ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ವಾದಗಳ ಪರೀಕ್ಷೆಗೆ ಒಳಪಡಿಸಿದ್ದ ಸಿಜಿಕೆ

ರಂಗ ಪುರಸ್ಕಾರ ಸಮಾರಂಭದಲ್ಲಿ ನಟರಾಜ್‌ ಹುಳಿಯಾರ್ ಅಭಿಪ್ರಾಯ
Last Updated 27 ಜೂನ್ 2018, 16:10 IST
ಅಕ್ಷರ ಗಾತ್ರ

ಮೈಸೂರು: ಸಿಜಿಕೆ ಅವರು ಕಮ್ಯುನಿಸ್ಟ್‌ ಸಿದ್ದಾಂತದ ಹಿನ್ನೆಲೆಯಿಂದ ಬಂದವರಾದರೂ ಎಲ್ಲ ವಾದಗಳು ಮತ್ತು ಸಿದ್ಧಾಂತಗಳನ್ನು ಗ್ರಹಿಸಿಕೊಂಡು, ಪರೀಕ್ಷೆಗೆ ಒಳಪಡಿಸಿದ್ದರು ಎಂದು ಚಿಂತಕ ಪ್ರೊ.ನಟರಾಜ್‌ ಹುಳಿಯಾರ್ ಹೇಳಿದರು.

ನೆಲೆ ಹಿನ್ನೆಲೆ ವತಿಯಿಂದ ಬುಧವಾರ ಆಯೋಜಿಸಿದ್ದ ಸಿ.ಜಿ.ಕೆ (ಸಿ.ಜಿ.ಕೃಷ್ಣಸ್ವಾಮಿ) ರಂಗ ಪುರಸ್ಕಾರ, ರಂಗನಮನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಮ್ಯುನಿಸ್ಟ್‌ ವಾದಗಳ ಜತೆಗೆ ಅವರಿಗೆ ಎಲ್ಲ ಪಕ್ಷಗಳ ರಾಜಕೀಯವೂ ಗೊತ್ತಿತ್ತು. ಅವರಿಂದಾಗಿ ಕರ್ನಾಟಕದ ರಂಗಭೂಮಿಯು ಜನಪ್ರಿಯ ರಂಗಭೂಮಿಯಾಗಿ ಬದಲಾಯಿತು ಎಂದು ಬಣ್ಣಿಸಿದರು.

ಸಿಜಿಕೆ ಅವರ ವ್ಯಕ್ತಿತ್ವವು ಜನರ ಮಧ್ಯೆ ಮತ್ತು ಚಳವಳಿಗಳ ನಡುವೆ ಅರಳಿದೆ. ಅವರು ಅನೇಕ ಬಗೆಯ ತಾಕಲಾಟಗಳನ್ನು ಎದುರಿಸಿದ್ದರು ಎಂದರು. ನಿಂತ ನೀರಾಗಿದ್ದ ರಂಗಭೂಮಿಗೆ ಚಲನೆಯ ಶಕ್ತಿ ನೀಡಿದ್ದರು. ಹೊಸ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದರು. ಎಲ್ಲರ ಒಳಗೂ ಒಂದು ಅನುಭವ ಇದೆ. ಅದನ್ನು ರಂಗದ ಮೇಲೆ ತರುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ನೂರಾರು ನಾಟಕಗಳನ್ನು ಸೃಷ್ಟಿ ಮಾಡಿರುವ ಅವರು ಅಷ್ಟೇ ನಾಟಕಗಳನ್ನು ಮಾಡಿಸಲು ಬೇರೆಯವರನ್ನು ಪ್ರೇರೇಪಿಸಿದ್ದಾರೆ. ಎಷ್ಟೋ ಜನರಿಂದ ನಾಟಕಗಳನ್ನು ಬರೆಯಿಸಿದ್ದಾರೆ ಎಂದು ಹೇಳಿದರು.

ಸಿಜಿಕೆ ಅವರು ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಲಿಲ್ಲ ನಿಜ. ಆದರೆ ಇಡೀ ಸಮಾಜಕ್ಕೆ ಅವರು ಮಾರ್ಗದರ್ಶಕರಾಗಿದ್ದರು. ಸ್ಥಾವರರೂಪಿಯಾಗಿದ್ದ ರಂಗಭೂಮಿಯನ್ನು ಜಂಗಮರೂಪಿಯನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ರಂಗಭೂಮಿಯೇ ಒಂದು ಸಂಸ್ಕೃತಿ ಎಂಬುದನ್ನು ಕಲಿಸಿಕೊಟ್ಟರು ಎಂದು ನುಡಿದರು.

ರಂಗಕರ್ಮಿ ಎಚ್‌.ಜನಾರ್ದನ್ ಮಾತನಾಡಿ. ಕಲೆ ಎಂಬುದು ವಾಸ್ತವ. ರಂಗಭೂಮಿಯನ್ನು ಯಾರಿಗೂ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಕೆಲಸಕ್ಕೆ ಮುಂದಾದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಬಿ.ಎಂ.ರಾಮಚಂದ್ರ ಮತ್ತು ಎಚ್‌.ಬಿ.ಯಶೋದಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲಾವಿದರು ‘ಬೆಲ್ಚಿ’ ಬೀದಿನಾಟಕ ಪ್ರದರ್ಶಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಡಿ.ರಾಜಣ್ಣ, ದಲಿತ ಮುಖಂಡ ಗುರುಪ್ರಸಾದ್ ಕೆರಗೋಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT