ಸಂಗೀತಕ್ಕಿದೆ ಶ್ರಮ ಮರೆಸುವ ಶಕ್ತಿ : ಸ್ವಾಮೀಜಿ

ಮೈಸೂರು: ‘ಸಂಗೀತಕ್ಕೆ ಶ್ರಮವನ್ನು ಮರೆಸುವ ಶಕ್ತಿ ಇದೆ’ ಎಂದು ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.
ನಗರದ ಲಕ್ಷ್ಮೀಪುರಂನಲ್ಲಿರುವ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ತ್ಯಾಗರಾಜ, ಪುರಂದರದಾಸ, ಕನಕದಾಸರ ಆರಾಧನಾ ಮಹೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಂಗೀತ ಮತ್ತು ಸಾಹಿತ್ಯ ಎಲ್ಲ ಕಾಲಕ್ಕೂ ಬೇಕಾದುದಾಗಿದೆ. ಇದು ಸಮಾಜಕ್ಕೆ ಉಸಿರಿದ್ದಂತೆ. ಅದನ್ನು ಉಳಿಸಿಕೊಡು ಬಂದವರು ದಾಸ ಸಂಪ್ರದಾಯದಲ್ಲಿ ಬಂದ ಮಹನೀಯರು. ಅವರ ಹೆಸರು ಹೇಳಿಕೊಂಡು, ಕೀರ್ತನೆ ಹಾಡಿಕೊಂಡು ಜೀವನ ನಡೆಸುತ್ತಿರುವವರು ಬಹಳಷ್ಟು ಮಂದಿ ನಮ್ಮ ನಡುವಿದ್ದಾರೆ. ಆ ಹೆಸರಿಗೆ ಅಂತಹ ಶಕ್ತಿ ಇದೆ’ ಎಂದು ಹೇಳಿದರು.
ಸಂದೇಶ ನೀಡುವ ಕೃತಿಗಳು:
‘ದಾಸರ ಸಾಹಿತ್ಯವಿಲ್ಲದೇ ಸಂಗೀತ ಸಭೆ ಇರುವುದಿಲ್ಲ. ದಾಸರ ಪದಗಳಲ್ಲಿ ಅಪಾರ ಶಕ್ತಿ ಇದೆ. ಸಮಾಜಕ್ಕೆ ಬೇಕಾದಷ್ಟು ಸಂದೇಶ ನೀಡುವ ಕೃತಿಗಳಾಗಿವೆ. ಹೀಗಾಗಿಯೇ ಶಾಶ್ವತವಾಗಿ ಉಳಿದಿವೆ’ ಎಂದು ತಿಳಿಸಿದರು.
‘ಕೆಲವು ಸಾಹಿತ್ಯ ಆ ಕ್ಷಣಕ್ಕೆ ಆನಂದ ಕೊಡಬಹುದು. ಆದರೆ, ದಾಸರ ಕೃತಿಗಳು ಇಂದಿಗೂ ಪ್ರಸ್ತುತವಾಗಿವೆ. ಕಷ್ಟವನ್ನು ಮರೆಸುತ್ತವೆ; ನೆಮ್ಮದಿ ಹೆಚ್ಚಿಸುತ್ತವೆ. ಭಗವಂತನ ಸಂಕೀರ್ತನೆಯು ನೆಮ್ಮದಿ ನೀಡುವಂಥದ್ದಾಗಿದೆ. ನಾದೋಪಾಸನೆ ಮಾಡುವುದರಿಂದ ಭಗವಂತನನ್ನು ಸೇರುವುದು ಸುಲಭ. ಏಕೆಂದರೆ, ನಾದದಲ್ಲಿ ದೊಡ್ಡ ಶಕ್ತಿ ಇದೆ. ಅದರಲ್ಲಿ ಮನಸ್ಸನ್ನು ಮುಳುಗಿಸಿದರೆ ಒಳ್ಳೆಯದಾಗುತ್ತದೆ’ ಎಂದು ನುಡಿದರು.
ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ‘ಶಾಸ್ತ್ರೀಯ ಸಂಗೀತ, ಕಲೆಗಳು ಮೌಖಿಕವಾಗಿವೆ. ಅವುಗಳು ಉಳಿಯಬೇಕಾದರೆ ಸಂಶೋಧನೆ ಆಗಬೇಕು ಮತ್ತು ಕೃತಿಗಳು ಉಳಿಯಬೇಕು. ಇದಕ್ಕಾಗಿ, ಸಾಧಕರ ಸಾಧನೆಯ ಕುರುಹುಗಳನ್ನು ಇಲ್ಲಿ ದಾಖಲೀಕರಣ ಮಾಡಬೇಕು ಎನ್ನುವುದು ವಿಶ್ವವಿದ್ಯಾಲಯದ ಉದ್ದೇಶವಾಗಿದೆ. ಏಕೆಂದರೆ, ಮೌಖಿಕ ಪರಂಪರೆ ಬಹಳ ದಿನ ಉಳಿಯುವುದಿಲ್ಲ’ ಎಂದರು.
ಕುಲಸಚಿವ ಪ್ರೊ.ಟಿ.ಎಸ್.ದೇವರಾಜು, ಶಿಕ್ಷಣ ಮಂಡಳಿ ಸದಸ್ಯರಾದ ಮಂಜಪ್ಪ ಹಾಗೂ ವೇಣುಗೋಪಾಲ್ ಇದ್ದರು.
‘ಸಚ್ಚಿದಾನಂದ ಸ್ವಾಮೀಜಿಗೆ ಗೌರವ ಡಾಕ್ಟರೇಟ್’
‘ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡಬೇಕು ಎನ್ನುವುದು ನಮ್ಮ ಅಪೇಕ್ಷೆಯಾಗಿದೆ. ಬಹಳಷ್ಟು ವಿ.ವಿ.ಗಳು ಕೊಟ್ಟಿವೆ. ಇಲ್ಲೂ ನೀಡುವುದು ವಿ.ವಿ.ಯೇ ಹೆಮ್ಮೆ ಪಡುವಂಥದ್ದು’ ಎಂದು ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
‘ಸಂಗೀತ ವಿಶ್ವವಿದ್ಯಾಲಯದ ಬೆಳವಣಿಗೆಗೆ ಆಶ್ರಮದಿಂದ ಸಹಕಾರ ನೀಡಲಾಗುವುದು’ ಎಂದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ‘ಸ್ವಾಮೀಜಿಗೆ ಮುಂಬರುವ ಘಟಿಕೋತ್ಸವದಲ್ಲೇ ಗೌರವ ಡಾಕ್ಟರೇಟ್ ನೀಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದು’ ಎಂದು ತಿಳಿಸಿದರು.
ಮಾದರಿಯಾಗಿದೆ
ದಾಸರ ಆರಾಧನೆಯನ್ನು ಬಿಡಿ ಬಿಡಿಯಾಗಿ ಮಾಡುವುದನ್ನು ನೋಡಿದ್ದೇವೆ. ಆದರೆ, ಇಲ್ಲಿ ತ್ಯಾಗರಾಜ, ಪುರಂದರದಾಸ, ಕನಕದಾಸರ ಆರಾಧನೆಯನ್ನು ಒಟ್ಟಿಗೆ ನಡೆಸುತ್ತಿರುವುದು ಮಾದರಿಯಾಗಿದೆ.
–ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಗಣಪತಿ ಸಚ್ಚಿದಾನಂದ ಆಶ್ರಮ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.