ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಕೋಮು ಸೌಹಾರ್ದ ಸಾರುವ ಜಾತ್ರೆಗೆ 59 ವಸಂತ

ರತ್ನಪುರಿಯಲ್ಲಿ ನಾಳೆಯಿಂದ 27ರವರೆಗೆ ಆಂಜನೇಯಸ್ವಾಮಿ ಉತ್ಸವ, ಹಜರತ್ ಜಮಾಲ್ ಬೀಬೀ ಉರುಸ್
Last Updated 23 ಫೆಬ್ರುವರಿ 2023, 3:56 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಕೋಮು ಸೌಹಾರ್ದದ ಪ್ರತಿಬಿಂಬವಾದ ರತ್ನಪುರಿ ಆಂಜನೇಯಸ್ವಾಮಿ ಪಲ್ಲಕ್ಕಿ ಉತ್ಸವ ಮತ್ತು ಹಜರತ್ ಜಮಾಲ್ ಬೀಬೀ ಮಾ ಸಹೇಬಾ ಉರುಸ್‌ ಆಚರಣೆಗೆ ಸಿದ್ಧತಾ ಕಾರ್ಯಗಳು ಗರಿಗೆದರಿವೆ.

ಹುಣಸೂರು ಕೇಂದ್ರ ಸ್ಥಾನದಿಂದ 12 ಕಿ.ಮೀ ದೂರದಲ್ಲಿರುವ ರತ್ನಾಪುರಿ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಮರು ಒಗ್ಗೂಡಿ ಹಬ್ಬ ಆಚರಿಸುವುದು ವಿಶೇಷ.

ಫೆ.24ರಂದು ಬೆಳಿಗ್ಗೆ 6ಕ್ಕೆ ಪೂಜೆಗಳು ಶುರುವಾಗಲಿದ್ದು, 10ಕ್ಕೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. 25ರಂದು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಧ್ಯಾಹ್ನ 12ಕ್ಕೆ ದಾಸೋಹ, 3ಕ್ಕೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ, ಸಂಜೆ ಆಂಜನೇಯಸ್ವಾಮಿ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. 26ರಂದು ರಾತ್ರಿ ಜಮಾಲ್ ಬೀಬೀ ಉರುಸ್ ಮತ್ತು ಗಂಧೋತ್ಸವವು ನಡೆಯಲಿದೆ. ಬಳಿಕ, ಜಾತ್ರೆಗೆ ತೆರೆ ಬೀಳಲಿದೆ.

ದನಗಳ ಜಾತ್ರೆ: ಜಾತ್ರೆ ಮೈದಾನಕ್ಕೆ ರಾಸುಗಳು ಬಂದಿದ್ದು, ವ್ಯಾಪಾರ ವಹಿವಾಟು ನಡೆದಿದೆ. ಜಿಲ್ಲೆಯಲ್ಲೇ ಅತಿ ದೊಡ್ಡ ದನಗಳ ಜಾತ್ರೆ ಎಂಬ ಖ್ಯಾತಿಯೂ ಇದೆ.

ಜಮಾಲಾ ಬೀಬೀ ದರ್ಗಾ ಮುಖಂಡ ಅಜ್ಗರ್ ಪಾಶಾ ಮಾತನಾಡಿ, ‘ರತ್ನಪುರಿ ಜಾತ್ರೆ ಜಿಲ್ಲೆಗೆ ಮಾದರಿಯಾಗಿದೆ. ಹಿಂದೂ ಮತ್ತು ಮುಸ್ಲಿಮರು ಒಗ್ಗೂಡಿ ಜಾತ್ರೆಯನ್ನು ನಡೆಸುತ್ತೇವೆ’ ಎಂದರು.

ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಪ್ರಭು ಮಾತನಾಡಿ, ‘59ನೇ ಆಂಜನೇಯಸ್ವಾಮಿ ಪಲ್ಲಕ್ಕಿ ಉತ್ಸವ ಆಚರಣೆಗೆ ಸಿದ್ಧತೆ ನಡೆದಿದೆ. ದೇವಸ್ಥಾನ ಮತ್ತು ದರ್ಗಾ ಜಾತ್ರಾ ಮೈದಾನಕ್ಕೆ ಹೊಂದಿಕೊಂಡಿದ್ದು, ಈ ಭಾಗದ ಜನ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಮಾಡಿಸುವ ಸಂಪ್ರದಾಯವಿದೆ. ಅದೇ ರೀತಿ ಆಂಜನೇಯ ಉತ್ಸವದಲ್ಲಿ ಮುಸ್ಲಿಮರು ಭಾಗವಹಿಸುತ್ತಾರೆ’ ಎಂದರು.

₹2 ಕೋಟಿ ವೆಚ್ಚದಲ್ಲಿ ದರ್ಗಾ ಅಭಿವೃದ್ಧಿ

‘ಜಮಾಲಾ ಬೀಬೀ ದರ್ಗಾ ಅಭಿವೃದ್ಧಿಗೆ ಶಾಸಕ ಎಚ್.ಪಿ.ಮಂಜುನಾಥ್ ₹7 ಲಕ್ಷ ಅನುದಾನ ನೀಡಿದ್ದಾರೆ. ಸಮಾಜದವರಿಂದ ದೇಣಿಗೆ ಸಂಗ್ರಹಿಸಿ ಅಂದಾಜು ₹ 2 ಕೋಟಿ ವೆಚ್ಚದಲ್ಲಿ ದರ್ಗಾ ಅಭಿವೃದ್ಧಿಪಡಿಸಿದ್ದೇವೆ’ ಎಂದು ದರ್ಗಾ ಅಧ್ಯಕ್ಷ ಮಹಮ್ಮದ್ ಹೈಯತ್ ತಿಳಿಸಿದರು.

ಮುಜರಾಯಿ ಇಲಾಖೆಗೆ ಪ್ರಸ್ತಾವ

‘ಒಂದು ಎಕರೆ ಜಾಗದಲ್ಲಿ ಬೃಹತ್ ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಿಸಲು ಯೋಜನೆಯ ಪ್ರಸ್ತಾವ ಮತ್ತು ಅಂದಾಜು ಪಟ್ಟಿಯನ್ನು ಮುಜರಾಯಿ ಇಲಾಖೆಗೆ ಸಲ್ಲಿಸಲಾಗಿದೆ. ಆದರೆ, ಈವರೆಗೂ ಪ್ರಗತಿ ಕಂಡಿಲ್ಲ’ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT