ಮೈಸೂರು: ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿಯ (ದಿಶಾ) ಸಭೆಯು ಹೆಚ್ಚು ಚರ್ಚೆಗಳಿಲ್ಲದೆ ಎರಡೇ ತಾಸಿನಲ್ಲಿ ಮುಗಿಯಿತು.

ಅಧಿಕಾರಿಗಳು ಯಾವ ಯೋಜನೆ ಬಗ್ಗೆಯೂ ತಮಗೆ ಮಾಹಿತಿ ನೀಡುತ್ತಿಲ್ಲ ಎಂದು ಸಂಸದರಿಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದೂ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅನಾರೋಗ್ಯದ ಕಾರಣಕ್ಕೆ ಹೆಚ್ಚು ಮಾತನಾಡಲಿಲ್ಲ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸ್ವದೇಶಿ ದರ್ಶನ್ ಮತ್ತು ಚಾಮುಂಡಿ ಬೆಟ್ಟದ ಪ್ರಸಾದ್ ಯೋಜನೆಯ ಅನುಷ್ಠಾನದ ಪ್ರಗತಿ ವಿವರ ನೀಡದ್ದಕ್ಕೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಸಾಕಷ್ಟು ಯೋಜನೆಗಳು ಕೇಂದ್ರದ ಅನುದಾನದಲ್ಲಿ ನಡೆಯುತ್ತಿದ್ದರೂ ಅದರ ಪ್ರತಿನಿಧಿಯಾದ ಸಂಸದರಿಗೇ ಮಾಹಿತಿ ನೀಡದಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

ಧ್ವನಿಗೂಡಿಸಿದ ಚಾಮರಾಜನಗರ ಸಂಸದ ಸುನಿಲ್ ಬೋಸ್ ಗುಂಡ್ಲುಪೇಟೆಯಲ್ಲಿ ತಮ್ಮ ಗಮನಕ್ಕೆ ತಾರದೆಯೇ ಕಾಮಗಾರಿಗೆ ಚಾಲನೆ ನೀಡಿದ್ದಕ್ಕೆ ಆಕ್ಷೇಪಿಸಿದರು. ‘ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಸಂಸದರು–ಶಾಸಕರ ಗಮನಕ್ಕೆ ತಂದು, ಶಿಷ್ಟಾಚಾರದಂತೆ ಆಹ್ವಾನಿಸಬೇಕು’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು. ‘ಯಾವುದೇ ಕಾಮಗಾರಿ ಉದ್ಘಾಟನೆಗೆ ಮುನ್ನ ಸಂಸದರ ಗಮನಕ್ಕೆ ತನ್ನಿ’ ಎಂದು ಸಚಿವರೂ ನಿರ್ದೇಶನ ನೀಡಿದರು.

ಬ್ಲಾಕ್ ಸ್ಪಾಟ್: ‘ರಾಷ್ಟ್ರೀಯ ಹೆದ್ದಾರಿ 766 ಹಾಗೂ 275ರಲ್ಲಿ ಒಟ್ಟು 8 ಬ್ಲಾಕ್ಸ್ಪಾಟ್ಗಳನ್ನು ಹೆದ್ದಾರಿ ಪ್ರಾಧಿಕಾರವು ಗುರುತಿಸಿ ಕಾಮಗಾರಿ ಕೈಗೆತ್ತಿಕೊಂಡಿದೆ. ಆದರೆ ಈ ಯೋಜನೆ 10–15 ವರ್ಷ ಹಳೆಯದಾಗಿದ್ದು, ಸದ್ಯ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಹೊಸತಾಗಿ ಯೋಜನೆ ರೂಪಿಸಬೇಕು’ ಎಂದು ಯದುವೀರ್ ಹೇಳಿದರು.

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಹಾಗೂ ಮೂಲ ಸೌಕರ್ಯಗಳ ಸ್ಥಳಾಂತರ ಕುರಿತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ‘ಭೂಸ್ವಾಧೀನ ತ್ವರಿತವಾಗಿ ಪೂರ್ಣಗೊಳಿಸಬೇಕು. ಹೊಸ ರಸ್ತೆ ನಿರ್ಮಾಣ, ವಿದ್ಯುತ್ ಮಾರ್ಗ ಸ್ಥಳಾಂತರ ಹಾಗೂ ಕಾಲುವೆಗಳ ಪುನರ್ವಿನ್ಯಾಸ ಪೂರ್ಣಗೊಳ್ಳುವವರೆಗೆ ಕಾಯದೆ, ರನ್ವೇ ವಿಸ್ತರಣೆಗೆ ಈಗಲೇ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಯದುವೀರ್ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಶೇ 69.33ರಷ್ಟು ಪೂರ್ಣಗೊಂಡಿದ್ದು, ₹896.88 ಕೋಟಿ ವ್ಯಯಿಸಿರುವುದಾಗಿ ಅಧಿಕಾರಿಗಳು ಸಭೆಗೆ ತಿಳಿಸಿದರು. ‘ಈ ಯೋಜನೆ ಕಾಮಗಾರಿ ಸರಿಯಾಗಿ ನಡೆದಿಲ್ಲ. ಕಾಮಗಾರಿಯಿಂದ ಹಾಳಾದ ರಸ್ತೆಗಳನ್ನು ಪುನರ್ ನಿರ್ಮಿಸಿಲ್ಲ. ಜನರ ದೂರು ಹೆಚ್ಚಾಗಿದೆ’ ಎಂದು ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ, ದಿಶಾ ಸಮಿತಿ ಸದಸ್ಯ ಅಶ್ವಿನ್ ಕುಮಾರ್, ಜಿ.ಪಂ. ಸಿಇಒ ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಎಸ್ಪಿ ಎನ್. ವಿಷ್ಣುವರ್ಧನ್ ಪಾಲ್ಗೊಂಡರು. ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹಾಗೂ ಕಾಂಗ್ರೆಸ್ನ ಶಾಸಕರು ಸಭೆಗೆ ಗೈರಾಗಿದ್ದರು.

ಅತಿಥಿ ಶಿಕ್ಷಕರಿಂದ ಲಂಚ: ಆರೋಪ

‘ಹುಣಸೂರು ಬಿಇಒ ಅತಿಥಿ ಶಿಕ್ಷಕರ ನೇಮಕಕ್ಕೂ ಲಂಚ ಪಡೆಯುತ್ತಿದ್ದಾರೆ. ಸಾರ್ವಜನಿಕ ಸಮಾರಂಭಗಳಿಗೂ ಸಭ್ಯವಾಗಿ ಬರುವುದಿಲ್ಲ’ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಆರೋಪಿಸಿದರು. ಈ ಬಗ್ಗೆ ಪರಿಶೀಲಿಸಿ ವಾರದೊಳಗೆ ವರದಿ ನೀಡುವಂತೆ ಲಕ್ಷ್ಮೀಕಾಂತ ರೆಡ್ಡಿ ಡಿಡಿಪಿಐಗೆ ಸೂಚಿಸಿದರು. ಸಹಿ ನಕಲು: ಪಶುಪಾಲನಾ ಇಲಾಖೆ ಉಪನಿರ್ದೇಶಕರ ಸಹಿಯನ್ನೇ ಫೋರ್ಜರಿ ಮಾಡಿದ್ದು ಈ ಬಗ್ಗೆ ಮಾಹಿತಿ ನೀಡಿದ್ದರೂ ಪ್ರಕರಣ ದಾಖಲಿಸದ ಬಗ್ಗೆ ಹರೀಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಪುರಸ್ಕೃತ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಿಸಬೇಕು. ರೈತರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು
– ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.