ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysuru Dasara 2023: ಫಿರಂಗಿ ಆರ್ಭಟ, ಅಭಿಮನ್ಯು ‘ಧ್ಯಾನ’!

2ನೇ ಸುತ್ತಿನ ಕುಶಾಲತೋಪು ತಾಲೀಮು; 9 ಆನೆ, 27 ಕುದುರೆಗಳು ಭಾಗಿ
Published 14 ಅಕ್ಟೋಬರ್ 2023, 5:36 IST
Last Updated 14 ಅಕ್ಟೋಬರ್ 2023, 5:36 IST
ಅಕ್ಷರ ಗಾತ್ರ

ಮೈಸೂರು: ಭೂಮಿ ನಡುಗುವಂತೆ ಫಿರಂಗಿಗಳಲ್ಲಿ ಹೊಮ್ಮುತ್ತಿದ್ದ ಸಿಡಿಮದ್ದಿನ ‘ಕುಶಾಲತೋಪಿ’ಗೆ ‘ಅನುಭವಿ’ ಆನೆಗಳು ಅಂಜಲಿಲ್ಲ. ‘ಕ್ಯಾಪ್ಟನ್‌’ ಅಭಿಮನ್ಯು ಧ್ಯಾನ ಸ್ಥಿತಿಯಲ್ಲಿದ್ದ! 

ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಕುಶಾಲತೋಪಿನ ತಾಲೀಮು ಯಶಸ್ವಿಯಾಗಿ ನೆರವೇರಿತು. ಮೊದಲ ತಾಲೀಮಿನಲ್ಲಿ ಹೆದರಿದ್ದ ಆನೆಗಳು ಈ ಬಾರಿ ಎದೆ ನಡುಗಿಸುವ ಶಬ್ದಕ್ಕೆ ಬೆದರದೇ ಆನೆಪ್ರಿಯರಲ್ಲಿ ಆತ್ಮವಿಶ್ವಾಸದ ಪುಳಕ ಉಂಟು ಮಾಡಿದವು. ‌

ಜಂಬೂಸವಾರಿಯ ದಿನವಾದ ವಿಜಯದಶಮಿಯಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ 21 ಸುತ್ತಿನ ಕುಶಾಲತೋ‍ಪು ಸಿಡಿಸುವಾಗ ಆನೆ, ಕುದುರೆಗಳನ್ನು ಬೆಚ್ಚದಂತೆ ಮಾಡಲು 2ನೇ ಪೂರ್ವಾಭ್ಯಾಸ ನೀಡಲಾದ ತಾಲೀಮಿನಲ್ಲಿ ಗಜಪಡೆಯ 9 ಆನೆಗಳು ಹಾಗೂ ಅಶ್ವಾರೋಹಿ ದಳದ 27 ಕುದುರೆಗಳು ಭಾಗವಹಿಸಿದ್ದವು. 

9 ಆನೆಗಳೂ ಫಿರಂಗಿಯ ಆರ್ಭಟಕ್ಕೆ ಬೆಚ್ಚದೆ, ಸೊಂಡಿಲು ಎತ್ತಿ ಮುಂದೆ ಚಲಿಸುತ್ತಾ ಧೈರ್ಯ ತೋರಿದರೆ, ಅಶ್ವದಳದ ಕೆಲ ಕುದುರೆಗಳು ಬೆದರಿ ಅತ್ತಿಂದಿತ್ತ, ಇತ್ತಿಂದತ್ತ ಕೊಸರಾಡಿದವು. ಅಶ್ವದಳದ ಸಿಬ್ಬಂದಿ ಅವುಗಳನ್ನು ನಿಯಂತ್ರಿಸಿದರು.

ತಾಲೀಮಿಗೂ ಮುನ್ನ ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್ ಅವರಿಂದ ಕುಶಾಲತೋಪು ಸಿಡಿಸುವ ಕಾರ್ಯ ನಿರ್ವಹಿಸುವ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಅನುಮತಿ ಪಡೆದು, ವಿಷಲ್‌ ಊದಿದರು. ಅದರೊಂದಿಗೆ ಕುಶಾಲತೋಪು ತಾಲೀಮು ವಿಧ್ಯುಕ್ತವಾಗಿ ಆರಂಭವಾಯಿತು.

ಫಿರಂಗಿಗೆ ಸಿಡಿಮದ್ದನ್ನು ಹಾಕಿದ ನಂತರ ಅದಕ್ಕೆ ಬೆಂಕಿ ಹೊತ್ತಿಸಲು ರಂಜಕದ ಪುಡಿ ಹಾಕಿ, ಬೆಂಕಿ ತಾಕಿಸಿದೊಡನೆ ಕುಶಾಲತೋಪುಗಳು ಸಿಡಿದವು. ನಂತರ ಮಿಂಚಿನ ವೇಗದಲ್ಲಿ ನೀರಿನಿಂದ ತೇವಗೊಂಡಿದ್ದ ತೆಂಗಿನನಾರಿನಲ್ಲಿ ಮಾಡಿರುವ ‘ಸಿಂಬ’ವನ್ನು ಬ್ಯಾರಲ್‌ಗೆ ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಆರಿಸಿ ತೆಗೆಯಲಾಯಿತು. ಇದೇ ವಿಧಾನವನ್ನು ಮೂರು ಬಾರಿ ಸಿಬ್ಬಂದಿ ಮಾಡಿದರು.

ಅಲುಗಾಡದ ಧನಂಜಯ: ಮೊದಲ ತಾಲೀಮಿನಲ್ಲಿ ಕೊಸರಾಡಿದ್ದ ‘ಭವಿಷ್ಯದ ಅಂಬಾರಿ ಆನೆ’ ಧನಂಜಯ ಅಲುಗಾಡದೇ ನಿಂತು ಧೈರ್ಯ ಪ್ರದರ್ಶಿಸಿದ. ಕ್ಯಾಪ್ಟನ್ ಅಭಿಮನ್ಯು, ಹಿರಿಯ ಮಾಸ್ಟರ್‌ ಅರ್ಜುನ, ಏನೂ ಆಗೇ ಇಲ್ಲ ಎನ್ನುವಂತೆ ನಿಂತಿದ್ದರೆ, ಗೋಪಿ, ಭೀಮ, ವರಲಕ್ಷ್ಮಿ, ವಿಜಯಾ, ಮಹೇಂದ್ರ, ಕಂಜನ್‌ ಒತ್ತರಿಸಿಕೊಂಡು ನಿಂತಿದ್ದವು. ಅರ್ಜುನ, ಅಭಿಮನ್ಯು 3ನೇ ಸುತ್ತಿನ ಸಿಡಿಮದ್ದು ಸಿಡಿಯುವಾಗ ಸೊಂಡಿಲೆತ್ತಿ ಮುಂದಡಿ ಇಡುತ್ತಿದ್ದಂತೆ, ಇವೂ ಅವರನ್ನು ಅನುಸರಿಸಿದವು. 

2ನೇ ತಂಡದ ಆನೆಗಳ ಗೈರು: ಕುಶಾಲತೋಪಿನ 2ನೇ ಹಂತದ ತಾಲೀಮಿಗೆ 5 ಆನೆಗಳು ಬರಲಿಲ್ಲ. ಸುಗ್ರೀವ, ಪ್ರಶಾಂತ, ಲಕ್ಷ್ಮಿ, ರೋಹಿತ್ ಮತ್ತು ಹಿರಣ್ಯ ಮೊದಲ ತಾಲೀಮಿನಲ್ಲಿ ಘೀಳಿಟ್ಟು, ಬೆಚ್ಚಿ ಬೆರಗಾಗಿದ್ದವು. ರೋಹಿತ್ ಆನೆಯಂತೂ ಮಾವುತ, ಕಾವಾಡಿಯನ್ನು ತನ್ನ ಮೇಲೇರಲು ಬಿಡದೇ ಹೈರಾಣ ಮಾಡಿದ್ದ. ಹೀಗಾಗಿ ಈ ಐದೂ ಆನೆಗಳನ್ನು ಕರೆತಂದಿರಲಿಲ್ಲ. 

ಡಿಸಿಪಿ ಎಂ.ಮುತ್ತುರಾಜ್, ಡಿಸಿಎಫ್‌ಗಳಾದ ಸೌರಭ್‌ ಕುಮಾರ್, ಬಸವರಾಜು, ಆರ್‌ಎಫ್‌ಒ ಸಂತೋಷ್‌ ಹೂಗಾರ್‌, ಸಿಬ್ಬಂದಿ ಅಕ್ರಂ, ರಂಗರಾಜು ಇದ್ದರು.

ಫಿರಂಗಿಯಿಂದ ಹೊಮ್ಮಿದ ಬೆಂಕಿಯ ಜ್ವಾಲೆಯ ರೋಚಕ ದೃಶ್ಯ
ಫಿರಂಗಿಯಿಂದ ಹೊಮ್ಮಿದ ಬೆಂಕಿಯ ಜ್ವಾಲೆಯ ರೋಚಕ ದೃಶ್ಯ

‘ಮುಂದಿನ ತಾಲೀಮಿನಲ್ಲಿ ಎಲ್ಲ ಆನೆಗಳೂ ಭಾಗಿ’

‘ಕುಶಾಲತೋಪು ಸಿಡಿಸುವ 2ನೇ ಸುತ್ತಿನ ತಾಲೀಮು ಯಶಸ್ವಿಯಾಗಿದೆ. ಎಲ್ಲಾ ಆನೆಗಳು ಧೈರ್ಯ ಪ್ರದರ್ಶಿಸಿವೆ. ಗಜಪಡೆಯ ಮೊದಲ ತಂಡದಲ್ಲಿದ್ದ 9 ಆನೆಗಳೂ ಭಾಗವಹಿಸಿವೆ. ಮೊದಲ ತಾಲೀಮಿನಲ್ಲಿ ಬೆದರಿದ ಕಾರಣ ಸುರಕ್ಷತೆಯ ದೃಷ್ಟಿಯಿಂದ ಎರಡನೇ ತಂಡದ 5 ಆನೆಗಳನ್ನು ಕರೆತಂದಿಲ್ಲ’ ಎಂದು ಡಿಸಿಎಫ್ ಸೌರಭ್‌ ಕುಮಾರ್ ಹೇಳಿದರು.

‘ಮೂರನೇ ತಾಲೀಮಿನಲ್ಲಿ ಎಲ್ಲಾ ಆನೆಗಳು ಭಾಗವಹಿಸಲಿವೆ. ಪಟ್ಟದ ಆನೆ ನಿಶಾನೆ ಆನೆ ಹಾಗೂ ಶ್ರೀರಂಗಪಟ್ಟಣ ದಸರಾಗೆ ಕಳುಹಿಸುವ ಆನೆಯನ್ನು ಆಯ್ಕೆ ಮಾಡಲಾಗಿದೆ. ಕೆಲದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು’ ಎಂದರು.

‘17ರಂದು 3ನೇ ತಾಲೀಮು’

‘ಅ.17ರಂದು ಮೂರನೇ ಹಾಗೂ ಅಂತಿಮ ತಾಲೀಮು ನಡೆಯಲಿದೆ. ಮಹಿಷ ದಸರಾ ಚಾಮುಂಡಿ ಚಲೋ ಹಿನ್ನೆಲೆಯಲ್ಲಿ ಹೇರಿದ್ದ ನಿಷೇಧಾಜ್ಞೆ ನಡುವೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರಿನ ಜನತೆ ಸಹಕರಿಸಿದ್ದಾರೆ’ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT