ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಫ್ರೂಟ್ಸ್‌: ಶೇ 46ರಷ್ಟು ನೋಂದಣಿ ಬಾಕಿ

Published 22 ನವೆಂಬರ್ 2023, 5:52 IST
Last Updated 22 ನವೆಂಬರ್ 2023, 5:52 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಈವರೆಗೆ ಶೇ 54 ರಷ್ಟು ಪ್ಲಾಟ್‌ಗಳು ಮಾತ್ರ ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್) ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದು, ಇನ್ನೂ 46ರಷ್ಟು ನೋಂದಣಿ ಬಾಕಿ ಉಳಿದಿದೆ.

ಜಿಲ್ಲೆಯ 9 ತಾಲ್ಲೂಕುಗಳನ್ನು ರಾಜ್ಯ ಸರ್ಕಾರವು ಬರಪೀಡಿತ ಎಂದು ಘೋಷಿಸಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ವಿತರಣೆಗೂ ಸಿದ್ಧತೆ ನಡೆದಿದೆ. ಬರ ಪರಿಹಾರವು ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾವಣೆ ಆಗಲಿದೆ.

ಜಿಲ್ಲೆಯಲ್ಲಿ ಒಟ್ಟು 11.86 ಲಕ್ಷ ಪ್ಲಾಟ್‌ಗಳು ಭೂಮಿ ತಂತ್ರಾಂಶದಲ್ಲಿ ನೋಂದಣಿ ಆಗಿವೆ. ಇದರಲ್ಲಿ ಸರ್ಕಾರಿ ಜಮೀನು, ಕೃಷಿಯೇತರ ಜಮೀನನು ಹೊರತುಪಡಿಸಿ ಉಳಿದ 10.07 ಲಕ್ಷ ಪ್ಲಾಟ್‌ಗಳನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಾಯಿಸಬೇಕಿದೆ. ಸದ್ಯಕ್ಕೆ 5.68 ಲಕ್ಷ ಪ್ಲಾಟ್‌ಗಳ ನೋಂದಣಿ ಆಗಿದ್ದು, ಇನ್ನೂ 4.38 ಲಕ್ಷ ಪ್ಲಾಟ್‌ಗಳು ನೋಂದಣಿ ಆಗಬೇಕಿದೆ.

ಕಂದಾಯ ಹಾಗೂ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ರೈತರ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಬೇಕು. ಯಾವ ಜಮೀನಿನಲ್ಲಿ ಯಾವ ಬೆಳೆ ಬೆಳೆಯಲಾಗಿದೆ ಎಂಬ ವಿವರ ನಮೂದಿಸಬೇಕು. ಇದನ್ನು ಆಧಾರವಾಗಿ ಇಟ್ಟುಕೊಂಡು ಬೆಳೆ ನಷ್ಟಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಜಮೀನಿನ ವಿಸ್ತೀರ್ಣ ಮತ್ತು ಬೆಳೆಹಾನಿ ಆಧರಿಸಿ ಸರ್ಕಾರವು ಪರಿಹಾರ ಧನವನ್ನು ನೀಡಲಿದೆ.

ಹಿನ್ನಡೆ ಯಾಕೆ?: ‘ವಿಮೆ, ಬೆಳೆ ನಷ್ಟ ಪರಿಹಾರ ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಪ್ರಯೋಜನಕ್ಕಾಗಿ ಪ್ರತಿ ರೈತರು ಫ್ರೂಟ್ಸ್‌ ಐ.ಡಿ. ಮಾಡಿಸುವುದು ಕಡ್ಡಾಯವಾಗಿದೆ. ಸಾಕಷ್ಟು ರೈತರಿಗೆ ತಮ್ಮ ಜಮೀನು ಫ್ರೂಟ್ಸ್‌ನಲ್ಲಿ ನೋಂದಣಿ ಆಗಿದೆಯೇ ಇಲ್ಲವೇ ಎಂಬ ಮಾಹಿತಿ ಇಲ್ಲ. ಹೀಗಾಗಿ ನೋಂದಣಿಗೆ ಹಿನ್ನಡೆ ಆಗಿದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಿ.ಎಸ್. ಚಂದ್ರಶೇಖರ್.

‘ನೋಂದಣಿ ಕುರಿತು ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಗ್ರಾಮಗಳಲ್ಲಿ ಆಟೊ ಪ್ರಚಾರವನ್ನೂ ನಡೆಸಿದ್ದೇವೆ. ಸದ್ಯ ನೋಂದಣಿ ಚುರುಕು ಪಡೆದುಕೊಂಡಿದ್ದು, ಇನ್ನು ಕೆಲವು ದಿನಗಳಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು.

ಬರ ಪರಿಹಾರ ಪಡೆಯಲು ಫ್ರೂಟ್ಸ್‌ ನೋಂದಣಿ ಕಡ್ಡಾಯ. ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಜಮೀನು ನೋಂದಣಿ ಆಗಿದೆಯೇ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು
- ಡಾ. ಬಿ.ಎಸ್. ಚಂದ್ರಶೇಖರ್‌ ಕೃಷಿ ಇಲಾಖೆ ಜಂಟಿ ನಿರ್ದೇಶಕ

ನೋಂದಣಿ ಹೇಗೆ?

ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲು ತಮ್ಮ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಇಲ್ಲವೇ ತೋಟಗಾರಿಕೆ ಕಂದಾಯ ಪಶುಪಾಲನೆ ರೇಷ್ಮೆ ಇಲಾಖೆ ಕಚೇರಿ ಇಲ್ಲವೇ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ. ನೋಂದಣಿ ಸಂದರ್ಭ ರೈತರ ಆಧಾರ್ ಕಾರ್ಡ್‌ ಪ್ರತಿ ಬ್ಯಾಂಕ್‌ ಖಾತೆ ಪುಸ್ತಕದ ಪ್ರತಿ ತಮ್ಮ ಹೆಸರಿನಲ್ಲಿ ಇರುವ ಪಹಣಿ ಮೊಬೈಲ್ ಸಂಖ್ಯೆ ಹಾಗೂ ಜಾತಿ ಪ್ರಮಾಣಪತ್ರದ ಪ್ರತಿಗಳನ್ನು ಸಲ್ಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT