ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಶೋಕಪುರಂ ರೈಲು ನಿಲ್ದಾಣ: ಹೊಸ ಪ್ರವೇಶ ದ್ವಾರ ಅನಾವರಣ

Published 4 ಮಾರ್ಚ್ 2024, 14:48 IST
Last Updated 4 ಮಾರ್ಚ್ 2024, 14:48 IST
ಅಕ್ಷರ ಗಾತ್ರ

ಮೈಸೂರು: ಅಶೋಕಪುರಂ ನಿಲ್ದಾಣವು ಮೈಸೂರಿನ ಎರಡನೇ ದೊಡ್ಡ ರೈಲು ನಿಲ್ದಾಣವಾಗಿ ಹೊರಹೊಮ್ಮಿದ್ದು, ಇಲ್ಲಿಂದಲೇ ಆರು ಪ್ರಮುಖ ರೈಲುಗಳ ಸಂಚಾರ ಆರಂಭಕ್ಕೆ ಮನವಿ ಮಾಡಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ನಗರದ ಅಶೋಕಪುರಂ ರೈಲು ನಿಲ್ದಾಣದಲ್ಲಿ ₹37.5 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿಗಳು, ರೈಲ್ವೆ ಯಾರ್ಡ್, ಎರಡನೇ ಪ್ರವೇಶ ದ್ವಾರ ಹಾಗೂ ಹೊಸತಾಗಿ ನಿರ್ಮಿಸಲಾದ ಪಾದಚಾರಿ ಮೇಲ್ಸೆತುವೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ನಾಲ್ಕು ಮೆಮು ರೈಲುಗಳ ಜೊತೆಗೆ ಚೆನ್ನೈಗೆ ತೆರಳುವ ಕಾವೇರಿ ಎಕ್ಸ್ ಪ್ರೆಸ್ ಮತ್ತು ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಇಲ್ಲಿಂದಲೇ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ತಿರುಪತಿ ಎಕ್ಸ್‌ಪ್ರೆಸ್‌ ರೈಲು ಅಶೋಕಪುರಂನಲ್ಲಿ ನಿಲ್ಲುವಂತೆಯೂ ಕೋರಲಾಗಿದೆ’ ಎಂದರು.

ನವೀಕೃತ ನಿಲ್ದಾಣದಲ್ಲಿ ಐದು ಪ್ಲಾಟ್‌ಫಾರ್ಮ್‌ಗಳನ್ನು ಈಗಾಗಲೇ ನಿರ್ಮಿಸಿದ್ದು, ಶೀಘ್ರದಲ್ಲೇ ಆರನೇ ಪ್ಲಾಟ್‌ಫಾರ್ಮ್‌ ನಿರ್ಮಾಣ ಆಗಲಿದೆ. ಮೈಸೂರಿಗೆ ಬರುವ ರೈಲುಗಾಡಿಗಳನ್ನು ಚಾಮರಾಜನಗರ ಕಡೆಗೆ ವಿಸ್ತರಿಸಬಹುದಾಗಿದೆ. ಸ್ಟೇಬ್ಲಿಂಗ್ ಲೈನ್ ನಿರ್ಮಿಸಲಾಗಿದ್ದು , ಇದರಿಂದ ರೈಲುಗಳನ್ನು ಈ ಜಾಗದಲ್ಲಿ ನಿಲುಗಡೆ ಮಾಡಲು ಅವಕಾಶವಾಗುತ್ತದೆ. ಜನರ ಅನುಕೂಲಕ್ಕಾಗಿ ಎಕ್ಸಲೇಟರ್‌ ಮೊದಲಾದ ಸೌಲಭ್ಯಗಳನ್ನೂ ಹಂತಹಂತವಾಗಿ ಕಲ್ಪಿಸಲಾಗುವುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಟಿ.ಎಸ್. ಶ್ರೀವತ್ಸ ‘ಅಶೋಕಪುರಂ ರೈಲ್ವೆ ನಿಲ್ದಾಣದ ಬಳಿ ಸಂಜೆಯಾದರೆ ಜನರು ಓಡಾಡಲು ಭಯಪಡುತ್ತಿದ್ದರು. ಕಸ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಇದೀಗ ನಿಲ್ದಾಣಕ್ಕೆ ಕಾಯಕಲ್ಪ ಸಿಕ್ಕಿದೆ. ಮುಖ್ಯ ರೈಲ್ವೆ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಆಗಲಿದೆ’ ಎಂದರು.

ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್, ಹೆಚ್ಚುವರಿ ವ್ಯವಸ್ಥಾಪಕ ವಿನಾಯಕ್ ನಾಯಕ್, ರೈಲ್ವೆ ಎಂಜಿನಿಯರ್ ರವಿಚಂದ್ರ, ವಿಭಾಗೀಯ ಎಂಜಿನಿಯರ್‌ ಕೇಶವಮೂರ್ತಿ, ಮಾಜಿ ಮೇಯರ್‌ ಶಿವಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT