದ ಶುಕ್ರವಾರ ಪ್ರಥಮ ಭಾಷೆ ವಿಷಯದ ಪರೀಕ್ಷೆ ನಡೆಯಲಿದೆ. ನಗರದಲ್ಲಿ 52 ಹಾಗೂ ಜಿಲ್ಲೆಯ ಗ್ರಾಮಾಂತರ ವ್ಯಾಪ್ತಿಯಲ್ಲಿ 96 ಸೇರಿ ಒಟ್ಟು 148 ಕೇಂದ್ರದಲ್ಲಿ ನಡೆಯಲಿವೆ. ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ವಿಧಿಸಲಾಗಿದೆ.

ಜಿಲ್ಲೆಯಲ್ಲಿ 276 ಸರ್ಕಾರಿ ಹಾಗೂ ಅನುದಾನಿತ, ಅನುದಾನರಹಿತ ಶಾಲೆಗಳು ಸೇರಿ ಒಟ್ಟು 680 ಪ್ರೌಢಶಾಲೆಗಳಿವೆ. ಇವರಲ್ಲಿ 19,054 ಬಾಲಕರು ಹಾಗೂ 18,421 ಬಾಲಕಿಯರು ಇದ್ದಾರೆ.

ಕೇಂದ್ರಗಳಿಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸರಣಿ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ. ಮಾದರಿ ಪ್ರಶ್ನೆಪತ್ರಿಕೆಗಳನ್ನು ಹಾಗೂ ಗರಿಷ್ಠ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ನೀಡಿ ಪರೀಕ್ಷೆ ಎದುರಿಸುವುದು ಹೇಗೆ ಎಂದು ಮಾರ್ಗದರ್ಶನ ನೀಡಲಾಗಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೇ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದರು.

ಪ್ರಯಾಣಕ್ಕೆ ಅವಕಾಶ: ಪರೀಕ್ಷಾ ದಿನದಂದು ಎಲ್ಲಾ ಕೇಂದ್ರಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವಂತೆ ಸೆಸ್ಕ್‌ಗೆ ಪತ್ರ ಬರೆಯಲಾಗಿದೆ. ಪ್ರವೇಶಪತ್ರ ತೋರಿಸುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರಗಳ ಬಳಿ ಪೊಲೀಸ್ ಬಂದೋಬಸ್ತ್‌ ಕೂಡ ಇರಲಿದೆ. ಪರೀಕ್ಷಾ ಅಕ್ರಮಕ್ಕೆ ಆಸ್ಪದವಿಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಕೆಯಾಗದಂತೆ ಪ್ರವೇಶ ದ್ವಾರದಲ್ಲಿ ಮೊಬೈಲ್ ಸ್ವಾಧೀನ ಅಧಿಕಾರಿ ಹಾಗೂ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಸೂಪರಿಂಟೆಂಡೆಂಟ್‌, ಪ್ರಶ್ನೆಪತ್ರಿಕೆ ಮೇಲ್ವಿಚಾರಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಪೂರೈಸಲು ಎಚ್‌.ಡಿ.ಕೋಟೆಯಲ್ಲಿ 7, ಹುಣಸೂರಿನಲ್ಲಿ 6, ಕೆ.ಆರ್‌.ನಗರದಲ್ಲಿ 5, ಮೈಸೂರು ಉತ್ತರದಲ್ಲಿ 8, ಮೈಸೂರು ದಕ್ಷಿಣದಲ್ಲಿ 7, ಮೈಸೂರು ಗ್ರಾಮಾಂತರದಲ್ಲಿ 8, ನಂಜನಗೂಡಿನಲ್ಲಿ 9, ಪಿರಿಯಾಪಟ್ಟಣದಲ್ಲಿ 5, ತಿ.ನರಸೀಪುರದಲ್ಲಿ 6 ಸೇರಿ ಒಟ್ಟು 61 ಮಾರ್ಗಗಳನ್ನು ರಚಿಸಲಾಗಿದೆ. ಸಂಬಂಧಿಸಿದ ಬಿಇಒಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಪರೀಕ್ಷೆಯ ನಂತರ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ನಿಗದಿಯಾದ ಜಿಲ್ಲೆಗಳಿಗೆ ರವಾನಿಸಲಾಗುತ್ತದೆ. ಸೀಟಿಂಗ್ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಕಳೆದ ಬಾರಿಯ ಪರೀಕ್ಷೆಯಲ್ಲಿ ಜಿಲ್ಲೆಯು ‘ಎ+’ ಶ್ರೇಯಾಂಕವನ್ನು ಪಡೆದಿತ್ತು.

ನೋಂದಾಯಿಸಿದವರ ವಿವರ
ಶೈಕ್ಷಣಿಕ ವಲಯ; ಬಾಲಕರು; ಬಾಲಕಿಯರು; ಒಟ್ಟು; ಕೇಂದ್ರ
ಎಚ್‌.ಡಿ.ಕೋಟೆ
; 1,705;1,714;3,419;12;
ಹುಣಸೂರು; 2,088;2,020;4,108; 15
ಕೆ.ಆರ್‌.ನಗರ; 1,507; 1,489; 2,996; 12
ಮೈಸೂರು ಉತ್ತರ; 3,024; 3,131; 6,155; 23
ಮೈಸೂರು ದಕ್ಷಿಣ; 2,278; 2,258; 4,536; 18
ಮೈಸೂರು ಗ್ರಾಮಾಂತರ; 2,540; 2,427; 4,967; 20
ನಂಜನಗೂಡು; 2,502; 2,278; 4,780; 18
ಪಿರಿಯಾಪಟ್ಟಣ; 1,604; 1,414; 3,018; 12
ತಿ.ನರಸೀಪುರ; 1,806; 1,690; 3,496; 13

* ಖಾಸಗಿ ಅಭ್ಯರ್ಥಿಗಳಿಗೆ ಮೈಸೂರು ಉತ್ತರ ಹಾಗೂ ದಕ್ಷಿಣದಲ್ಲಿ ತಲಾ 2 ಹಾಗೂ ಮೈಸೂರು ಗ್ರಾಮಾಂತರದಲ್ಲಿ ಒಂದು ಸೇರಿ 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT