ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎಂ ನಿತ್ಯ ಪ್ರವಾಸ: ಪೊಲೀಸರ ಪೀಕಲಾಟ

‘ಶಿಷ್ಟಾಚಾರ’ ನಿಯಮ ಜಾರಿ; ವಾಹನ ಸಂಚಾರ ನಿರ್ಬಂಧ; ಸಾರ್ವಜನಿಕರಿಗೂ ಕಿರಿಕಿರಿ
ಆರ್‌. ಜಿತೇಂದ್ರ
Published : 9 ಆಗಸ್ಟ್ 2024, 5:43 IST
Last Updated : 9 ಆಗಸ್ಟ್ 2024, 5:43 IST
ಫಾಲೋ ಮಾಡಿ
Comments

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರೂರು ಮೈಸೂರಿಗೆ ಈಚೆಗೆ ಹೆಚ್ಚು ಪ್ರವಾಸ ಕೈಗೊಳ್ಳುತ್ತಿದ್ದು, ಈ ಸಂದರ್ಭ ‘ಶಿಷ್ಟಾಚಾರ’ ಪಾಲನೆ ಮಾಡುತ್ತಲೇ ಪೊಲೀಸರು ಹೈರಾಣಾಗುತ್ತಿದ್ದಾರೆ. ಕೆಲವೊಮ್ಮೆ ಸಂಚಾರ ನಿರ್ಬಂಧದಿಂದಾಗಿ ಸಾರ್ವಜನಿಕರೂ ಹೆಚ್ಚು ಕಿರಿಕಿರಿ ಅನುಭವಿಸುವಂತಾಗಿದೆ.

ಕಳೆದೊಂದು ತಿಂಗಳ ಅವಧಿಯಲ್ಲಿ ಸಿದ್ದರಾಮಯ್ಯ ಮೈಸೂರಿಗೆ ಹತ್ತಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಅದರಲ್ಲೂ ಈ ವಾರ ಬೆಂಗಳೂರಿಗಿಂತ ಹೆಚ್ಚಾಗಿ ಇಲ್ಲಿಯೇ ಕಾಲ ಕಳೆದಿದ್ದಾರೆ. ಮುಖ್ಯಮಂತ್ರಿ ಬಂದಾಗ ಸಹಜವಾಗಿಯೇ ಜಿಲ್ಲಾಡಳಿತ ಹಾಗೂ ಪೊಲೀಸರು ಶಿಷ್ಟಾಚಾರ ಪಾಲನೆ ಮಾಡುವುದು ಅನಿವಾರ್ಯವಾಗಿದೆ. ಮಂಡಕಳ್ಳಿಯ ವಿಮಾನ ನಿಲ್ದಾಣದಿಂದ ಟಿ.ಕೆ. ಲೇಔಟ್‌ನಲ್ಲಿರುವ ಮುಖ್ಯಮಂತ್ರಿ ನಿವಾಸದವರೆಗೆ 250–300 ಪೊಲೀಸರು ರಸ್ತೆಯಲ್ಲೇ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರೊಟ್ಟಿಗೆ ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರ ಆದಿಯಾಗಿ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ.

ಸಿದ್ದರಾಮಯ್ಯ ಗುರುವಾರ ಮಧ್ಯಾಹ್ನ ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಮಂಡಕಳ್ಳಿಯಿಂದ ತಮ್ಮ ನಿವಾಸಕ್ಕೆ ಕಾರಿನಲ್ಲಿ ತೆರಳಿದರು. ಈ ಮಾರ್ಗದಲ್ಲಿ ಬೆಳಿಗ್ಗೆ 10ರಿಂದಲೇ ಪೊಲೀಸರು ರಸ್ತೆಯಲ್ಲಿ ಕಾವಲು ನಿಂತಿದ್ದರು. ಅದರಲ್ಲೂ ಮಹಿಳಾ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಯಲ್ಲಿ ನಿಂತಿದ್ದರು. ನೀರು– ಶೌಚಾಲಯಗಳ ವ್ಯವಸ್ಥೆಯೂ ಇಲ್ಲದ ಕಡೆ ಹೀಗೆ ಮಹಿಳಾ ಸಿಬ್ಬಂದಿ ಗಂಟೆಗಟ್ಟಲೆ ನಿಂತು ಕಾರ್ಯ ನಿರ್ವಹಿಸಿದರು.

‘ಮುಖ್ಯಮಂತ್ರಿ ಬಂದಾಗಲೆಲ್ಲ ಇದು ಮಾಮೂಲಿ ಎಂಬಂತಾಗಿದೆ. ಬಿಸಿಲು–ಮಳೆ ಎಂಬುದೆಲ್ಲ ಲೆಕ್ಕಕ್ಕಿಲ್ಲ’ ಎಂದು ಅಲ್ಲಿದ್ದ ಸಿಬ್ಬಂದಿ ಗೊಣಗುತ್ತಲೇ ಕರ್ತವ್ಯದಲ್ಲಿ ನಿರತರಾಗಿದ್ದರು.

ಮುಖ್ಯಮಂತ್ರಿ ಪ್ರವಾಸದ ಸಂದರ್ಭ ಶಿಷ್ಟಾಚಾರ ಪಾಲನೆಯಿಂದಾಗಿ ಸಾರ್ವಜನಿಕರ ಸಂಚಾರಕ್ಕೂ ಸಾಕಷ್ಟು ತೊಂದರೆ ಆಗುತ್ತಿದೆ. ಪೊಲೀಸರು ಜಿರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸುವುದರಿಂದ ಪ್ರಮುಖ ವೃತ್ತಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ಪರದಾಡುವುದು ಸಾಮಾನ್ಯವಾಗಿದೆ. ಮುಖ್ಯಮಂತ್ರಿ ಮನೆಯಲ್ಲಿದ್ದ ಸಂದರ್ಭ ಸುತ್ತಮುತ್ತಲಿನ ರಸ್ತೆಗಳ ನಿವಾಸಿಗಳ ಓಡಾಟಕ್ಕೂ ಪೊಲೀಸರು ಅಡ್ಡಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿವೆ.

ಶಿಷ್ಟಾಚಾರ ಕೈಬಿಡಿ: ‘ಮುಖ್ಯಮಂತ್ರಿ ತಮ್ಮ ತವರು ಜಿಲ್ಲೆಗೆ ಬರುವುದು, ಇಲ್ಲಿನ ಜನರೊಂದಿಗೆ ಹೆಚ್ಚು ಬೆರೆಯುವುದು ಉತ್ತಮ ವಿಚಾರ. ಆದರೆ, ಆ ಸಂದರ್ಭದಲ್ಲಿ ಇತರರಿಗೆ ಆಗುವ ಕಿರಿಕಿರಿ ತಪ್ಪಬೇಕು. ಅದರಲ್ಲೂ ಪೊಲೀಸರು ನಾಲ್ಕಾರು ಕಿ.ಮೀ. ಉದ್ದಕ್ಕೂ ರಸ್ತೆಯಲ್ಲಿ ನಿಲ್ಲುವುದು ತಪ್ಪಬೇಕು. ಸೀಮಿತ ಸಂಖ್ಯೆಯ ಪೊಲೀಸರನ್ನು ಇದಕ್ಕೆ ಬಳಸಿಕೊಳ್ಳಬೇಕು. ಜಿರೋ ಟ್ರಾಫಿಕ್‌ ವ್ಯವಸ್ಥೆಗೂ ಕಡಿವಾಣ ಹಾಕಿ, ಜನಸ್ನೇಹಿ ವ್ಯವಸ್ಥೆ ಅಳವಡಿಸಿಕೊಳ್ಳಬೇಕು’ ಎನ್ನುತ್ತಾರೆ ಕುವೆಂಪು ನಗರ ನಿವಾಸಿ ಎಂ. ರಾಮಕೃಷ್ಣ.

ಇನ್ನೆರಡು ದಿನ ಹೆಚ್ಚು ಕಿರಿಕಿರಿ

ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಕಾಂಗ್ರೆಸ್‌ನ ಜನಾಂದೋಲನ ಸಮಾವೇಶ ಹಾಗೂ ಅದೇ ವೇದಿಕೆಯಲ್ಲಿ ಶನಿವಾರ ಬಿಜೆಪಿ–ಜೆಡಿಎಸ್ ವತಿಯಿಂದ ‘ಜನಾಕ್ರೋಶ’ ಸಮಾವೇಶ ನಿಗದಿಯಾಗಿದೆ. ಎರಡೂ ಕಾರ್ಯಕ್ರಮಕ್ಕೆ ಲಕ್ಷ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದ್ದು ಸ್ಥಳೀಯ ನಿವಾಸಿಗಳಿಗೆ ಇದರಿಂದ ಇನ್ನಷ್ಟು ತೊಂದರೆ ಆಗಲಿದೆ. ಎರಡೂ ಸಮಾವೇಶಗಳು ಈಗಲೇ ಚುನಾವಣೆಯನ್ನು ನೆನಪಿಸುವಂತೆ ಇವೆ. ಸರ್ಕಾರದ ಬಹುತೇಕ ಸಚಿವರು ಈಗಾಗಲೇ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಶುಕ್ರವಾರ ಕಾಂಗ್ರೆಸ್ ಸಮಾವೇಶ ಮುಗಿಯುವಷ್ಟರಲ್ಲಿ ಜೆಡಿಎಸ್‌–ಬಿಜೆಪಿ ನಾಯಕರ ದಂಡು ಸಹ ಬರಲಿದೆ. ನಗರದ ಬಹುತೇಕ ಹೋಟೆಲ್‌ಗಳು ರಾಜಕೀಯ ನಾಯಕರಿಂದ ತುಂಬಿವೆ. ಸಮಾವೇಶಗಳ ಹಿನ್ನೆಲೆಯಲ್ಲಿ ಪೊಲೀಸರು ಹಲವು ಮಾರ್ಗಗಳಲ್ಲಿ ರಸ್ತೆ ಸಂಚಾರವನ್ನು ನಿರ್ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT