ಶನಿವಾರ, ಡಿಸೆಂಬರ್ 3, 2022
20 °C

ಅರಮನೆ ಮಾದರಿಯೇ ಹೊರತು, ಧರ್ಮದ ಆಧಾರದ್ದಲ್ಲ: ಬಿಜೆಪಿ ಶಾಸಕ ರಾಮದಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಪಾರಂಪರಿಕ ನಗರಿಯ ಮಹತ್ವ ಸಾರುವ ಉದ್ದೇಶದಿಂದ, ಕೃಷ್ಣರಾಜ ಕ್ಷೇತ್ರದಲ್ಲಿ ತಂಗುದಾಣಗಳನ್ನು ಅರಮನೆಯ ವಿನ್ಯಾಸದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆಯೇ ಹೊರತು, ಯಾವುದೇ ಧರ್ಮದ ಆಧಾರದಲ್ಲಲ್ಲ’ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ.

‘ನಿಲ್ದಾಣದ ಮೇಲೆ ಗುಂಬಜ್‌ ವಿನ್ಯಾಸ ಮಾಡಲಾಗಿದೆ’ ಎಂಬ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಮಂಗಳವಾರ ಪ್ರಕಟಣೆ ನೀಡಿರುವ ಅವರು, ‘ವಿನ್ಯಾಸವನ್ನು ತಪ್ಪಾಗಿ ಅರ್ಥೈಸಿಕೊಂಡು ಮಸೀದಿಯಂತೆ ನಿರ್ಮಿಸಲಾಗುತ್ತಿದೆ ಹಾಗೂ ಗುತ್ತಿಗೆದಾರ ಮುಸ್ಲಿಂ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸುವ ಹುನ್ನಾರ ಗಮನಕ್ಕೆ ಬಂದ ಕೂಡಲೇ ಸೂಕ್ತ ಕ್ರಮಕ್ಕಾಗಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ದೂರು ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.

‘ನಗರದಲ್ಲಿ ಈಗಾಗಲೇ ಹಲವೆಡೆ ಇದೇ ಮಾದರಿಯ ತಂಗುದಾಣಗಳಿವೆ. ಅದೇ ಮಾದರಿಯನ್ನು ನಾವೂ ಅನುಸರಿಸಿದ್ದೇವೆ. ಸಂಸದ ಪ್ರತಾಪ ಸಿಂಹ ಹೇಳಿಕೆ ನಂತರ ರಾತ್ರೋರಾತ್ರಿ ಕಳಶ ಅಳವಡಿಸಿಲ್ಲ. ಕಳೆದ ವಾರವೇ ಹಾಕಲಾಗಿದೆ. ಮಹದೇವ್ ಎಂಬ ಗುತ್ತಿಗೆದಾರ ಇದನ್ನು ನಿರ್ಮಿಸುತ್ತಿದ್ದಾರೆ. ಎಲ್‌ಇಡಿ ಪರದೆ ಅಳವಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನೂ ತಿಳಿಸಲಾಗುವುದು. ಕಾಮಗಾರಿ ಪ್ರಗತಿಯಲ್ಲಿದೆ’ ಎಂದಿದ್ದಾರೆ.

‘ವಿನ್ಯಾಸವನ್ನು ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಬರೆಯಲಾಗಿದೆ. ವಿವಾದವಾಗಲಿದೆ ಎನ್ನುವುದು ಅಥವಾ ತಪ್ಪಿದೆ ಎಂಬುದನ್ನು ಸಮಿತಿಯು ಹೇಳಿದರೆ ಬದಲಾಯಿಸಲು ನಮ್ಮ ಅಭ್ಯಂತರವೇನಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು